ದೇಶಕ್ಕೇ ಮೂರನೇ ಸ್ಥಾನಿ ಬಳಿ ಅಭಿನಂದನಾ ಸಮಾರಂಭಕ್ಕೆ ಹೋಗಲು ದುಡ್ಡಿಲ್ಲ

Update: 2017-06-03 08:53 GMT

ಹೊಸದಿಲ್ಲಿ,ಜೂ.3 : ಇತ್ತೀಚೆಗೆ ಘೋಷಣೆಯಾದ ಯುಪಿಎಸ್ಸಿ ಪರೀಕ್ಷಾ ಫಲಿತಾಂಶದಲ್ಲಿ ದೇಶಕ್ಕೇ ಮೂರನೇ ಸ್ಥಾನ ಪಡೆದ ಆಂಧ್ರಪ್ರದೇಶದ ಶಿಕ್ಷಕ, ಶ್ರೀಕಾಕುಲ ಜಿಲ್ಲೆಯ ಪರಸಂಬ ಗ್ರಾಮದ ಗೋಪಾಲಕೃಷ್ಣ ರೋನಂಕಿಗೆ ಇತ್ತೀಚೆಗೆ ಸಿಬ್ಬಂದಿ ಹಾಗೂ ಆಡಳಿತ ವಿಭಾಗದಿಂದ ದಿಲ್ಲಿಯಲ್ಲಿ ನಡೆಯಲಿರುವ ಅಭಿನಂದನಾ ಸಮಾರಂಭವೊಂದಕೆ ಆಹ್ವಾನ ಬಂದಾಗ ಅವರ ಮುಂದೆ ಮತ್ತೊಂದು ಸವಾಲು ಎದುರಾಗಿತ್ತು.

ತಮ್ಮ ಗ್ರಾಮದಲ್ಲಿ ಬಡ ಕೃಷಿ ಕಾರ್ಮಿಕರಾಗಿರುವ ಹಾಗೂ ಕೇವಲ 36 ಸೆಂಟ್ಸ್ ಭೂಮಿ ಹೊಂದಿರುವ ರೋನಂಕಿ ಅಪ್ಪಾ ರಾವ್ ಹಾಗೂ ರುಕ್ಮಿಣಿಯಮ್ಮ ಅವರ ಪುತ್ರನಾಗಿರುವ ಗೋಪಾಲಕೃಷ್ಣ ಅವರು ಶಿಕ್ಷಕರಾಗಿ ಪಡೆಯುತ್ತಿದ್ದ ವೇತನ ರೂ 25,000 ಆಗಿತ್ತು. ಆದರೆ ಅವರ ಬಳಿ ದಿಲ್ಲಿಗೆ ತೆರಳಲು ಹಣವಿರಲಿಲ್ಲ. ಆದರೂ ಗ್ರಾಮಸ್ಥರೊಬ್ಬರಿಂದ ರೂ 50,000 ಸಾಲ ಪಡೆದ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗಿಯಾಗಿರುವ ತಮ್ಮ ಹಿರಿಯ ಸಹೋದರ ಆರ್ ಕೆ ಕೊಂಡಾ ರಾವ್ ಅವರ ಜತೆ ಪ್ರಥಮ ಬಾರಿಗೆ ವಿಮಾನದಲ್ಲಿ ದಿಲ್ಲಿಗೆ ಪ್ರಯಾಣಿಸಿದರು.

ಮೂವತ್ತು ವರ್ಷದ ರೋನಂಕಿ ಅವರು ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಅವರೊಡನೆ ಹಾಗೂ ಇತರ ಉನ್ನತ ಅಧಿಕಾರಿಗಳೊಂದಿಗೆ ಸಮಾರಂಭದಲ್ಲಿ ಬೆರೆಯಲು ಯಾವುದೇ ಸಂಕೋಚ ಪಡಲಿಲ್ಲ ಹಾಗೂ ತಮ್ಮನ್ನು ‘‘ಸರಕಾರಿ ಶಾಲೆಯ ಉತ್ಪನ್ನ’’ಎಂದು ವರ್ಣಿಸಿದರಲ್ಲದೆ ಆರ್ಥಿಕವಾಗಿ ದುರ್ಬಲ ಕುಟುಂಬದವನಾಗಿರುವುದರಿಂದ ದೂರ ಶಿಕ್ಷಣದ ಮುಖಾಂತರ ಬಿಎಸ್ಸಿ ಮಾಡಿದ್ದಾಗಿಯೂ ಹೇಳಿಕೊಂಡರು.

ಅವರು ತಮ್ಮ ನಾಲ್ಕನೇ ಪ್ರಯತ್ನದಲ್ಲಿ ಐಎಎಸ್ ಪರೀಕ್ಷೆ ತೇರ್ಗಡೆಯಾಗಿದ್ದು ಬಹಳಷ್ಟು ಕಠಿಣ ಎಂದು ಹೇಳಲಾದ ತೆಲುಗು ಸಾಹಿತ್ಯ ವಿಷಯವನ್ನು ಐಚ್ಛಿಕ ವಿಷಯವಾಗಿ ಆಯ್ದುಕೊಂಡಿದ್ದರು. ಮೇಲಾಗಿ ಅವರು ಯಾವುದೇ ಕೋಚಿಂಗ್ ತರಬೇತಿಗೆ ಹೋಗದೆ ಸ್ವತಹ ಅಭ್ಯಸಿಸಿ ಇಷ್ಟು ದೊಡ್ಡ ಸಾಧನೆ ಮಾಡಿದ್ದಾರೆ.

ಯುಪಿಎಸ್ಸಿ ಪರ್ಸನಾಲಿಟಿ ಟೆಸ್ಟ್ ಅನ್ನೂ ಅವರು ತೆಲುಗುವಿನಲ್ಲೇ ನಿರೂಪಣಾಕಾರರೊಬ್ಬರ ಸಹಕಾರದಿಂದ ಪೂರೈಸಿದ್ದರು.

ಐಎಎಸ್ ಅಧಿಕಾರಿಯಾಗಿ ಅವರು ಬಡವರ ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ದುಡಿಯುವುದಾಗಿ ಹೇಳಿದ್ದಾರಲ್ಲದೆ ತಮ್ಮ ಯಶಸ್ಸಿನ ಶ್ರೇಯಸ್ಸು ತಮ್ಮ ಹೆತ್ತವರು ಹಾಗೂ ಸಹೋದರನಿಗೆ ಸಲ್ಲುತ್ತದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News