ಕಾಶ್ಮೀರದ ಮಕ್ಕಳು ದರ್ಶನ ಮಾಡಬೇಕಾದ ಭಾರತ

Update: 2017-06-12 18:50 GMT

‘ಯುದ್ಧ ಪೀಡಿತ ದೇಶದಲ್ಲಿ, ಯುದ್ಧ ತರಬೇತಿಯೇ ಅತ್ಯುನ್ನತ ಶಿಕ್ಷಣವಾಗಿರುತ್ತದೆ’ ಎನ್ನುವ ಮಾತಿದೆ. ಸದಾ ತಮ್ಮ ತಲೆಯಮೇಲೆ ಶತ್ರುಗಳ ಬಾಂಬುಗಳು ಸುರಿಯುತ್ತಿದ್ದರೆ, ಅಲ್ಲಿಯ ಎಳೆಯ ಮಕ್ಕಳು ಕೈಯಲ್ಲಿ ಬಳಪ ಹಿಡಿಯದೇ ಕೋವಿ ಹಿಡಿದು ಬೆಳೆದರೆ ಅದಕ್ಕೆ ಆ ದೇಶವನ್ನು ನಾವು ಸಂಪೂರ್ಣವಾಗಿ ಹೊಣೆ ಮಾಡುವಂತಿಲ್ಲ. ಇಂದು ಅಫ್ಘಾನಿಸ್ತಾನ, ಸಿರಿಯ, ಇರಾಕ್‌ನಂತಹ ದೇಶಗಳಲ್ಲಿ ಮಕ್ಕಳು ಅಕ್ಷರ ಕಲಿಯಬೇಕು, ಜಗವನ್ನು ತಿಳಿಯಬೇಕು ಎಂದು ಬೋಧನೆಗೈಯುವುದು ಸುಲಭ. ಆದರೆ ಹಗಲು ರಾತ್ರಿ ಬಾಂಬ್ ಶೆಲ್‌ಗಳ ಸದ್ದುಗಳೊಡನೆ ಕಳೆಯುತ್ತಿರುವ ಎಳೆ ಮಕ್ಕಳು, ಹಿಂಸೆ, ಸಾವು-ನೋವುಗಳ ಜೊತೆಗೆ ಬೆಳೆಯುತ್ತಿರುವ ಮಕ್ಕಳು ಕೋವಿಯ ಬದಲು ಬಳಪ ಹಿಡಿಯಬೇಕು ಎಂದು ಬಯಸಿದರೆ ಅದು ಸಾಧ್ಯವಾಗುವುದು ಹೇಗೆ? ಅವರ ಜಗತ್ತೇ ಯುದ್ಧ ಭೂಮಿ. ಯುದ್ಧ ತರಬೇತಿಯೇ ಅವರ ಪಾಲಿಗೆ ಅನಿವಾರ್ಯವಾದ ಅತ್ಯುನ್ನತ ಶಿಕ್ಷಣ ಎಂಬಂತಹ ಸ್ಥಿತಿ ಅವರು ಬಯಸದೆಯೇ ಅವರಿಗೆ ನಿರ್ಮಾಣವಾಗಿ ಬಿಡುತ್ತದೆ.

