ವಿಜ್ಞಾನದ ಕಣ್ಣಲ್ಲಿ ವಿಮಾನ

Update: 2017-05-25 18:56 GMT

ಆರೆಸ್ಸೆಸ್‌ನ ಚಿಂತನೆ ದೇಶದಲ್ಲಿ ಗಟ್ಟಿಯಾಗುತ್ತಿರುವಂತೆಯೇ ವಿಜ್ಞಾನ-ಪುರಾಣಗಳ ನಡುವೆ ಕಲಬೆರಕೆ ಆರಂಭವಾಗುತ್ತಿದೆ. ಪುರಾಣದ ರೂಪಕಗಳನ್ನೆಲ್ಲ ವಾಸ್ತವಕ್ಕಿಳಿಸಿ, ಅದನ್ನೇ ವಿಜ್ಞಾನ ಎಂದು ಕಲಿಸಿಕೊಡುವ ಹೊಸತೊಂದು ಶಿಕ್ಷಣ ದೇಶಾದ್ಯಂತ ಬೆಳೆಯುತ್ತಿದೆ. ಭಾರತದ ಪ್ರಾಚೀನತೆಯ ವೈಭವವನ್ನು ಸಾರುವ ನೆಪದಲ್ಲಿ ವಿಜ್ಞಾನಕ್ಕೆ ಅಪಮಾನ ಮಾಡುವ ಕೆಲಸಗಳು ನಡೆಯುತ್ತಿವೆ. ಇತ್ತೀಚೆಗೆ, ಪುರಾತನ ಕಾಲದಲ್ಲೇ ಭಾರತದಲ್ಲಿ ವಿಮಾನಗಳಿದ್ದವು ಎನ್ನುವುದನ್ನು ಕೆಲವರು ವಾದಿಸುತ್ತಿದ್ದಾರೆ. ಅದಕ್ಕೆ ರಾಮಾಯಣದಲ್ಲಿ ಬರುವ ‘ಪುಷ್ಪಕ ವಿಮಾನ’ ಕಲ್ಪನೆಯನ್ನು ಉದಾಹರಣೆಯಾಗಿ ನೀಡುತ್ತಿದ್ದಾರೆ.

ಈ ನಿಟ್ಟಿನಲ್ಲಿ ಜಿ.ಶ್ರೀನಿವಾಸ ಮೂರ್ತಿ ಅವರು ಬರೆದಿ ರುವ ‘ವಿಮಾನ ವಿಜ್ಞಾನ’ ನಮ್ಮಲ್ಲಿರುವ ತಪ್ಪುಕಲ್ಪನೆಗಳನ್ನು ನಿವಾರಿಸುತ್ತದೆ ಮಾತ್ರವಲ್ಲ, ವಿಮಾನ ಹಾರಿದ ಕೌತುಕ ಹಂತಗಳನ್ನು ವಿವರಿಸುತ್ತದೆ. ಮುನ್ನುಡಿಯಲ್ಲಿ ಹೇಳುವಂತೆ ವಿಮಾನದ ಇತಿಹಾಸ, ವಿಮಾನದ ಏರುವಿಕೆ, ಏರುಬಲ, ಒತ್ತಡ, ಹಾರಾಟ ನಿಯಂತ್ರಣಾ ವ್ಯವಸ್ಥೆ, ವಿಮಾನದ ಸ್ಥಿರ ಹಾಗೂ ಅಸ್ಥಿರ ಸ್ಥಿತಿಗಳು, ವಿಮಾನದ ಭಾಗಗಳು ಮತ್ತು ಅವುಗಳ ಕಾರ್ಯಗಳು ಮುಂತಾದ ಅನೇಕ ಉಪಯುಕ್ತ ವಿಚಾರಗಳನ್ನು, ಅತ್ಯಂತ ಸೂಕ್ತ ವಾದ ಚಿತ್ರಗಳೊಡನೆ ವಿಜ್ಞಾನ ಕ್ಷೇತ್ರದ ಪರಿಚಯವೇ ಇಲ್ಲದ ಸಾಮಾನ್ಯ ಓದುಗರಿಗೂ ಚೆನ್ನಾಗಿ ಮನನವಾಗುವಂತೆ ಪುಸ್ತಕದಲ್ಲಿ ತಿಳಿಸಿಕೊಡಲಾಗಿದೆ.

ಮಾನವ ನಿರ್ಮಿತ ಹಾರುವ ಯಂತ್ರಗಳು, ಹಾರಾಟದ ಪ್ರಥಮ ಪ್ರಯತ್ನಗಳು, ರೈಟ್ ಸಹೋದರರ ವಿಮಾನ ವಿನ್ಯಾಸ ಹಾಗೂ ಅಭಿವೃದ್ಧಿಯ ವ್ಯವಸ್ಥಿತ ವೈಜ್ಞಾನಿಕ ವಿಧಾನ, ವಾಯು ವಸ್ತು ಪರಸ್ಪರ ವರ್ತನೆ ಮತ್ತು ಹಾರಾಟಕ್ಕೆ ಅನ್ವಯವಾಗುವ ತತ್ವಗಳು, ವಿಮಾನದ ಹಾರಾಟ ಮತ್ತು ನಿಯಂತ್ರಣದ ಬಗೆ, ವಿಮಾನದ ವ್ಯವಸ್ಥೆಗಳು ಮತ್ತು ಉಪಕರಣಗಳು, ವಿಮಾನ ಯಾನ-ಕಳೆದ ಶತಮಾನದ ಅವಲೋಕನ, ವಿಶ್ವದ ಆಧುನಿಕ ವಿಮಾನಗಳು... ವಿಮಾನದ ಒಳ ಹೊರಗನ್ನು ಅತ್ಯಂತ ಸರಳ ವಾಗಿ, ಸ್ಪಷ್ಟವಾಗಿ ಈ ಪುಸ್ತಕದಲ್ಲಿ ನಿರೂಪಿಸಲಾಗಿದೆ. ವಿಮಾನದ ಮುಂದಿರುವ ಸವಾಲುಗಳನ್ನೂ ಕೊನೆಯಲ್ಲಿ ಚರ್ಚಿಸಲಾಗಿದೆ. ವಿಮಾನದ ಕಾರ್ಯನಿರ್ವಹಣೆ ಮಾಡುವ ತಾಂತ್ರಿಕ ಹಾಗೂ ವೈಜ್ಞಾನಿಕ ಅಂಶಗಲು ಸಹಜವಾಗಿಯೇ ಎಲ್ಲರ ಅಚ್ಚರಿಯ ಹಾಗೂ ಕುತೂಹಲದ ಅಂಶಗಳಾಗಿವೆ. ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಮುಖಬೆಲೆ 75 ರೂಪಾಯಿ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News