ಸೇನೆ ಜೀಪಿನ ಮುಂಭಾಗಕ್ಕೆ ಕಟ್ಟಿಹಾಕಲು ನಾನು ಪ್ರಾಣಿಯೇ?: ಕಾಶ್ಮೀರಿ ಯುವಕನ ಪ್ರಶ್ನೆ

Update: 2017-05-23 05:34 GMT

ಕಾಶ್ಮೀರ, ಮೇ 23: “ಮನುಷ್ಯರನ್ನು ಗುರಾಣಿಯಾಗಿ ಬಳಸಲು ದೇಶದ ಯಾವ ಕಾನೂನು ಅವಕಾಶ ನೀಡುತ್ತದೆ. ಜೀಪಿನ ಮುಂಭಾಗಕ್ಕೆ ಕಟ್ಟಿ ಹಾಕಲು ನಾನು ಪ್ರಾಣಿಯೇ?” ಹೀಗೆಂದು ಪ್ರಶ್ನಿಸಿದ್ದು, ಸೇನೆಯಿಂದ ಜೀಪ್ ಮುಂಭಾಗಕ್ಕೆ ಕಟ್ಟಿಹಾಕಲ್ಪಟ್ಟಿದ್ದ ಕಾಶ್ಮೀರಿ ಯುವಕ.

ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಚಿಲ್ ಗ್ರಾಮದ ನಿವಾಸಿಯಾಗಿರುವ ಫಾರೂಕ್ ದರ್, ಸೇನೆಯಿಂದ ಜೀಪ್ ನ ಮುಂಭಾಗಕ್ಕೆ ಕಟ್ಟಲ್ಪಟ್ಟಿದ್ದರು. ಈ ಘಟನೆಯ ವಿಡಿಯೋ ಹಾಗೂ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತಲ್ಲದೆ, ಸಾಕಷ್ಟು ವಿರೋಧಗಳೂ ವ್ಯಕ್ತವಾಗಿತ್ತು.

“ಭಾರತೀಯ ಕಾನೂನಿನಡಿ ಇದು ನ್ಯಾಯಬದ್ಧವಾಗಿದ್ದರೆ ನಾನು ಏನು ಹೇಳಲು ಸಾಧ್ಯ?, ನನ್ನನ್ನು ಗುರಾಣಿಯಾಗಿ ಬಳಸಿಕೊಂಡು ಸನ್ಮಾನಕ್ಕೆ ಪಾತ್ರರಾದ ಅಧಿಕಾರಿಯ ವಿರುದ್ಧ ದೊಣ್ಣೆ ಹಿಡಿದುಕೊಂಡು ಹೋರಾಡಲು ನನಗೆ ಸಾಧ್ಯವಿಲ್ಲ. ಆದರೆ ಆ ರೀತಿ ಮಾನವ ಗುರಾಣಿಯಾಗಿ ಬಳಸಲು ನಾನು ಪ್ರಾಣಿಯೇ ಎನ್ನುವುದನ್ನಂತೂ ನಾನು ಕೇಳ ಬಯಸಿದ್ದೇನೆ” ಎನ್ನುತ್ತಾರೆ ಫಾರೂಕ್.

ಯುವಕನನ್ನು ಜೀಪ್ ಗೆ ಕಟ್ಟಿಹಾಕಿದ್ದ ಮೇಜರ್ ನಿತಿನ್ ಗೊಗೊಯ್ ಅವರಿಗೆ ಸನ್ಮಾನಿಸಿದ ಸೇನೆಯ ಕಾರ್ಯಕ್ಕೆ ತೀವ್ರ ಪ್ರತಿರೋಧಗಳು ವ್ಯಕ್ತವಾಗುತ್ತಿವೆ.

“ನಿಮ್ಮದೇ ನ್ಯಾಯಾಲಯದ ತೀರ್ಪಿಗೂ ನೀವು ಕಾಯದೆ, ವಿಲಕ್ಷಣ ವರ್ತನೆ ತೋರಿದ ವ್ಯಕ್ತಿಯನ್ನು ಸನ್ಮಾನಿಸುತ್ತಿದ್ದೀರ” ಎಂದು ನ್ಯಾಶನಲ್ ಕಾನ್ಫರೆನ್ಸ್ ವಕ್ತಾರ  ಜುನೈದ್ ಮಟ್ಟೂ ಹೇಳಿದ್ದಾರೆ.

ಘಟನೆಯ ನಂತರ ಫಾರೂಕ್ ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಕುಗ್ಗಿ ಹೋಗಿದ್ದಾರೆ. “ನನ್ನ ಮೊಣಕಾಲು ಹಾಗೂ ಸ್ನಾಯುಗಳಲ್ಲಿ ಇನ್ನೂ ನೋವಿದೆ. ನನ್ನ ಗ್ರಾಮವನ್ನು ಬಿಟ್ಟು ಹೊರಹೋಗಲೂ ಸಾಧ್ಯವಾಗುತ್ತಿಲ್ಲ. ಮನೆಯಿಂದ ಹೊರಬರಬೇಕಾದರೂ ಬೇರೊಬ್ಬರ ಸಹಾಯ ಬೇಕಾಗುತ್ತದೆ” ಎಂದು ಫಾರೂಕ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News