ಮಧ್ಯ ಪ್ರದೇಶದಲ್ಲಿ ಭದ್ರತಾಪಡೆಗಳು ನಡೆಸಿದ ಗೋಲಿಬಾರ್‌ ಖಂಡಿಸಿ ರೈತ ಸಂಘಟಣೆಗಳಿಂದ ಪ್ರತಿಬಟನೆ

Update: 2017-06-07 12:03 GMT

ಬಾಗೇಪಲ್ಲಿ,ಜೂ.7; ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರಕಬೇಕೆಂದು ಮತ್ತು ಕೃಷಿಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಮಧ್ಯ ಪ್ರದೇಶದಲ್ಲಿ ರೈತರು ನಡೆಸುತ್ತಿದ್ದ ಮುಷ್ಕರ ಸಂದರ್ಭದಲ್ಲಿ ಭದ್ರತಾಪಡೆಗಳು ನಡೆಸಿದ ಗೋಲಿಬಾರ್‌ಗೆ 5 ರೈತರು ಬಲಿಯಾಗಿರುವುದನ್ನು ಖಂಡಿಸಿ ಬಾಗೇಪಲ್ಲಿ ತಾಲ್ಲೂಕಿನ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕಿಸಾನ್ ಸಭಾ ಇವರ ಸಂಯುಕ್ತ ಆಶ್ರಯದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕೆಪಿಆರ್‌ಎಸ್ ತಾಲ್ಲೂಕು ಸಮಿತಿಯ ಕಾರ್ಯದರ್ಶಿ ಜೆಸಿಬಿ ಮಂಜುನಾಥ್‌ರೆಡ್ಡಿ, ಇಡೀ ದೇಶಕ್ಕೆ ಅನ್ನ ನೀಡುತ್ತಿರುವ ಅನ್ನದಾತನಾಗಿರುವ ರೈತರು ತಮ್ಮ ನ್ಯಾಯುತ ಬೇಢಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶ ಸರಕಾರ ರೈತರ ಮೇಲೆ ನಿರ್ಧಾಕ್ಷಿಣ್ಯವಾಗಿ ಹಲ್ಲೆ ನಡೆಸಿರುವುದು ಸಾಲದು ಎಂಬಂತೆ ಗೋಲಿಬಾರ್ ನಡೆಸಿ ಐದು ಜನ ರೈತರನ್ನು ಬಲಿ ತೆಗೆದುಕೊಂಡು ಹಲವರನ್ನು ಗಾಯಗೊಳಿಸಿರುವುದು ಅತ್ಯಂತ ಅಮಾನೀಯಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ಸಾಲ ಮನ್ನಾ ಮಾಡುವಂತೆ ಕೇಳಿದ ರೈತರ ಮೇಲೆ ಈ ರೀತಿಯ ಗದಾಪ್ರಹಾರ ನಡೆಸುವುದು ನ್ಯಾಯ ಸಮ್ಮತವೇ? ಎಂದು ಪ್ರಶ್ನಿಸಿದ ಅವರು ಈ ದೇಶದಲ್ಲಿ ಲೂಟಿಕೋರರು, ಕಳ್ಳಕಾಕರು ದಳ್ಳಾಳಿಗಳು ಬಲಾಢ್ಯ ಉದ್ದಿಮಿಗಳು ದೇಶದ ಸಂಪತ್ತು ಕೊಳ್ಳೆ ಹೊಡೆಯುತ್ತಿರುವವರ ವಿರುದ್ದ ಕ್ರಮಕ್ಕೆ ಮುಂದಾಗಬೇಕಾದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ಸರಕಾರ ಅಮಾಯಕ ರೈತರ ಮೇಲೆ ಗೋಲಿಬಾರ್ ನಡೆಸುವ ಮೂಲಕ ಇಡೀ ರೈತಾಪಿ ವರ್ಗವನ್ನು ನಿರ್ನಾಮ ಮಾಡುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಅವರು ರೈತರ ಮೇಲೆ ಗೋಲಿಬಾರ್ ಕೃತ್ಯಕ್ಕೆ ಮುಂದಾಗಿರುವ ಬಿಜೆಪಿ ನೇತೃತ್ವದ ಮಧ್ಯಪ್ರದೇಶ ಸರ್ಕಾರವನ್ನು ತಕ್ಷಣ ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವಂತೆ ಆಗ್ರಹಿಸಿದರು.

