ನೋಟು ಅಮಾನ್ಯ ಎಫೆಕ್ಟ್: ಸಂಸದೀಯ ಸಮಿತಿಯಿಂದ ಊರ್ಜಿತ್ ಪಟೇಲ್ ಗೆ 3ನೇ ಸಮನ್ಸ್

Update: 2017-06-05 07:42 GMT

ಹೊಸದಿಲ್ಲಿ, ಜೂ.5: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಉರ್ಜಿತ್ ಪಟೇಲ್ ಅವರು ನೋಟು ಅಮಾನ್ಯೀಕರಣ ಮತ್ತು ಕ್ಯಾಶ್ ಲೆಸ್ ಆರ್ಥಿಕತೆಯ ಬಗ್ಗೆ ಹಲವಾರು ಪ್ರಶ್ನೆಗಳನ್ನು ಉತ್ತರಿಸಲು ಸಂಸದೀಯ ಸಮಿತಿಯೊಂದರ ಮುಂದೆ ಮೂರನೇ ಬಾರಿಗೆ ಹಾಜರಾಗಲಿದ್ದಾರೆ. ಕ್ಯಾಶ್ ಲೆಸ್ ಆರ್ಥಿಕತೆಯತ್ತ ಸಾಗುವ ಪ್ರಕ್ರಿಯೆ ನಿಧಾನಗೊಂಡಿದೆ ಎಂದು ಇಂಡಿಯನ್ ಬ್ಯಾಂಕ್ ಅಸೋಸಿಯೇಶನ್ ಹೇಳಿಕೊಂಡ ನಂತರ ವಿತ್ತ ಸಂಬಂಧಿತ ಸಂಸದೀಯ ಸಮಿತಿ ಪಟೇಲ್ ಅವರಿಗೆ ಮತ್ತೊಮ್ಮೆ ಸಮನ್ಸ್ ಕಳುಹಿಸಿದೆ.

ನೋಟು ಅಮಾನ್ಯೀಕರಣದ ನಂತರ ವಿಪಕ್ಷಗಳಿಂದ ಸಾಕಷ್ಟು ಟೀಕೆಗೊಳಗಾಗಿರುವ ಪಟೇಲ್ ಈ ಹಿಂದೆ ವಿತ್ತ ಸಮಿತಿ ಹಾಗೂ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯೆದುರು ಹಾಜರಾಗಿದ್ದರು. ‘‘ಇದೀಗ ಮೂರನೇ ಬಾರಿಯೆಂಬಂತೆ ಅವರು ಮುಂದಿನ ವಾರ ವಿತ್ತ ಸಮಿತಿಯ ಮುಂದೆ ಹಾಜರಾಗಿ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡುವ ಸಂಭವವಿದೆ,’’ ಎಂದು ಸಮಿತಿಯ ಸದಸ್ಯರೊಬ್ಬರು ಹೇಳಿದ್ದಾರೆ.

ರಿಸರ್ವ್ ಬ್ಯಾಂಕಿನ ಸ್ವಾಯತ್ತತೆಯ ಬಗ್ಗೆ ಹಲವು ವಿಪಕ್ಷ ನಾಯಕರು ಈಗಾಗಲೇ ಪ್ರಶ್ನಿಸಿದ್ದು ನೋಟು ಅಮಾನ್ಯೀಕರಣ ಆರ್‌ಬಿಐ ನಿರ್ಧಾರವಾಗಿತ್ತೇ ಎಂಬುದನ್ನೂ ಶಂಕಿಸಿದ್ದರು. ಅಮಾನ್ಯೀಕರಣದಿಂದ ದೇಶ ಭವಿಷ್ಯದಲ್ಲಿ ಲಾಭ ಪಡೆಯಲಿದೆ ಎಂದು ಪಟೇಲ್ ಈ ಹಿಂದೆ ಹೇಳಿದ್ದರು.

ಪಾಯಿಂಟ್ ಆಫ್ ಸೇಲ್ಸ್ ಉಪಕರಣ ಖರೀದಿಸಲು ಹಾಗೂ ಹೆಚ್ಚು ಎಟಿಎಂ ಕೇಂದ್ರಗಳನ್ನು ತೆರೆಯಲು ಸಬ್ಸಿಡಿ ನೀಡುವಂತೆ ವಿತ್ತ ಸಮಿತಿಯ ಕಳೆದ ಸಭೆಯಲ್ಲಿ ಸರಕಾರವನ್ನು ಬ್ಯಾಂಕ್ ಅಧಿಕಾರಿಗಳು ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News