ದಿಲ್ಲಿ : ಭರ್ಜರಿ ಜಯದ ಬೆನ್ನಿಗೇ ಆಪ್ ಎದುರು ಸೋತ ಬಿಜೆಪಿ

Update: 2017-05-23 10:21 GMT

ಹೊಸದಿಲ್ಲಿ, ಮೇ 23 : ಇಂದು ಘೋಷಿತವಾದ ದಿಲ್ಲಿ ಮುನಿಸಿಪಲ್ ಉಪಚುನಾವಣಾ ಫಲಿತಾಂಶದಲ್ಲಿ ಪೂರ್ವ ದಿಲ್ಲಿಯ ಮೌಜ್ಪುರ್ ವಾರ್ಡ್ ನಲ್ಲಿ ಆಮ್ ಆದ್ಮಿ ಪಕ್ಷ ಬಿಜೆಪಿಯನ್ನು ಸೋಲಿಸಿದರೆ, ಕಾಂಗ್ರೆಸ್ ಪಕ್ಷ ಸರೈ ಪಿಪಲ್ ಥಾಲಾ ಕ್ಷೇತ್ರದಿಂದ ಜಯಭೇರಿ ಬಾರಿಸಿದೆ.

ಇದರೊಂದಿಗೆ ದಿಲ್ಲಿಯ ಒಟ್ಟು 272 ವಾರ್ಡುಗಳಲ್ಲಿ ಬಿಜೆಪಿ 184 ವಾರ್ಡುಗಳನ್ನು ತನ್ನದಾಗಿಸಿಕೊಂಡಿದ್ದರೆ, ಎಎಪಿ 47ರಲ್ಲಿ ಹಾಗೂ ಕಾಂಗ್ರೆಸ್ 31 ವಾರ್ಡುಗಳಲ್ಲಿ ಗೆದ್ದಿವೆ. ಇತರರಿಗೆ 10 ಸೀಟುಗಳು ಹೋಗಿವೆ.

ಮೌಜ್ಪುರ್ ವಾರ್ಡಿನಲ್ಲಿ ಆಮ್ ಆದ್ಮಿ ಪಕ್ಷದ ರೇಷ್ಮ ಅವರು 9374 ಮತಗಳನ್ನು ಪಡೆದಿದ್ದು, 8675 ಮತಗಳನ್ನು ಪಡೆದ ಬಿಜೆಪಿಯ ರೇಖಾ ಶರ್ಮ ಅವರನ್ನು 699 ಮತಗಳ ಅಂತರದಿಂದ ಸೋಲಿಸಿದರು. ಈ ವಾರ್ಡ್ ಅನ್ನು ಈ ಹಿಂದೆ ಬಿಜೆಪಿಯ ಸಂಜಯ್ ಜೈನ್ ಅವರು ಪ್ರತಿನಿಧಿಸುತ್ತಿದ್ದರು.

ಸರೈ ಪಿಪಲ್ ಥಾಲಾ ವಾರ್ಡಿನಲ್ಲಿ ಕಾಂಗ್ರೆಸ್ ಪಕ್ಷದ ಮುಕೇಶ್ ಕುಮಾರ್ ಗೋಯೆಲ್ 10,946 ಮತಗಳನ್ನು ಪಡೆದು ವಿಜೇತರಾದರೆ ಬಿಜೆಪಿಯ ಮಂಗತ್ ರಾಮ್ ಶರ್ಮ 8203 ಮತಗಳನ್ನು ಪಡೆದರು. ಗೋಯೆಲ್ ಅವರು ಈ ಹಿಂದೆ ಧೀರ್ಪುರ್ ವಾರ್ಡನ್ನು ಎರಡು ಬಾರಿ ಪ್ರತಿನಿಧಿಸಿದ್ದರು.

ಇಬ್ಬರು ಸಮಾಜವಾದಿ ಪಕ್ಷದ ಅಭ್ಯರ್ಥಿಗಳಾದ ನಸೀಮಾ (ಮೌಜ್ಪುರ್) ಹಾಗೂ ದಿನೇಶ್ ಸಿಂಗ್ (ಸರೈ ಪಿಪಲ್ ಥಾಲಾ) ಅವರ ನಿಧನದಿಂದ ಇಲ್ಲಿ ಉಪಚುನಾವಣೆಗಳು ಕ್ರಮವಾಗಿ ಮೇ 14 ಹಾಗೂ 21ರಂದು ನಡೆದಿತ್ತು. ನಸೀಮಾ ಅವರ ಪುತ್ರಿ ಶಾಹೀನ್ ಹಾಗೂ ದಿನೇಶ್ ಅವರ ಪುತ್ರ ಹಿಮಾಂಶು ಸಿಂಗ್ ಅವರನ್ನು ಸಮಾಜವಾದಿ ಪಕ್ಷ ಉಪಚುನಾವಣೆಯಲ್ಲಿ ಕಣಕ್ಕಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News