 ಡಿವೈಎಫ್ಐ ತಾಲ್ಲೂಕು ಅಧ್ಯಕ್ಷ ಹೇಮಚಂದ್ರ ಮಾತನಾಡಿ, ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಾಲ ಮನ್ನಾ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿಯೂ ರೈತರ ಮೇಲೆ ಗೋಲಿಬಾರ್ ನಡೆಸಿ 6 ಮಂದಿ ರೈತರ ಸಾವಿಗೆ ಕಾರಣರಾಗಿದ್ದರು. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ರೈತರ ಮೇಲೆ  ನಿರ್ಧಾಕ್ಷಿಣ್ಯವಾಗಿ ಪ್ರಾಣತೆಗೆಯುತ್ತಿದ್ದರೂ ಪ್ರಧಾನಿ ನರೇಂದ್ರ ಮೌನಕ್ಕೆ ಶರಣಾಗಿರುವುದಕ್ಕೆ ತೀವ್ರವಾಗಿ ಖಂಡಿಸಿದ ಅವರು ರೈತರ ಮೇಲೆ ಗೋಲಿಬಾರ್ ನಡೆಸಿದ ಪೊಲೀಸರನ್ನು ತಕ್ಷಣ ವಜಾ ಮಾಡುವಂತೆ ಹಾಗೂ ಗೋಲಿಬಾರ್‌ಗೆ ಬಲಿಯಾಗಿರುವ ರೈತ ಕುಟುಂಬಗಳಿಗೆ ಒಂದು ಕೋಟಿ ಪರಿಹಾರವನ್ನು ನೀಡುವಂತೆ ಆಗ್ರಹಿಸಿದರು.

ಇದಕ್ಕೂ ಮುನ್ನ ಡಾ.ಎಚ್.ಎನ್.ವೃತ್ತದಿಂದ ಪಟ್ಟಣದ ಮುಖ್ಯರಸ್ತೆಯಲ್ಲಿ ಮೆರವಣಿಗೆಯಲ್ಲಿ ಹೊರಟ ಕೆಪಿಆರ್‌ಎಸ್ ಕಾರ್ಯಕರ್ತರು ಮಧ್ಯಪ್ರದೇಶದ ಸರ್ಕಾರದ ವಿರುದ್ದ ಘೋಷಣೆ ಕೋಗಿದರು. ನಂತರ ಬಸ್ ನಿಲ್ದಾಣದ ಮುಂಭಾಗದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಇದರಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಆಯಿತು.

  ಈ ಪ್ರತಿಭಟನೆಯಲ್ಲಿ ಕೆಪಿಆರ್‌ಎಸ್ ತಾಲ್ಲೂಕು ಅಧ್ಯಕ್ಷ ಎ.ಎನ್.ಶ್ರೀರಾಮಪ್ಪ, ಹಿರಿಯ ಮುಖಂಡ ನಲ್ಲಪರೆಡ್ಡಿಪಲ್ಲಿ ಆರ್. ಚಂದ್ರಶೇಖರರೆಡ್ಡಿ, ಪುರಸಭೆ ಸದಸ್ಯ ಮಹಮದ್ ಆಕ್ರಂ, ಮುಖಂಡರಾದ ಬೂರಗಮಡುಗು ನರಸಿಂಹಪ್ಪ, ಹೆಚ್.ಎನ್.ಚಂದ್ರಶೇಖರರೆಡ್ಡಿ,ಜೈನಾಭೀ, ಗಂಗರಾಜು, ವೆಂಕಟರಾಮಿರೆಡ್ಡಿ, ಎಲ್.ವೆಂಕಟೇಶ್, ಶ್ರೀರಾಮನಾಯಕ್, ಪ್ರಭಾಕರ್‌ರೆಡ್ಡಿ ಕೊಂಡಂವಾರಿಪಲ್ಲಿ ನಾರಾಯಣಸ್ವಾಮಿ ಮತ್ತಿತರರು ಭಾಗವಹಿಸಿದ್ದರು.
.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News