ಗೋವಿನ ಬಗ್ಗೆ ಹೈದರಾಬಾದ್ ಹೈಕೋರ್ಟ್ ನ್ಯಾಯಾಧೀಶರ ಹೊಸ ಸಂಶೋಧನೆ

Update: 2017-06-10 11:01 GMT

ಹೈದರಾಬಾದ್, ಜೂ.10: ಗೋವನ್ನು "ರಾಷ್ಟ್ರೀಯ ಪ್ರಾಣಿ" ಎಂದು ಘೋಷಿಸಬೇಕೆಂದು ರಾಜಸ್ಥಾನ ಹೈಕೋರ್ಟ್  ನ್ಯಾಯಾಧೀಶರು ಘೋಷಿಸಿರುವ ವಿಚಾರ ಇನ್ನೂ ಚರ್ಚೆಯಲ್ಲಿರುವಂತೆಯೇ ಹೈದರಾಬಾದ್ ಹೈಕೋರ್ಟ್ ನ್ಯಾಯಾಧೀಶರೊಬ್ಬರ ಹೇಳಿಕೆ ಇದೀಗ ಹಾಸ್ಯಕ್ಕೀಡಾಗಿದೆ. ಜಾನುವಾರು ವ್ಯಾಪಾರಿಯೊಬ್ಬನ ಪ್ರಕರಣದ ವಿಚಾರಣೆ ನಡೆಸಿದ ಸಂದರ್ಭ ತೀರ್ಪು ನೀಡಿದ ಅವರು, “ಗೋವು ತಾಯಿ ಮತ್ತು ದೇವರಿಗೆ ಪರ್ಯಾಯ” ಎಂದಿದ್ದಾರೆ.

ರಾಮವತ್ ಹನುಮ ಎಂಬ ಜಾನುವಾರು ವ್ಯಾಪಾರಿಯ 63 ಗೋವುಗಳು ಹಾಗೂ 2 ಎತ್ತುಗಳನ್ನು ವಶಪಡಿಸಿಕೊಂಡ ಬಗ್ಗೆ ಆತ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಅವರು, ಗೋವು ದೇವರು ಹಾಗೂ ತಾಯಿಗೆ ಪರ್ಯಾಯವಾಗಿದೆ. ಬಕ್ರೀದ್ ಸಂದರ್ಭಗಳಲ್ಲಿ ಆರೋಗ್ಯವಂತ ಗೋವುಗಳ ವಧೆಗೆ ಮುಸ್ಲಿಮರಿಗೆ ಯಾವುದೇ ಮೂಲಭೂತ ಹಕ್ಕುಗಳಿಲ್ಲ ಎಂದವರು ಹೇಳಿದರು.

ಹಾಲು ನೀಡಲು ಹಸುಗಳು ಯೋಗ್ಯವಲ್ಲ ಎಂದು ಆರೋಗ್ಯವಂತ ಗೋವುಗಳಿಗೆ ಸರ್ಟಿಫಿಕೇಟ್ ನೀಡುವ ಗೋವೈದ್ಯರಿಗೆ ಎಚ್ಚರಿಕೆ ನೀಡಿದ ಅವರು, ಇಂತಹ ಪ್ರಕರಣಗಳು ನಡೆದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು,

ಗೋ ವ್ಯಾಪಾರಿ ರಾಮವತ್ ಹನುಮ ಅವರ 65 ಜಾನುವಾರುಗಳನ್ನುಕಂಚನಪಲ್ಲಿ ಗ್ರಾಮದಿಂದ ವಶಪಡಿಸಿಕೊಳ್ಳಲಾಗಿತ್ತು. ಮೇವು ನೀಡುವ ಉದ್ದೇಶದಿಂದ ತಾನು ಜಾನುವಾರುಗಳು ಕರೆತಂದಿದ್ದೆ ಎಂದು ರಾಮವತ್ ಅರ್ಜಿ ಸಲ್ಲಿಸಿದ್ದರೆ, ಆತ ವಧೆಗಾಗಿ ಜಾನುವಾರುಗಳನ್ನು ಕರೆತಂದಿದ್ದ ಎಂದು ಪ್ರಾಸಿಕ್ಯೂಶನ್ ವಾದಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News