ಸಾಮೂಹಿಕ ವಿವಾಹ ಸಮಾರಂಭದಲ್ಲಿ ಆಹಾರ ಪೂರೈಸಲು ಶಿಕ್ಷಕರ ನಿಯೋಜನೆ ,...!

Update: 2017-05-23 05:34 GMT

ಭೋಪಾಲ್‌, ಮೇ 23:ಮಧ್ಯಪ್ರದೇಶದ ಸಿಂಗ್ರಾವುಲಿ ಜಿಲ್ಲೆಯಲ್ಲಿ ರಾಜ್ಯ ಸರಕಾರ ಪ್ರಾಯೋಜಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಆಹಾರ ಪೂರೈಸಲು ಬಲವಂತವಾಗಿ ಶಿಕ್ಷಕರನ್ನು ನಿಯೋಜಿಸಿದ ಘಟನೆ ಬೆಳಕಿಗೆ ಬಂದಿದೆ.
ಸುಮಾರು 400 ಶಿಕ್ಷಕರನ್ನು ಜಿಲ್ಲಾ ಶಿಕ್ಷಣಾಧಿಕಾರಿಯವರು ಮದುವೆ ಸಮಾರಂಭದಲ್ಲಿ ಆಹಾರ ಪೂರೈಕೆಗೆ ನಿಯೋಜಿಸಿದ್ದರು. ಶಿಕ್ಷಣಾಧಿಕಾರಿ ನಿಲುವನ್ನು ವಿರೋಧಿಸಿದವರಿಗೆ ವಿಲಕ್ಷಣ ಕೆಲಸ ನೀಡಲಾಗಿತ್ತು ಎಂದು ತಿಳಿದು ಬಂದಿದೆ.
ಮುಖ್ಯ ಮಂತ್ರಿ ಕನ್ಯಾದಾನ ಯೋಜನೆಯಲ್ಲಿ 2,390 ಜೋಡಿ ದಾಂಪತ್ಯ ಬದುಕಿಗೆ ಕಾಲಿರಿಸಿದ ಈ ಸಮಾರಂಭ ಶಿಕ್ಷಕರ ನೆರವಿನಲ್ಲಿ ಯಶಸ್ವಿಯಾಗಿದ್ದರೂ ಇದೀಗ ಶಿಕ್ಷಕರನ್ನು ಈ ಕಾರ್ಯಕ್ರಮಕ್ಕೆ ನಿಯೋಜನೆ ಮಾಡಿರುವ ಹಿನ್ನೆಲೆಯಲ್ಲಿ ಹೊಸ ವಿವಾದ ಹುಟ್ಟುಕೊಂಡಿದೆ. ರಾಜ್ಯ ಸರಕಾರದ ಶಿಕ್ಷಣಾಧಿಕಾರಿ ದೀಪಕ್‌ ಜೋಶಿ ಅವರು ಈ ಸಂಬಂಧ ಜಿಲ್ಲಾ ಶಿಕ್ಷಣಾಧಿಕಾರಿ ಅವರಿಂದ ವರದಿ ಕೇಳಿದ್ದಾರೆ. ಮುಖ್ಯ ಮಂತ್ರಿ ಶಿವರಾಜ್‌ ಸಿಂಗ್‌ ಚೌಹಾನ್‌ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಡಿಇಒ ಮೇ ೨೦ರಂದು ಶಿಕ್ಷಕರಿಗೆ ನೀಡಿದ ಆದೇಶದಲ್ಲಿ ಪೂರಿ, ದಾಲ್, ಅನ್ನ ಮತ್ತಿತರ ಖಾದ್ಯಗಳನ್ನು ಯಾರ‍್ಯಾರು ಪೂರೈಸಬೇಕೆಂದು ತಿಳಿಸಲಾಗಿತ್ತು. ಆದರೆ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಶಿಕ್ಷಕರನ್ನು ಆಹಾರ ಪೂರೈಕೆಗೆ ನಿಯೋಜಿಸಿದ ಶಿಕ್ಷಣಾಧಿಕಾರಿಯವರು ನಾಪತ್ತೆಯಾಗಿದ್ದಾರೆ.
"ನಮ್ಮ ಹೆಸರು ಆದೇಶ ಪಟ್ಟಿಯಲ್ಲಿರುವ ಹಿನ್ನೆಲೆಯಲ್ಲಿ ನಮಗೆ ಏನು ಮಾಡಲು ಸಾಧ್ಯ? ನಮಗೆ ಇದರ ವಿರುದ್ಧ ದೂರು ನೀಡಿದರೆ ಪ್ರಯೋಜನ ಇಲ್ಲ. ನಮ್ಮ ಎಲ್ಲ ಸಹೋದ್ಯೋಗಿಗಳು ಪಾಲ್ಗೊಂಡಿದ್ದಾರೆ.ನಮ್ಮನ್ನು  ಮೊದಲ ಬಾರಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಆಹಾರ ಪೂರೈಕೆಗೆ ನಿಯೋಜಿಸಲಾಗಿತ್ತು” ಎಂದು ಮೌರಿ ಟೊಲಾ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಬಲರಾಂ ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.ಸಿಂಗ್ ಅವರಿಗೆ ದಾಲ್ ಪೂರೈಕೆಗೆ ಸೂಚಿಸಲಾಗಿತ್ತು. ಇನ್ನೊಬ್ಬ ಶಿಕ್ಷಕ ಮೋಹನ್‌ಲಾಲ್‌ ಅವರಿಗೆ ಸಲಾಡ್‌ ವಿತರಣೆಗೆ ಆದೇಶ ನೀಡಲಾಗಿತ್ತು. " "ನಮಗೆ ನೀಡಿರುವ ನಾವು ಆದೇಶವನ್ನು ಪಾಲಿಸಿದ್ದೇವೆ ” ಎಂದು ಮೋಹನ್‌ಲಾಲ್‌ ಹೇಳಿದ್ದಾರೆ. 
"ನಾನು ಊರಿನಲ್ಲಿ ಇರಲಿಲ್ಲ. ಆದರೆ ನನಗೆ ಶಿಕ್ಷಕರನ್ನು ಕಾರ್ಯಕ್ರಮಕ್ಕೆ ನಿಯೋಜನೆ ಮಾಡಿರುವುದು ಗೊತ್ತಾಗಿದೆ. ಇದು ಶಿಕ್ಷಕರ ಘನತೆಗೆ ವಿರುದ್ಧವಾದುದು. ಇಂತಹ ಕೆಲಸಕ್ಕೆ ನಿಯೋಜಿಸುವಾಗ ಅಧಿಕಾರಿಗಳು ಹಲವು ಬಾರಿ ಯೋಚಿಸಬೇಕಿತ್ತು” ಎಂದು ಜಿಲ್ಲಾ ಶಿಕ್ಷಕ ಸಂಘದ ಪದಾಧಿಕಾರಿ ನೀರಜ್‌ ದ್ವಿವೇದಿ ಆಂಗ್ಲ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News