ಕಾಶ್ಮೀರದ ವಿಷಯದಲ್ಲೂ ಇದು ಭಿನ್ನವಾಗಿಲ್ಲ. ಸೇನೆಯ ಬೂಟುಗಾಲಿನ ಸದ್ದುಗಳ ನಡುವೆ ಬೆಳೆಯುತ್ತಿರುವ ಮಕ್ಕಳಿಗೆ ಅವರು ತಮ್ಮವರಲ್ಲ ಎಂದು ಅನ್ನಿಸಿದರೆ ಅದು ಯಾರ ತಪ್ಪು? ತಮ್ಮವರ ಮೇಲೆ ಸೇನೆಯ ದೌರ್ಜನ್ಯ, ಅದರ ವಿರುದ್ಧ ಕಲ್ಲುತೂರಾಟಗಳನು ನೋಡುತ್ತಾ ಬೆಳೆದವರಿಗೆ ಭಾರತದ ಮೇಲೆ ಗೌರವ ಮೂಡಲು ಹೇಗೆ ಸಾಧ್ಯ?. ಈ ಕಾರಣದಿಂದಲೇ ಕಾಶ್ಮೀರ ಭೌಗೋಳಿಕವಾಗಿ ಭಾರತಕ್ಕೆ ಸೇರಿದ್ದರೂ, ಮಾನಸಿಕವಾಗಿ ಭಾರತದಿಂದ ದೂರವಾಗುತ್ತಲೇ ಬರುತ್ತಿದೆ. ಅಟಲ್ ಬಿಹಾರಿ ವಾಜಪೇಯಿ ಅರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಒಂದಿಷ್ಟು ಶಾಂತಿಯ ಪ್ರಯತ್ನ ನಡೆದಿತ್ತು. ಯುಪಿಎ ಆಡಳಿತದಲ್ಲೂ ಕಾಶ್ಮೀರ ಇಷ್ಟರಮಟ್ಟಿಗೆ ಅಧ್ವಾನಗೊಂಡಿರಲಿಲ್ಲ. ಆದರೆ ಬಿಜೆಪಿ ಮತ್ತು ಆರೆಸ್ಸೆಸ್ ಕಾಶ್ಮೀರದ ಮೇಲೆ ನಡೆಸಿದ ಹಸ್ತಕ್ಷೇಪ ಅಲ್ಲಿ ಇನ್ನಷ್ಟು ಅನಾಹುತಗಳನ್ನು ತಂದಿಟ್ಟಿತು.

ಇಂದು ಬೀದಿ ಬೀದಿಯಲ್ಲಿ ಕಲ್ಲು ತೂರಾಟ ನಡೆಸುವ ಯುವಕರು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿವೆ. ಇದೇ ಸಂದರ್ಭದಲ್ಲಿ ಕಾಶ್ಮೀರದಲ್ಲಿ ನಮ್ಮ ಸೇನೆಯ ನಡವಳಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಾದಕ್ಕೊಳಗಾಗಿದೆ. ನಕಲಿಎನ್‌ಕೌಂಟರ್‌ಗಳು, ಪೆಲೆಟ್ ಗನ್‌ಗಳು, ಗೋಲಿಬಾರ್‌ಗಳು ಹೆಚ್ಚುತ್ತಿದ್ದಂತೆಯೇ ಕಾಶ್ಮೀರದಲ್ಲಿ ಅಸಹನೆಯೂ ಹೆಚ್ಚತೊಡಗಿತು. ಕಾಶ್ಮೀರದ ಪ್ರಜೆಯೊಬ್ಬನನ್ನು ಜೀಪಿಗೆ ಕಟ್ಟಿ ಮಾನವ ಗುರಾಣಿಯನ್ನಾಗಿ ಬಳಸಿದ್ದ ಮಾತ್ರವಲ್ಲ, ಅದನ್ನು ಸಮರ್ಥಿಸಿತು ಕೂಡ. ಕಾಶ್ಮೀರದ ಎಳೆ ಮಕ್ಕಳು ಇವನ್ನೆಲ್ಲ ಗಮನಿಸುತ್ತಿದ್ದಾರೆ ಎನ್ನುವ ಅರಿವೂ ಸೇನೆಗಿದ್ದಂತಿಲ್ಲ. ಈ ಎಳೆ ಮಕ್ಕಳಿಗೆ ಇತಿಹಾಸ ಗೊತ್ತಿಲ್ಲ, ವರ್ತಮಾನವೂ ಅರ್ಥವಾಗುತ್ತಿಲ್ಲ. ಇಂತಹ ಹುಡುಗರು ಭವಿಷ್ಯವನ್ನು ಅತೀ ಸುಲಭದಲ್ಲಿ ಕಳೆದುಕೊಳ್ಳುತ್ತಾರೆ.

