ಕ್ರಿಕೆಟ್ ಬೆಟ್ಟಿಂಗ್: ಹಣಕ್ಕಾಗಿ ಬಾಲಕನ ಕೊಲೆ

Update: 2017-05-23 18:49 GMT

ಮಂಡ್ಯ, ಮೇ 23: ಕೆ.ಆರ್.ಪೇಟೆ ಪಟ್ಟಣದ ಬಾಲಕ ಶಶಾಂಕ್ (15) ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಕ್ರಿಕೆಟ್ ಬೆಟ್ಟಿಂಗ್ ದಂಧೆ ಶಶಾಂಕ್‌ನನ್ನು ಬಲಿ ತೆಗೆದುಕೊಂಡಿರುವುದು ತನಿಖೆಯಿಂದ ತಿಳಿದುಬಂದಿದೆ.

ಪಟ್ಟಣದ ಸರಕಾರಿ ಬಡಾವಣೆ ನಿವಾಸಿ 9ನೆ ತರಗತಿ ವಿದ್ಯಾರ್ಥಿ ಶಶಾಂಕ್‌ನ ಶವವು ಪಟ್ಟಣದ ಹೊರವಲಯದ ಹಳ್ಳದ ಬಳಿ ಮೇ 16ರಂದು ಪತ್ತೆಯಾಗಿತ್ತು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಶಶಾಂಕ್‌ನ ನಿಗೂಢ ಸಾವನ್ನು ಬೇಧಿಸಲು ಎಸ್ಪಿ ಸುಧೀರ್‌ಕುಮಾರ್ ರೆಡ್ಡಿ, ನಾಗಮಂಗಲದ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಸಿಪಿಐ ವೆಂಕಟೇಶಯ್ಯ, ಪಟ್ಟಣ ಮತ್ತು ಗ್ರಾಮಾಂತರ ಠಾಣೆಯ ಪಿಎಸ್‌ಐಗಳ ನೇತೃತ್ವದ ತಂಡ ರಚಿಸಿದ್ದರು. ತಂಡವು ಕೊಲೆಯ ರಹಸ್ಯ ಬೇಧಿಸಿದ್ದು, ಕೆ.ಆರ್.ಪೇಟೆ ಪಟ್ಟಣದ ಮಾವನ ಮನೆಯಲ್ಲಿದ್ದುಕೊಂಡು ಡಿಪ್ಲೊಮೋ ಕಲಿಯುತ್ತಿದ್ದ ಮಂಡ್ಯದ ಸ್ವರ್ಣಸಂದ್ರ ಬಡಾವಣೆಯ ದೀಕ್ಷಿತ್(19) ಎಂಬಾತನನ್ನು ಬಂಧಿಸಿದ್ದಾರೆ.

ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಸಿಲುಕಿದ್ದ ದೀಕ್ಷಿತ್, ಬೆಟ್ಟಿಂಗ್‌ನಲ್ಲಿ ಸೋತ ಕಾರಣ ತೇಜಸ್ ಎಂಬಾತನಿಗೆ ಹಣ ಕೊಡಬೇಕಾಗಿತ್ತು. ಹಣ ನೀಡುವಂತೆ ತೇಜಸ್ ಒತ್ತಡ ಹಾಕಿದ್ದರಿಂದ ಕಳ್ಳತನ ನಡೆಸಿ ಹಣ ಹೊಂದಿಸಲು ದೀಕ್ಷಿತ್ ಮುಂದಾಗಿದ್ದಾನೆ.

ಸರಕಾರಿ ಬಡಾವಣೆಗೆ ತೆರಳಿದ ದೀಕ್ಷಿತ್, ಮನೆಯೊಂದರಲ್ಲಿ ಕಳವಿಗೆ ಯತ್ನಿಸಿದಾಗ, ಮನೆಯಲ್ಲಿ ಶಶಾಂಕ್ ಒಬ್ಬನೇ ಇದ್ದಿದ್ದು, ಆತನ ಪೋಷಕರು ಹೊರಗಡೆ ಹೋಗಿದ್ದರು. ಶಶಾಂಕ್‌ನನ್ನು ಕರೆದುಕೊಂಡು ಹಳ್ಳದ ಬಳಿಗೆ ದೀಕ್ಷಿತ್ ತೆರಳಿ, ಅಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಶಶಾಂಕ್‌ನ ಕತ್ತುಹಿಸುಕಿ ಆತನಲ್ಲಿದ್ದ ಮನೆಯ ಕೀ ಕಸಿದುಕೊಂಡು, ಮನೆಗೆ ಬಂದು ರೋಲ್ಡ್ ಗೋಲ್ಡ್ ಬಳೆಗಳು ಹಾಗೂ ಇತರೆ ಕೆಲವು ಬೆಳ್ಳಿಯ ಆಭರಣಗಳನ್ನು ಕಳವು ಮಾಡುತ್ತಾನೆ.
ನಂತರ, ಮತ್ತೆ ಶಶಾಂಕ್ ಇದ್ದಲ್ಲಿಗೆ ತೆರಳಿದ ದೀಕ್ಷಿತ್, ಶಶಾಂಕ್‌ನಿಗೆ ಪ್ರಜ್ಞೆ ಬಂದಿರುವುದನ್ನು ಗಮನಿಸಿ, ಆತನನ್ನು ಉಸಿರುಕಟ್ಟಿಸಿ ಕೊಲೆ ಮಾಡುತ್ತಾನೆ. ನಂತರ, ಶವವನ್ನು ಸೊಪ್ಪಿನಲ್ಲಿ ಮುಚ್ಚಿ ಮನೆಯ ಕೀಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗುತ್ತಾನೆ ಎಂದು ಈ ಬಗ್ಗೆ ಮಾಹಿತಿ ಪಡೆದುಕೊಂಡ ಪೊಲೀಸರು ತಿಳಿಸಿದ್ದಾರೆ. 
ಈ ನಿಗೂಢ ಕೊಲೆಯನ್ನು ಬೇಧಿಸಲು ಮುಂದಾದ ಪೊಲೀಸರ ತಂಡ, ಸರಕಾರಿ ಬಡಾವಣೆ ವ್ಯಾಪ್ತಿಯ ಮೊಬೈಲ್ ಟವರ್‌ನಲ್ಲಿ ದಾಖಲಾಗಿರುವ ದೂರವಾಣಿ ಸಂಖ್ಯೆಗಳನ್ನು ತಪಾಸಣೆ ಮಾಡಿದಾಗ ಕೊಲೆಗಾರ ದೀಕ್ಷಿತ್ ಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News