ಅಂತ್ಯಕ್ರಿಯೆಗೆ ಹಣವಿಲ್ಲದೆ ಮಗಳ ಮೃತದೇಹವನ್ನು ಚರಂಡಿಗೆಸೆದ ತಂದೆ!

Update: 2017-06-04 05:21 GMT
ಹೈದರಾಬಾದ್, ಜೂ.4: ಅಂತ್ಯಕ್ರಿಯೆಯನ್ನು ನಡೆಸಲು ಹಣವಿಲ್ಲದ ಕಾರಣ ತಂದೆಯೊಬ್ಬ ಮಗಳ ಮೃತದೇಹವನ್ನು ಚರಂಡಿಗೆಸೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೈಲಾರ್ ದೇವ್ಪಲ್ಲಿ ಎಂಬಲ್ಲಿ ಘಟನೆ ನಡೆದಿದ್ದು, 45 ವರ್ಷದ ಪೆಂಟಯ್ಯ ಎಂಬಾತ ಹಣವಿಲ್ಲದ ಕಾರಣ ಮಗಳ ಶವವನ್ನು ಚರಂಡಿಗೆಸೆದಿದ್ದ. ಕಳವು ಪ್ರಕರಣವೊಂದರಲ್ಲಿ ಸಿಕ್ಕಿಬಿದ್ದಿದ್ದ ಬಾಲಕಿ ಮನನೊಂದು ಮೇ 5ರಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಮೃತ ಮಗಳ ಅಂತ್ಯಸಂಸ್ಕಾರ ನಡೆಸಲು ಪೆಂಟಯ್ಯನಲ್ಲಿ ಹಣವಿರಲಿಲ್ಲ. ಇದರಿಂದ ದಿಕ್ಕುತೋಚದಂತಾಗಿ ಶವವನ್ನು ಚರಂಡಿಗೆಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಮೇ 31ರಂದು ಕೊಳೆತ ಶರೀರವೊಂದು ಚರಂಡಿಯಲ್ಲಿ ತೇಲುತ್ತಿರುವುದು ಪತ್ತೆಯಾದ ಬಳಿಕ ಘಟನೆ ಬೆಳಕಿಗೆ ಬಂದಿದೆ. “ಕೊಳೆತ ಶರೀರ ತೇಲುತ್ತಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ ನಂತರ ನಾವು ತನಿಖೆ ಆರಂಭಿಸಿದೆವು. ಈ ಸಂದರ್ಭ ಬಾಲಕಿಯೋರ್ವಳು ಕೆಲ ದಿನಗಳಿಂದ ನಾಪತ್ತೆಯಾಗಿರುವ ಮಾಹಿತಿ ಲಭಿಸಿತ್ತು. ಇದರಿಂದಾಗಿ ಬಾಲಕಿಯ ತಂದೆಯನ್ನು ವಿಚಾರಿಸಿದೆವು” ಎನ್ನುತ್ತಾರೆ ಮೈಲಾರ್ ದೇವ್ಪಲ್ಲಿ ಸಬ್ ಇನ್ಸ್ ಪೆಕ್ಟರ್ ನಾಗಾಚಾರಿ. ಬಾಲಕಿ ಮೊಬೈಲ್ ಫೋನ್ ಕದ್ದಿರುವುದಾಗಿ ಕೆಲ ಮಾಧ್ಯಮಗಳೂ ವರದಿ ಪ್ರಕಟಿಸಿದ್ದವು. ಇದರಿಂದ ಮನನೊಂದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಲಾಲ ಹಕ್ಕುಲ ಸಂಘಂನ ಅಚ್ಯುತ ರಾವ್, ಈ ಘಟನೆ ಮಾನವೀಯತೆಗೆ ಕಪ್ಪುಚುಕ್ಕೆ. ಸರಕಾರಗಳು ಗೋವಿನ ರಕ್ಷಣೆಗೆ ಕ್ರಮ ಕೈಗೊಳ್ಳುತ್ತಿದೆ ಹೊರತು ದೇಶದ ಭವಿಷ್ಯವಾಗಿರುವ ಜನರ ಬಗ್ಗೆಯಲ್ಲ” ಎಂದರು. “ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದರೂ ಈ ಬಗ್ಗೆ ಮಾಹಿತಿ ನೀಡಬೇಕಾಗಿತ್ತು. ಮಾಹಿತಿಯನ್ನು ನೀಡದ ತಂದೆಯ ವಿರುದ್ಧ ಪ್ರಕರಣ ದಾಖಲಿಸಲಾಗುವುದು” ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News