ಕಾಶ್ಮೀರದ ಮಕ್ಕಳಲ್ಲಿ ಮಾನಸಿಕ ಖಿನ್ನತೆ ಹೆಚ್ಚುತ್ತಿರುವುದು ಇತ್ತೀಚಿನ ವರದಿಗಳಲ್ಲಿ ಬಹಿರಂಗವಾಗಿದೆ. ಭಾರತವೆಂದರೆ ಕಾಶ್ಮೀರಿಗಳನ್ನು ದಮನಿಸುವುದಕ್ಕಾಗಿಯೇ ಇರುವ ದೇಶವೆನ್ನುವ ತಪ್ಪು ಕಲ್ಪನೆಯೊಂದು ಅವರೊಳಗೆ ಬಿತ್ತಿ ಮರವಾಗುತ್ತಿದೆ. ಇಂತಹ ಮಕ್ಕಳೇ ಭವಿಷ್ಯದಲ್ಲಿ ಹೆಚ್ಚು ಅಪಾಯಕಾರಿಗಳಾಗಿ ಪರಿವರ್ತನೆಹೊಂದುತ್ತಾರೆ. ಹಾಗೆಂದು ಈ ಮಕ್ಕಳನ್ನೆಲ್ಲ ಹಿಡಿದು ಜೈಲಿಗೆ ತಳ್ಳುವುದಂತೂ ಸಾಧ್ಯವಿಲ್ಲ. ಹೀಗಿರುವಾಗ ಈ ಮಕ್ಕಳನ್ನು ನಿಭಾಯಿಸುವ ಹೊಸತೊಂದು ದಾರಿಯನ್ನು ಕಾಶ್ಮೀರದ ಬಂಡಾಯ ನಿಗ್ರಹದ ಹೊಣೆಯನ್ನು ಹೊತ್ತಿರುವ ಸೇನೆಯ ವಿಕ್ಟರ್ ಫೋರ್ಸ್‌ನ ಜನರಲ್ ಆಫೀಸರ್ ಕಮಾಂಡರ್ ಆಗಿರುವ ಎಸ್. ರಾಜು ಅವರು ಕಂಡುಕೊಂಡಿದ್ದಾರೆ.

ಇತ್ತೀಚೆಗೆ ಕಲ್ಲುತೂರಾಟದಲ್ಲಿ ಭಾಗವಹಿಸಿದ 20ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಅಂದರೆ ಬಾಲಕರನ್ನು ಸೇನೆ ಬಂಧಿಸಿತು. ಆದರೆ ಇವರನ್ನು ಶಿಕ್ಷಿಸುವುದು ಹೇಗೆ? ಮೇಜರ್ ಜನರಲ್ ರಾಜು ಪ್ರಕಾರ ಇವರಿಗೆ ಶಿಕ್ಷೆ ನೀಡಬೇಕಾಗಿರುವುದಲ್ಲ. ಈ ಮಕ್ಕಳ ಒಳಗಿರುವ ಪೂರ್ವಾಗ್ರಹಗಳನ್ನು ಸರಿಪಡಿಸಬೇಕು. ಭಾರತದ ಕುರಿತಂತೆ ಅವರಿಗಿರುವ ತಪ್ಪು ಕಲ್ಪನೆಗಳನ್ನು ನಿವಾರಿಸಬೇಕು. ಅದು ಹೇಗೆ ಸಾಧ್ಯ? ಅವರಿಗೆ ಭಾರತದ ಪ್ರಜಾಪ್ರಭುತ್ವದ ಸೌಂದರ್ಯವನ್ನು ದರ್ಶನ ಮಾಡಿಸುವುದು. ಈ ದೇಶದಲ್ಲಿ ಮುಸ್ಲಿಮರು ಹಿಂದೂಗಳು ಯಾವ ರೀತಿಯಲ್ಲಿ ಸೌಹಾರ್ದದಿಂದ ಬದುಕುತ್ತಿದ್ದಾರೆ, ಅಭಿವೃದ್ಧಿ ಯಾವ ರೀತಿಯಲ್ಲಿ ವಿದ್ಯಾರ್ಥಿಗಳ ಬದುಕನ್ನು ಬದಲಾಯಿಸಿದೆ ಎನ್ನುವುದನ್ನು ಅವರಿಗೆ ತೋರಿಸುವುದು. ಸೇನೆಯ ಸದ್ಭಾವನೆಯಡಿ ಕಲ್ಲುತೂರಾಟ ನಡೆಸಿದ 20 ಮಕ್ಕಳನ್ನು ದೇಶಾದ್ಯಂತ ಪ್ರವಾಸಕ್ಕೆ ಕರೆದೊಯ್ಯಲು ಅವರು ನಿರ್ಧರಿಸಿದ್ದಾರೆ.

