ಕರ್ನಾಟಕದಿಂದ ತೆಲಂಗಾಣಕ್ಕೆ ನೀರು ಹರಿಯಲು ತಡೆಯಾದ ಚುನಾವಣೆ!

Update: 2024-04-28 03:01 GMT

ನಾರಾಯಣಪುರ ಅಣೆಕಟ್ಟು Photo: /twitter.com/navin_ankampali 

ಹೈದರಾಬಾದ್: ಪ್ರಸಕ್ತ ಲೋಕಸಭಾ ಚುನಾವಣೆಯ ಪ್ರನಾಳಿಕೆಗಳಲ್ಲಿ ಹವಾಮಾನ ಬದಲಾವಣೆ ಸ್ಥಾನ ಪಡೆದಿಲ್ಲ. ಆದರೆ ಕುಡಿಯುವ ನೀರಿನ ಸಮಸ್ಯೆ ಮಾತ್ರ ಮೇ 13ರಂದು ಮತದಾನ ನಡೆಯುವ ತೆಲಂಗಾಣದಲ್ಲಿ ಪ್ರಮುಖ ರಾಜಕೀಯ ವಿಚಾರವಾಗಿದೆ.

ರಾಜ್ಯದ ಎಲ್ಲ ಜಲಾಶಯಗಳಲ್ಲಿ ನೀರು ಬರಿದಾಗುತ್ತಿದ್ದು, ಕರ್ನಾಟಕ ತನ್ನ ನೆರವಿಗೆ ಧಾವಿಸುತ್ತದೆ ಎಂಬ ನಿರೀಕ್ಷೆ ತೆಲಂಗಾಣದ್ದು. ಕರ್ನಾಟಕ 5 ಟಿಎಂಸಿ (ಸಾವಿರ ದಶಲಕ್ಷ ಘನ ಅಡಿ) ನೀರನ್ನು ಕೃಷ್ಣಾ ನದಿಯ ನಾರಾಯಣಪುರ ಅಣೆಕಟ್ಟಿನಿಂದ ಬಿಟ್ಟರೆ, ಹೈದರಾಬಾದ್ ನಗರದ ನೀರಿನ ಸಮಸ್ಯೆ ಬಗೆಹರಿಯಲಿದೆ.

ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಆಡಳಿತ ಇರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎ.ರೇವನಾಥ್ ರೆಡ್ಡಿ ಕೆಲ ದಿನಗಳ ಹಿಂದೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ ನೆರೆಯ ರಾಜ್ಯದ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಸೂಚಿಸಿದ್ದರು. ಆದರೆ ಇಲ್ಲೂ ಒಂದಷ್ಟು ಸಮಸ್ಯೆಗಳಿವೆ. ಬೆಂಗಳೂರು ಕೂಡಾ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದೆ. ಕರ್ನಾಟಕದಲ್ಲಿ ಮೇ 7ರಂದು ಎರಡನೇ ಹಂತದ ಚುನಾವಣೆ ಮುಗಿದ ಬಳಿಕ, ಪಕ್ಕದ ರಾಜ್ಯಕ್ಕೆ ನೀರು ಹರಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಕೃಷ್ಣ ಕಣಿವೆ ಪ್ರದೇಶದಲ್ಲಿ ಅದರಲ್ಲೂ ಮುಖ್ಯವಾಗಿ ಆಲಮಟ್ಟಿ ಮತ್ತು ನಾರಾಯಣಪುರ ಜಲಾನಯನ ಪ್ರದೇಶಗಳಲ್ಲಿ ಕರ್ನಾಟಕ ಸರ್ಕಾರ ಹಿಂಗಾರು ಬೆಳೆ ರಜೆಯನ್ನು ಘೋಷಿಸಿದೆ. ಕರ್ನಾಟಕ ಈಗ ತೆಲಂಗಾಣಕ್ಕೆ ನೀರು ಹರಿಸಿದರೆ, ಸ್ಥಳೀಯ ರೈತರ ಹಿತಾಸಕ್ತಿಯನ್ನು ಕಡೆಗಣಿಸಿ ಪಕ್ಕದ ರಾಜ್ಯಕ್ಕೆ ನೆರವಾಗುತ್ತಿದೆ ಎಂಬ ಅಸ್ತ್ರವನ್ನು ವಿರೋಧ ಪಕ್ಷಗಳಿಗೆ ನೀಡಿದಂತಾಗುತ್ತದೆ ಎಂಬ ಭೀತಿಯನ್ನು ಅಧಿಕಾರಿಯೊಬ್ಬರು ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಕುಡಿಯುವ ನೀರಿನ ಅಗತ್ಯತೆಗಾಗಿ ಕಾವೇರಿ ನದಿಯನ್ನು ಅವಲಂಬಿಸಿದೆಯೇ ವಿನಃ ಕೃಷ್ಣಾ ನದಿಯನ್ನಲ್ಲ. ಆದರೆ ಈಗ ನೆರೆಯ ರಾಜ್ಯಕ್ಕೆ ನೀರು ಹರಿಸಿದರೆ ಅನಗತ್ಯ ವಿವಾದ ಸೃಷ್ಟಿಸಿದಂತಾಗುತ್ತದೆ ಎಂಬ ಭೀತಿ ಮುಖಂಡರದ್ದು ಎಂದು ಮೂಲಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News