ಜಿಂಕೆಗಳು ಕೊಂಬುಗಳನ್ನು ಹೊಂದುವುದು ಅಪರಾಧವೇ?

Update: 2017-06-10 05:08 GMT

ದೇಶಾದ್ಯಂತ ಬೆಂಕಿಯಂತೆ ಹರಡುತ್ತಿರುವ ಪ್ರತಿಭಟನೆಗಳೇ ಕೇಂದ್ರ ಸರಕಾರದ ಮೂರು ವರ್ಷಗಳ ಸಾಧನೆಗಳನ್ನು ಹೇಳುತ್ತಿವೆ. ಮೋದಿಯ ಯಶಸ್ಸಿನ ಸಂಭ್ರಮಾಚರಣೆಗೆ ಹಾರಿಸಿದ ವಿಜಯೋತ್ಸವದ ಗುಂಡೋ ಎಂಬಂತೆ, ಮಧ್ಯ ಪ್ರದೇಶದಲ್ಲಿ ಪೊಲೀಸರ ಗೋಲಿಬಾರಿಗೆ 6 ಮಂದಿ ರೈತರು ಬಲಿಯಾಗಿದ್ದಾರೆ. ಒಬ್ಬ ರೈತ ಲಾಠಿ ಏಟಿಗೆ ಮೃತಪಟ್ಟಿದ್ದಾನೆ. ರೈತರ ಪ್ರತಿಭಟನೆ ತಮಿಳುನಾಡು, ಮಹಾರಾಷ್ಟ್ರ, ರಾಜಸ್ಥಾನ ಹೀಗೆ ನಿಧಾನಕ್ಕೆ ದೇಶಾದ್ಯಂತ ಹಬ್ಬುತ್ತಿವೆ. ಮಹಾರಾಷ್ಟ್ರದಲ್ಲಿ ರೈತರ ಪ್ರತಿಭಟನೆ ಅಲ್ಲಿನ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆೆ. ರೈತರು ಹಾಲನ್ನು ಬಹಿರಂಗವಾಗಿ ಬೀದಿಗೆ ಚೆಲ್ಲುತ್ತಿರುವ ಹೃದಯವಿದ್ರಾವಕ ದೃಶ್ಯಗಳನ್ನು ನಾವು ನೋಡುತ್ತಿದ್ದೇವೆ. ಮಹಾರಾಷ್ಟ್ರದಲ್ಲಿ ರೈತನೊಬ್ಬ ‘ಮುಖ್ಯಮಂತ್ರಿ ತನ್ನ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಇತ್ಯರ್ಥಗೊಳಿಸುವವರೆಗೆ ನನ್ನ ಅಂತ್ಯ ಸಂಸ್ಕಾರ ಮಾಡಬೇಡಿ’ ಎಂಬ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಷ್ಟಾದರೂ ಸರಕಾರದ ಎದೆ ಕರಗಿಲ್ಲ. ಈ ಎಲ್ಲ ಪ್ರತಿಭಟನೆಗಳನ್ನು ಪೊಲೀಸರ ಲಾಠಿಗಳ ಮೂಲಕವೇ ಇತ್ಯರ್ಥಗೊಳಿಸಬಹುದು ಮತ್ತು ಮಾಧ್ಯಮಗಳನ್ನು ಕೊಂಡುಕೊಳ್ಳುವ ಮೂಲಕ ರೈತರ ಧ್ವನಿ ಹರಡದಂತೆ ತಡೆಯಬಹುದು ಎಂದು ಕೇಂದ್ರ ಸರಕಾರ ಇನ್ನೂ ನಂಬಿಕೊಂಡಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಕೆಡಿಸಿದೆ. ದುರಂತವೆಂದರೆ, ಇಂತಹ ಹೊತ್ತಿನಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೇರಿದ ಮೂರು ವರ್ಷದ ಸಂಭ್ರಮವನ್ನು ಆಚರಿಸಲು ಬಿಜೆಪಿ ಹೊರಟಿದೆ. ನೋಟು ನಿಷೇಧದಿಂದ ಶ್ರೀಸಾಮಾನ್ಯನ ಬದುಕು ಮೂರಾಬಟ್ಟೆಯಾಗಿ ಕೂತಿರುವಾಗ, ಬಿಜೆಪಿ ಯಾವ ಸಂಭ್ರಮವನ್ನು ಆಚರಿಸಲು ಹೊರಟಿದೆ? ಜನರು ಏನನ್ನು ಸಂಭ್ರಮಿಸಬೇಕು? ಅತ್ತ ಕಾಶ್ಮೀರ ಹೊತ್ತಿ ಉರಿಯುತ್ತಿದೆ. ಪದೇ ಪದೇ ನಮ್ಮ ಸೈನಿಕರ ಮೇಲೆ ದಾಳಿ ನಡೆಯುತ್ತಿದ್ದರೂ, ‘‘ಗಡಿ ಭದ್ರವಾಗಿದೆ’’ ಎಂದು ಕೇಂದ್ರ ಸರಕಾರ ಘೋಷಿಸುತ್ತಿದೆ. ಇದೇ ಸಂದರ್ಭದಲ್ಲಿ ದಲಿತರ ಮೇಲಿನ ದೌರ್ಜನ್ಯಗಳೂ ಹೆಚ್ಚುತ್ತಿವೆ. ಉತ್ತರ ಪ್ರದೇಶದಲ್ಲಂತೂ ದಲಿತರು ಮತ್ತು ಮುಸ್ಲಿಮರ ಬದುಕು ಅತಂತ್ರವಾಗಿದೆ. ಕಾನೂನು, ಸರಕಾರ ಕುರುಡಾಗಿ ಕೂತಿರುವಾಗ, ತಮ್ಮ ಮೇಲಿನ ದೌರ್ಜನ್ಯಗಳಿಗೆ ಶ್ರೀಸಾಮಾನ್ಯರೇ ಪ್ರತಿ ಉತ್ತರ ಕೊಡುವಂತಹ ಸನ್ನಿವೇಶ ನಿರ್ಮಾಣವಾಗಿದೆ. ವಿಷಾದನೀಯವೆಂದರೆ, ತಮ್ಮ ಮೇಲೆ ನಡೆಯುವ ದೌರ್ಜನ್ಯವನ್ನು ದಲಿತರೇನಾದರೂ ಪ್ರತಿಭಟಿಸಿದರೆ, ಅವರನ್ನು ಭಯೋತ್ಪಾದಕರೋ ಎಂಬಂತೆ ಬಂಧಿಸಿ ಜೈಲಿಗೆ ತಳ್ಳುವ ಪರಿಪಾಠ ಶುರುವಾಗಿದೆ. ದಲಿತರು ತಮ್ಮ ಮೇಲಿನ ದೌರ್ಜನ್ಯವನ್ನು ಪ್ರತಿಭಟಿಸುವ ಹಕ್ಕನ್ನೂ ಉತ್ತರ ಪ್ರದೇಶದಲ್ಲಿ ಕಳೆದುಕೊಂಡಿದ್ದಾರೆ. ಇದರ ಭಾಗವಾಗಿಯೇ, ಸಹಾರನ್‌ಪುರದಲ್ಲಿ ದೌರ್ಜನ್ಯಕ್ಕೊಳಗಾದ ದಲಿತರ ಪರವಾಗಿ ನಿಂತಿದ್ದ ಚಂದ್ರಶೇಖರ್ ಆಝಾದ್ ರಾವಣ್‌ರನ್ನು ಪೊಲೀಸರು ಬಂಧಿಸಿದ್ದಾರೆ. ಅಷ್ಟೇ ಅಲ್ಲ, ಚಂದ್ರಶೇಖರ್ ಆಝಾದ್‌ನ ಬಂಧನವನ್ನು ಯಾವನೋ ಒಬ್ಬ ಉಗ್ರಗಾಮಿಯನ್ನು ಬಂಧಿಸಿದ ರೀತಿಯಲ್ಲಿ ಕೆಲವು ಮಾಧ್ಯಮಗಳು ವರದಿ ಮಾಡುತ್ತಿವೆ. ಆಝಾದ್‌ರ ಬಂಧನಕ್ಕೆ ಪೊಲೀಸರು ಎಷ್ಟೆಲ್ಲ ಕಷ್ಟಪಟ್ಟರು ಎನ್ನುವ ವಿವರಗಳನ್ನು ಅತ್ಯಾಸಕ್ತಿಯಿಂದ ವರದಿ ಮಾಡುತ್ತಿವೆ. ಆದರೆ ಇದೇ ಸಂದರ್ಭದಲ್ಲಿ ಸಹಾರನ್ ಪುರದಲ್ಲಿ ಠಾಕೂರರು ಅಲ್ಲಿನ ದಲಿತರ ಮೇಲೆ ಎಸಗಿದ ದೌರ್ಜನ್ಯಗಳು, ಪೊಲೀಸರ ವೌನ ಇವೆಲ್ಲವನ್ನು ಬರೆಯುವ ಸಂದರ್ಭದಲ್ಲಿ ಮಾತ್ರ ಮಾಧ್ಯಮಗಳ ಲೇಖನಿ ಮೊಂಡಾಗಿದ್ದವು.

 ‘ದಿ ಭೀಮ್ ಆರ್ಮಿ ಏಕ್ತಾ ಮಿಶನ್’ ಸ್ಥಾಪನೆಯಾದುದು 2015 ಜುಲೈ ತಿಂಗಳಲ್ಲಿ. ದಲಿತರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಚಂದ್ರಶೇಖರ್ ಆಝಾದ್ ಎಂಬ ಯುವಕ ಸ್ಥಾಪಿಸಿದ್ದರು. ಇದು ಎಷ್ಟು ವೇಗದಲ್ಲಿ ಬೆಳೆಯಿತೆಂದರೆ ಮಾಯಾವತಿಯೇ ಬೆಚ್ಚಿ ಬೀಳುವಷ್ಟರ ಮಟ್ಟಿಗೆ. ಇದೊಂದು ಸಾಮಾಜಿಕ ಸಂಘಟನೆ ಎಂದು ಘೋಷಿಸಿಕೊಂಡಿದ್ದರೂ, ರಾಜಕೀಯವಾಗಿ ತನ್ನ ಪ್ರಭಾವವನ್ನು ಯುವಕರಲ್ಲಿ ಬೀರುವ ಎಲ್ಲ ಸೂಚನೆಗಳನ್ನು ಮಾಯಾವತಿಗೆ ನೀಡುತ್ತಿತ್ತು. ‘‘ಭೀಮ್ ಆರ್ಮಿ ದಲಿತ ಸಂಘಟನೆಗೆ ಆರೆಸ್ಸೆಸ್ ಹಣ ಹೂಡುತ್ತಿದೆ’’ ಎಂದು ಈ ಹಿಂದೆ ಮಾಯಾವತಿಯವರೇ ಆರೋಪಿಸಿದ್ದರು. ಉತ್ತರ ಪ್ರದೇಶದಲ್ಲಿ ಮಾಯಾವತಿಯವರ ರಾಜಕೀಯ ಶಕ್ತಿಯನ್ನು ಒಡೆಯಲು ದಲಿತ ಯುವಕರನ್ನು ಆರೆಸ್ಸೆಸ್ ಬಳಸಿಕೊಳ್ಳುತ್ತಿದೆ ಎನ್ನುವುದು ಮಾಯಾವತಿಯವರ ಆರೋಪವಾಗಿತ್ತು. ಆದರೆ ಆರ್ಮಿ ಇದನ್ನು ಸಾರಾಸಗಟಾಗಿ ನಿರಾಕರಿಸಿದೆ. ‘‘ಬಿಜೆಪಿಯ ನಾಯಕರು ನಮಗೆ ಮಾಯಾವತಿ ಹಣ ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರೆ, ಮಾಯಾವತಿ ನಮಗೆ ಆರೆಸ್ಸೆಸ್ ಧನಸಹಾಯ ಮಾಡುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಆದರೆ ಸಹಾರನ್ ಪುರದಲ್ಲಿ ದಲಿತರ ನಿಜವಾದ ಸ್ಥಿತಿಗತಿಯ ಬಗ್ಗೆ ಯಾರೂ ಸ್ಪಂದಿಸಲು ಯತ್ನಿಸುತ್ತಿಲ್ಲ’’ ಎಂದು ಭೀಮ್ ಆರ್ಮಿಯ ರಾಷ್ಟ್ರಮಟ್ಟದ ಮುಖಂಡ ವಿನಯ್ ರತನ್ ಸಿಂಗ್ ಹೇಳುತ್ತಾರೆ. ಭೀಮ್ ಆರ್ಮಿಯ ಹಿಂದೆ ಯಾರಿದ್ದಾರೆ ಎನ್ನುವುದರ ಬಗ್ಗೆ ಇನ್ನೂ ಶಂಕೆಗಳಿವೆಯಾದರೂ, ಸಹಾರನ್‌ಪುರದಲ್ಲಿ ಭೀಮ್ ಆರ್ಮಿ ಬಲಿಷ್ಠವಾಗಿ ಬೆಳೆಯುತ್ತಿರುವುದಂತೂ ಸತ್ಯ. ಈಗಾಗಲೇ ಈ ಆರ್ಮಿಯ ಅಡಿಯಲ್ಲಿ ಸುಮಾರು 300 ಪಾಠಶಾಲೆಗಳಿವೆ. ದಲಿತ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ನೀಡುವುದು ಇದರ ಗುರಿಯಾಗಿದೆ. ಅಷ್ಟೇ ಅಲ್ಲ, ದಲಿತ ಮಹಿಳೆಯರ ಮೇಲೆ ಯಾವುದೇ ದೌರ್ಜನ್ಯಗಳು ನಡೆದದ್ದೇ ಆದರೆ ತಕ್ಷಣ ಬೈಕ್‌ಗಳಲ್ಲಿ ಆರ್ಮಿಯ ಯುವಕರ ಪ್ರವೇಶವಾಗುತ್ತದೆ. ಒಂದು ರೀತಿಯಲ್ಲಿ ಆರ್ಮಿಯು ದಲಿತರ ಮೇಲಿನ ದೌರ್ಜನ್ಯಗಳನ್ನು ತಡೆಯಲು ಪರ್ಯಾಯ ಪೊಲೀಸ್ ಕೆಲಸವನ್ನು ನಿರ್ವಹಿಸುತ್ತಿದೆ. ಆರ್ಮಿಯ ಜನಪ್ರಿಯತೆ ಎಷ್ಟರಮಟ್ಟಿಗೆ ಇದೆ ಎಂದರೆ, ಕಳೆದ ಮೇ ತಿಂಗಳಲ್ಲಿ ಜಂತರ್ ಮಂತರ್‌ನಲ್ಲಿ ನಡೆದ ಆರ್ಮಿ ಪ್ರತಿಭಟನೆಯಲ್ಲಿ ಇಪ್ಪತ್ತು ಸಾವಿರ ಜನರು ಭಾಗವಹಿಸಿದ್ದಾರೆ ಎಂದು ಊಹಿಸಲಾಗಿದೆ. ದಲಿತರ ಈ ಮಟ್ಟಿನ ಶಕ್ತಿ ಪ್ರದರ್ಶನ, ಮೇಲ್ವರ್ಗದ ಠಾಕೂರರನ್ನು ಇನ್ನಷ್ಟು ಕೆರಳಿಸುವುದರಲ್ಲಿ ಯಾವ ಸಂಶಯವೂ ಇಲ್ಲ. ಎಲ್ಲಿ ದಲಿತರು ತಮ್ಮ ಮೇಲಿನ ದೌರ್ಜನ್ಯಗಳಿಗೆ ಪ್ರತಿಭಟಿಸುತ್ತಾರೆಯೋ ಅಲ್ಲಿ ಶಾಂತಿ ಕೆಡುತ್ತದೆ. ಸಹಾರನ್‌ಪುರದಲ್ಲಿಯೂ ಅದೇ ಆಗಿದೆ. ಆದರೆ ದೌರ್ಜನ್ಯವೆಸಗಿದ ಠಾಕೂರರನ್ನು ಬಿಟ್ಟು, ಅದನ್ನು ಪ್ರತಿಭಟಿಸಿದ ಭೀಮ್ ಆರ್ಮಿಯ ಮುಖಂಡನನ್ನಷ್ಟೇ ಉಗ್ರಗಾಮಿಯೆಂಬಂತೆ ಬಿಂಬಿಸಿ ಬಂಧಿಸುವುದು, ಸಹಾರನ್ ಪುರದಲ್ಲಿ ಇಂಟರ್ನೆಟ್ ಇತ್ಯಾದಿಗಳನ್ನು ಸ್ಥಗಿತಗೊಳಿಸಿ ಇಡೀ ಊರನ್ನು ಇನ್ನೊಂದು ಕಾಶ್ಮೀರವಾಗಿ ಪರಿವರ್ತಿಸಲು ಯತ್ನಿಸುವುದು ಅಪಾಯಕಾರಿ ತಂತ್ರವಾಗಿದೆ.

ಒಂದಂತೂ ಸತ್ಯ. ಮೇಲ್ವರ್ಗದಿಂದ ದೌರ್ಜನ್ಯಗಳು ಹೆಚ್ಚುತ್ತಿರುವುದಕ್ಕೆ ಮುಖ್ಯ ಕಾರಣ ಪೊಲೀಸರ ವೌನ. ಕಾನೂನು ವ್ಯವಸ್ಥೆ ಜಾಗೃತಾವಸ್ಥೆಯಲ್ಲಿದ್ದರೆ ಭೀಮ್ ಆರ್ಮಿಯಂತಹ ಸಂಘಟನೆಗಳು ಹುಟ್ಟುವ ಆವಶ್ಯಕತೆಗಳಿರುವುದಿಲ್ಲ. ಅದರ ಅನಿವಾರ್ಯತೆಯನ್ನು ದಲಿತರಿಗಾಗಲಿ, ಈ ದೇಶದ ಮುಸ್ಲಿಮರಿಗಾಗಲಿ ಮನವರಿಕೆ ಮಾಡಿಕೊಡುವಂತಹ ಪಿತೂರಿಯನ್ನು ಪೊಲೀಸ್ ವ್ಯವಸ್ಥೆ ಮಾಡಬಾರದು. ಇದೇ ಸಂದರ್ಭದಲ್ಲಿ, ಉಗ್ರವಾದದ ದಾರಿ ಹಿಡಿಯುವುದು, ಕಾನೂನು ವ್ಯವಸ್ಥೆಗೆ ಪರ್ಯಾಯವಾದ ಸಂಘಟನೆಗಳನ್ನು ಕಟ್ಟಿಕೊಂಡು ಆ ಮೂಲಕ ಸಮಸ್ಯೆಗಳನ್ನು ಇತ್ಯರ್ಥ ಮಾಡಿಕೊಳ್ಳಲು ಹೊರಡುವುದು ಮುಂದೆ ಸಮಾಜವನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಬಹುದು. ಇದನ್ನು ದಲಿತರು ಮತ್ತು ದೌರ್ಜನ್ಯಕ್ಕೊಳಗಾಗುತ್ತಿರುವ ಮುಸ್ಲಿಮರೂ ಮನಗಾಣಬೇಕು. ಕಾನೂನು ವ್ಯವಸ್ಥೆ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ, ದೌರ್ಜನ್ಯಗಳ ಹಿಂದಿರುವ ವ್ಯಕ್ತಿಗಳನ್ನು ಗುರುತಿಸಿ ಅವರನ್ನು ಜೈಲಿನೊಳಗೆ ತಳ್ಳುವ ಮೂಲಕ ವ್ಯವಸ್ಥೆಯ ಮೇಲೆ ಶೋಷಿತರು ಇಟ್ಟಿರುವ ನಂಬಿಕೆಯನ್ನು ಉಳಿಸಬೇಕು. ಆಗ ಶೋಷಿತರಿಗೆ ಇನ್ನೊಬ್ಬ ಆಝಾದ್ ಆಗಲಿ, ಆರ್ಮಿಯಾಗಲಿ ಅಗತ್ಯ ಬೀಳುವುದಿಲ್ಲ. ಆದರೆ ಈ ದೇಶದಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ರೌಡಿಗಳು, ಗೂಂಡಾಗಳು ಬೀದಿಗಳಲ್ಲಿ ಅಮಾಯಕರ ಮೇಲೆ ಬರ್ಬರವಾಗಿ ಹಲ್ಲೆ ಮಾಡಬಹುದಾದರೆ ಮತ್ತು ಅದನ್ನು ಪೊಲೀಸರು ವೌನವಾಗಿ ಸಮ್ಮತಿಸುತ್ತಾರೆ ಎಂದಾದರೆ ಅದು ಗಲ್ಲಿಗಳಲ್ಲಿ ಶೋಷಿತರು ತಮ್ಮದೇ ಆರ್ಮಿಗಳನ್ನು ಕಟ್ಟಿಕೊಳ್ಳಲು ನೀಡುವ ಸೂಚನೆಯೂ ಆಗಿರುತ್ತದೆ ಎಂಬ ಎಚ್ಚರಿಕೆ ಬೇಕು. ಹುಲಿಗಳಿಗೆ ಕೋರೆಹಲ್ಲುಗಳಿರುವಾಗ, ಜಿಂಕೆಗಳು ಕೊಂಬುಗಳನ್ನು ಹೊಂದಿರುವುದು ಅಪರಾಧ ಹೇಗಾಗುತ್ತದೆ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News