ಚಿಟ್ಟೆಯಂತಹ ಕವಯಿತ್ರಿಯಿಂದ ಚಿಟ್ಟೆಯಂತಹ ಪದ್ಯಗಳು

Update: 2017-05-22 18:35 GMT

ಇಂದು ಮಕ್ಕಳ ಸಾಹಿತ್ಯ ಕೃಷಿ ತೀರಾ ಇಳಿಮುಖವಾಗಿದೆ. ಸಾಧಾರಣವಾಗಿ ಮಕ್ಕಳ ಸಾಹಿತ್ಯವನ್ನು ಬರೆಯುವವರು ಹಿರಿಯರೇ ಆಗಿದ್ದಾರೆ ಮತ್ತು ಈ ಹಿರಿಯರು ತಮ್ಮ ತಲೆಮಾರನ್ನು ದೃಷ್ಟಿಯಲ್ಲಿಟ್ಟುಕೊಂಡೇ ಬರೆಯುತ್ತಿರುತ್ತಾರೆ. ಇಂದಿಗೂ ಕೆಲವು ಹಿರಿಯರು ತಮ್ಮ ಮಕ್ಕಳ ಸಾಹಿತ್ಯವನ್ನು ಮುಂದುವರಿಸಿದ್ದಾರೆ. ಆದರೆ ಅವುಗಳಲ್ಲಿ ಹೆಚ್ಚಿನವುಗಳು ಹೊಸತಲೆಮಾರನ್ನು ಮುಟ್ಟುವಲ್ಲಿ ಸೋಲುತ್ತಿದೆ. ಹೊಸ ತಲೆಮಾರು ಬೆಳೆಯುವ ಪರಿಸರ, ಅವರ ಮುಂದೆ ತೆರೆದುಕೊಂಡ ಆಧುನಿಕ ಜಗತ್ತು, ಬದಲಾವಣೆಗೊಂಡಿರುವ ಶಿಕ್ಷಣದ ರೀತಿ ನೀತಿಗಳು ಇವುಗಳನ್ನೆಲ್ಲ ಇಟ್ಟುಕೊಂಡು ಹೊಸ ಮಕ್ಕಳ ಸಾಹಿತ್ಯವೊಂದು ತೆರೆದುಕೊಳ್ಳಬೇಕಾಗಿದೆ. ದೊಡ್ಡವರ ಸಾಹಿತ್ಯದಲ್ಲಾದ ಬದಲಾವಣೆಗಳಂತೆಯೇ ಮಕ್ಕಳ ಸಾಹಿತ್ಯ ಬದಲಾವಣೆಗಳಿಗೆ ತೆರೆದುಕೊಂಡದ್ದು ತೀರಾ ಕಡಿಮೆ.

ನಭಾ ಒಕ್ಕುಂದ ಅವರ ‘ಚಿಟ್ಟೆ’ ಮಕ್ಕಳ ಕವಿತೆಗಳ ಸಂಗ್ರಹ ಕೆಲವು ಕಾರಣಗಳಿಗಾಗಿ ವಿಶಿಷ್ಟವಾಗಿದೆ. ಇದು ಹೈಸ್ಕೂಲಿನ ವಿದ್ಯಾರ್ಥಿನಿಯೊಬ್ಬಳು ಬರೆದ ಪದ್ಯಗಳು. ಅಂದರೆ ಬಾಲ್ಯವನ್ನು ನಿಧಾನಕ್ಕೆ ದಾಟಿ ಪ್ರೌಢಾವಸ್ಥೆಗೆ ತಲುಪುತ್ತಿರುವ ಹಂತದಲ್ಲಿ ವಿದ್ಯಾರ್ಥಿನಿಯಿಂದ ಹೊರಬಿದ್ದಿರುವ ಪದ್ಯಗಳು. ಸಹಜವಾಗಿಯೇ ಸರಳತೆ, ಮುಗ್ಧತೆ ಪ್ರತೀ ಸಾಲಿನಲ್ಲೂ ಎದ್ದು ಕಾಣುತ್ತದೆ. ಗುಬ್ಬಿಗೂಡು, ಹಕ್ಕಿ, ಮೊಲ, ಪಾರಿಜಾತ, ಮನೆಯ ಮುಂದಿನ ಮರ ಮೊದಲಾದ ಸಣ್ಣ ಪದ್ಯಗಳು ತಮ್ಮ ಸರಳತೆಯ ಕಾರಣಕ್ಕಾಗಿ ಸೆಳೆಯುತ್ತದೆ. ‘ಮಳೆಯೇ ಇಲ್ಲ’ ಪದ್ಯದಲ್ಲಿ ಒಂದಿಷ್ಟು ಪುಟ್ಟ ಕವಿ ಬುದ್ಧಿ ಉಪಯೋಗಿಸಿ ಬರೆದಿದ್ದಾರೆ. ‘ಅಮ್ಮ’ ಪದ್ಯದಲ್ಲಿ ಒಂದಿಷ್ಟು ಹಿರಿತನದ ಛಾಯೆಯಿದೆ. ‘ಹೆದರಿಕೆ’ ಪದ್ಯದಲ್ಲೂ ಪ್ರೌಢತೆ ಎದ್ದು ಕಾಣುತ್ತದೆ. ಒಟ್ಟಿನಲ್ಲಿ ಮಕ್ಕಳಿಗಾಗಿ ಮಕ್ಕಳೇ ಪದ್ಯ ಬರೆಯುವುದು, ಅದರಲ್ಲಿ ಹಿರಿಯರು ಹಸ್ತಕ್ಷೇಪ ನಡೆಸದೇ ಇರುವುದು ಒಳ್ಳೆಯ ವಿಷಯವಾಗಿದೆ. ಚಿಲಿಪಿಲಿ ಪ್ರಕಾಶ ಧಾರವಾಡ ಈ ಕೃತಿಯನ್ನು ಅತ್ಯಂತ ಮುದ್ದಾಗಿ ಮುದ್ರಿಸಿದೆ. ಕೃತಿಯ ಮುಖಬೆಲೆ 60 ರೂಪಾಯಿ.

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News