ತನ್ನ ಕೋವಿಯ ಮೂಲಕ, ಭಯದ ಮೂಲಕ ಕಾಶ್ಮೀರವನ್ನು ಭಾರತದ ಭಾಗವನ್ನಾಗಿಸಲು ಹೊರಟ ಸೇನೆ ಒಂದೆಡೆಯಾದರೆ, ಇನ್ನೊಂದೆಡೆ ಅಲ್ಲಿಯ ಮಕ್ಕಳಿಗೆ ಬೇಕಾಗಿರುವುದು ಶಿಕ್ಷೆಯಲ್ಲ, ಪರಿವರ್ತನೆ ಎಂದು ಹೇಳಿಕೊಳ್ಳುವ ಇನ್ನೊಂದು ಸೇನೆ ಕಾಶ್ಮೀರದಲ್ಲಿದೆ ಎನ್ನುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ. ಭಾರತ ಅತ್ಯಧಿಕ ಮುಸ್ಲಿಮರಿರುವ ದೇಶ ಮತ್ತು ಯಾವುದೇ ಮುಸ್ಲಿಂ ದೇಶಗಳಿಗಿಂತ ಹೆಚ್ಚು ಸ್ವಾತಂತ್ರ, ಶಿಕ್ಷಣ, ಅಭಿವೃದ್ಧಿಯನ್ನು ಇಲ್ಲಿನ ಮುಸ್ಲಿಮರು ಅನುಭವಿಸುತ್ತಿದ್ದಾರೆ. ಈ ದೇಶದ ಸ್ವಾತಂತ್ರ ಹೋರಾಟದಲ್ಲಿ, ಪ್ರಜಾಸತ್ತೆಯ ಸ್ಥಾಪನೆಯಲ್ಲಿ ಮುಸ್ಲಿಮರ ಕೊಡುಗೆಯನ್ನು ಬಣ್ಣಿಸಿದಷ್ಟೂ ಮುಗಿಯುವುದಿಲ್ಲ.

ಭಾರತೀಯ ಮುಸ್ಲಿಮರ ಇನ್ನೊಂದು ದೊಡ್ಡ ಹೆಗ್ಗಳಿಕೆಯೆಂದರೆ, ಪಾಕಿಸ್ತಾನವೆಂಬ ಪ್ರತ್ಯೇಕ ಮುಸ್ಲಿಮ್ ರಾಷ್ಟ್ರ ನಿರ್ಮಾಣವಾದಾಗ, ಭಾರತವೇ ತಮ್ಮ ತಾಯ್ನೆಲವೆಂದು ಇಲ್ಲಿ ಉಳಿದುಕೊಂಡವರು ಇವರು. ಈ ದೇಶದ ವಿವಿಧ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಮುಸ್ಲಿಮರ ಪಾತ್ರ ಬಹುದೊಡ್ಡದು. ಕಾಶ್ಮೀರದ ಮಕ್ಕಳಿಗೆ ಹಿಂದು ಮುಸ್ಲಿಮರು ಜೊತೆ ಜೊತೆಗೆ ಭಾರತವನ್ನು ಕಟ್ಟುವ ಬಗೆಯನ್ನು ದರ್ಶನ ಮಾಡಿಸಬೇಕಾಗಿದೆ. ಆ ಮೂಲಕ ಭಾರತದಲ್ಲಿ ಉಳಿಯಬೇಕು ಎಂಬ ಆಸೆ ಪ್ರತೀ ಕಾಶ್ಮೀರಿಯ ಎದೆಯಲ್ಲೂ ಮಿಡಿಯುವಂತೆ ನೋಡಿಕೊಳ್ಳುವುದು ಸೇನೆಯ ಉದ್ದೇಶವಾಗಿದೆ.

ಇದೇ ಸಂದರ್ಭದಲ್ಲಿ ಕಾಶ್ಮೀರದ ಆ ಮಕ್ಕಳು ದರ್ಶನ ಮಾಡುವ ಭಾರತ ಹೇಗಿರಬೇಕು? ಒಂದು ದನಕ್ಕಾಗಿ ಪೆಹ್ಲೂಖಾನ್ ಎಂಬ ವೃದ್ಧನನ್ನು ಗೂಂಡಾಗಳ ