ನೆಲ್ ದಾರಿಗುಂಟ...ಒಂದು ಪಕ್ಷಿನೋಟ...

Update: 2017-06-11 18:27 GMT

ಪ್ರವಾಸವು ಬದುಕಿನ ಬಗೆಗೆ, ವ್ಯಕ್ತಿ ದೇಶಗಳ ಬಗೆಗೆ ನಮ್ಮ ಅಭಿಪ್ರಾಯಗಳನ್ನು ಬದಲಿಸುವ ಚಿಂತನೆಗಳನ್ನು ರೂಪಿಸುವ ಕಾಲ. ಪ್ರಯಾಣದ ವೇಳೆ ದೊರಕುವ ಅನಾಯಾಸ ಏಕಾಂತವು ನಿತ್ಯ ನಿರ್ಲಕ್ಷಿಸಿದ್ದನ್ನು ಗಮನಿಸಲು, ಸುತ್ತಲ ಹುಸಿಕೋಟೆಗಳನ್ನು ಒಡೆದು ತೆರೆದುಕೊಳ್ಳಲು ನಮ್ಮನ್ನು ನಾವೇ ನಿಕಷಕ್ಕೊಡ್ಡಿಕೊಳ್ಳುವ ಕಾಲ. ಇಂತಹದೊಂದು ನಂಬಿಕೆಯೊಂದಿಗೆ ಲೇಖಕಿ ಎಚ್. ಎಸ್. ಅನುಪಮಾ ಅವರು ಈಜಿಪ್ಟ್ ಪ್ರವಾಸಕ್ಕೆ ತೆರೆದುಕೊಂಡು, ಅಲ್ಲಿ ತನ್ನದಾಗಿಸಿಕೊಂಡ ಅನುಭವಗಳನ್ನು ‘ನೈಲ್ ದಾರಿಗುಂಟ...’ ಕೃತಿಯಲ್ಲಿ ದಾಖಲಿಸಿದ್ದಾರೆ. ಚಿತ್ರದ ಮೊದಲ ಅಧ್ಯಾಯದಲ್ಲಿ ಈಜಿಪ್ಟ್ ತನ್ನನ್ನು ಸೆಳೆದ ಬಗೆಯನ್ನು ವಿವರಿಸುತ್ತಾರೆ. ‘ನಾಗರಿಕತೆಯ ತವರು ಈಜಿಪ್ಟ್’ ಇಂದು ಬೇರೆ ಬೇರೆ ರಾಜಕೀಯ ಕಾರಣಗಳಿಗಾಗಿ ಸುದ್ದಿಯಲ್ಲಿದೆೆ. ಹೀಗಿರುವಾಗ ಈಜಿಪ್ಟ್‌ನ್ನು ನಾವು ಅರ್ಥ ಮಾಡಿಕೊಳ್ಳಬೇಕಾದರೆ ಅದರ ವರ್ತಮಾನವನ್ನು ಮುಖಾಮುಖಿಗೊಳ್ಳಲೇ ಬೇಕು. ಈ ನಿಟ್ಟಿನಲ್ಲಿ ಲೇಖಕಿ ಈಜಿಪ್ಟ್ ನ ನೆಲವನ್ನು ತಲುಪುವ ಹಂಬಲಿಕೆಯನ್ನು ವ್ಯಕ್ತಪಡಿಸುತ್ತಾರೆ. ಹಾಗೆಯೇ ಪ್ರವಾಸದ ಅನುಭವಗಳನ್ನು ಹಂಚಿಕೊಳ್ಳುವ ಮೊದಲು ಈಜಿಪ್ಟ್‌ನ ಇತಿಹಾಸದ ಸಣ್ಣ ಚಿತ್ರಣವನ್ನೂ ಒಂದು ಅಧ್ಯಾಯದಲ್ಲಿ ನೀಡುತ್ತಾರೆ. ಈಜಿಪ್ಟ್‌ನ ಮೇಲಿನ ಪರಕೀಯ ದಾಳಿಗಳು, ಅದರ ಮೇಲೆ ಸಾಮ್ರಾಜ್ಯಶಾಹಿ ಶಕ್ತಿಗಳು ಎಸಗಿದ ದೌರ್ಜನ್ಯಗಳಿಂದ ಹೇಗೆ ಅಲ್ಲಿನ ಬಹುರೂಪಿ ಸಂಸ್ಕೃತಿ ನಾಶವಾಯಿತು ಎನ್ನುವುದನ್ನು ಈ ಅಧ್ಯಾಯದಲ್ಲಿ ಹೇಳುತ್ತಾರೆ. ಹಾಗೆಯೇ ತನ್ನನ್ನು ದೇವರೆಂದು ಘೋಷಿಸಿಕೊಂಡ ಫೆರೋ ಮತ್ತು ಅವನ ವಿರುದ್ಧ ಗುಲಾಮರನ್ನು ಸಂಘಟಿಸಿ ದಂಗೆಯೆದ್ದ ಮೋಸೆಸ್‌ನ ಬಗ್ಗೆಯೂ ಒಂದು ಸಣ್ಣ ಕತೆಯನ್ನು ಲೇಖಕಿ ಮಂಡಿಸುತ್ತಾರೆ. ಇದು ನೇರವಾದ ಪ್ರವಾಸ ಕಥನವಲ್ಲ. ಇತಿಹಾಸದ ಸಂಗ್ರಹರೂಪಕ್ಕೆ, ತನ್ನ ಪ್ರವಾಸಾನುಭವವನ್ನು ಒಟ್ಟಿಗಿಟ್ಟು ಈಜಿಪ್ಟ್ ನ ಕುರಿತಂತೆ ತನ್ನ ನಿಲುವುಗಳನ್ನು ಲೇಖಕಿ ಮಂಡಿಸಿದ್ದಾರೆ. ಈಜಿಪ್ಟ್‌ನ ಜನಜೀವನ, ಅಲ್ಲಿ ಅರಳಿದ ವಿಜ್ಞಾನ, ಸಂಸ್ಕೃತಿ, ಸದ್ಯದ ಸಂದರ್ಭದಲ್ಲಿ ಈಜಿಪ್ಟ್‌ನ ಒಳಸಂಘರ್ಷಗಳನ್ನು ಈ ಪ್ರವಾಸಕಥನ ತೆಳುವಾಗಿ ಮುಟ್ಟಿಕೊಂಡು ಹೋಗುತ್ತದೆ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News