ಓದಿನ ಜಾಡು ಹಿಡಿದು...

Update: 2017-05-23 18:25 GMT

ಸಾಹಿತ್ಯ ವಿಮರ್ಶೆ ಹಲವು ದಾರಿಗಳಲ್ಲಿ ಸಾಗುತ್ತಿದೆ. ವಿವಿಧ ಸಾಮಾಜಿಕ ಸ್ತರಗಳ ನೆಲೆಗಳಿಂದ ಸಾಹಿತ್ಯವನ್ನು ಓದುವ ಬಗೆ ಇದೆ. ಈಚಿನ ದಿನಗಳಲ್ಲಿ ಸಾಂಸ್ಕೃತಿಕ ವಿಮರ್ಶೆ ಮುಂಚೂಣಿಯಲ್ಲಿದ್ದಂತೆ ಅನಿಸುತ್ತಿದೆಯಾದರೂ, ಸಾಹಿತ್ಯ ವಿಮರ್ಶೆ ತನ್ನ ದಾರಿಯಲ್ಲಿ ದಣಿದಂತೆ ಕಾಣುತ್ತಿದೆ. ಸಾಹಿತ್ಯವನ್ನು ಓದುವ, ಅರ್ಥೈಸುವ ವಿಧಾನಗಳು ತೆಳುವಾಗುತ್ತಿದೆ. ಇಂತಹ ಸಂದರ್ಭದಲ್ಲಿ ರಂಗನಾಥ ಕಂಟನಕುಂಟೆ ಅವರ ‘ಓದಿನ ಜಾಡು’ ಕೃತಿ ಸಾಹಿತ್ಯ, ಸಂಸ್ಕೃತಿಯನ್ನು ತನ್ನದಾಗಿಸಿಕೊಳ್ಳುವ ದಾರಿಗಳಿಗಾಗಿ ಹುಡುಕಾಟ ನಡೆಸಿದೆ. ಈ ಕೃತಿಯಲ್ಲಿ ಒಟ್ಟು 20 ಲೇಖನಗಳಿವೆ. ಸಾಹಿತ್ಯ ಸೃಷ್ಟಿಯ ಸಾಂಸ್ಕೃತಿಕ ನೆಲೆಗಳು, ಸಂಸ್ಕೃತಿ ವಿಮರ್ಶೆಯಾಗಿ ಸಾಹಿತ್ಯದ ಓದು, ಸಾಂಸ್ಕೃತಿಕ ಓದಿನ ಪರಿಕಲ್ಪನೆಗಳ ತಾತ್ವಿಕ ತೊಡಕು, ಪರಿಕಲ್ಪನೆಗಳ ಅನುವಾದ ಮತ್ತು ವೈಚಾರಿಕತೆಯ ಗೊಂದಲ, ಮಂಟೇಸ್ವಾಮಿ ಪರಂಪರೆಯ ಮುಖಾಮುಖಿಯ ಸವಾಲು, ಜನಪದ ಸಾಹಿತ್ಯದ ಜನಪರತೆಯ ಕುರಿತ ಅನುಮಾನಗಳು, ಕನ್ನಡ ರಾಷ್ಟ್ರೀಯತೆ ಚಿಂತನೆಯ ಹೆಜ್ಜೆಗುರುತುಗಳು, ಕಿರಂ ಕಣ್ಣಲ್ಲಿ ಸಾಹಿತ್ಯದ ಓದು, ಲಂಕೇಶ್-ಚೈತನ್ಯದ ನೆಲೆಗಳ ಶೋಧಕ ಹೀಗೆ ಸಾಹಿತ್ಯವನ್ನು ಬೇರೆ ಬೇರೆ ನೆಲೆಗಳಲ್ಲಿ, ವ್ಯಕ್ತಿಗಳ ಕಣ್ಣಲ್ಲಿ ಅರ್ಥೈಸುವ ಪ್ರಯತ್ನವನ್ನು ಲೇಖಕರು ಈ ಕೃತಿಯಲ್ಲಿ ಮಾಡುತ್ತಾರೆ. ಕನಕನ ಲೋಕದೃಷ್ಟಿಯನ್ನು ವಿವೇಚಿಸುತ್ತಾ ಅದರಲ್ಲಿರುವ ಸಾಂಸ್ಕೃತಿಕ ರಾಜಕಾರಣವನ್ನು ಅವರು ಚರ್ಚಿಸುತ್ತಾರೆ. ಕನಕನನ್ನು ನಮ್ಮ ಕಾಲದ ಜೊತೆಗೆ ಅನ್ವಯಿಸಿ ನೋಡುವುದು ಎಷ್ಟು ಮುಖ್ಯವೋ ಅಷ್ಟೇ ಸಹಜ ಮತ್ತು ಮುಖ್ಯವಾಗಿ ಆತನ ಕಾಲದ ಧರ್ಮದ ಜೊತೆಗೂ ಹೋಲಿಸಿ ಅನ್ವಯಿಸಿ ಅಧ್ಯಯನ ಮಾಡುವ ಅಗತ್ಯವನ್ನು ಹೇಳುತ್ತಾರೆ. ಕನ್ನಡ ಕಥನಗಳಲ್ಲಿ ಭಾಷೆಯ ಬಳಕೆಯ ಬಗ್ಗೆ ಬರೆಯುತ್ತಾ, ಅಸಮಾನತೆಯ ವಿರುದ್ಧ ಹೋರಾಡುವ ಎಲ್ಲರೂ ಅಸಮಾನ ಭಾಷೆಯನ್ನು ಮುರಿದು ಹೊಸ ಭಾಷೆಯನ್ನು ಕಟ್ಟಿಕೊಳ್ಳಲು, ಹೊಸ ನುಡಿಗಟ್ಟನ್ನು ಸೃಷ್ಟಿಸಲು ಯತ್ನಿಸಬೇಕು ಎಂಬ ನಿಲುವು ತಾಳುತ್ತಾರೆ.
ಒಟ್ಟಂದದಲ್ಲಿ ವರ್ತಮಾನವನ್ನು ಕಾಡುತ್ತಿರುವ ಹಲವು ವಿಚಾರಗಳು, ಸಮಸ್ಯೆಗಳು, ನಮ್ಮ ಸಾಹಿತ್ಯ ಸಂಸ್ಕೃತಿಯಲ್ಲಿ ನಡೆಯುತ್ತಿರುವ ಚರ್ಚೆಗಳಲ್ಲಿರುವ ತಾತ್ವಿಕ ತೊಡಕುಗಳ ಹಿನ್ನೆಲೆಯಲ್ಲಿ ಇಲ್ಲಿನ ಬರಹಗಳು ರೂಪು ತಳೆದಿವೆ. ಲಡಾಯಿ ಪ್ರಕಾಶನ ಹೊರತಂದಿರುವ ಕೃತಿಯ ಮುಖಬೆಲೆ 160 ರೂಪಾಯಿ.

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News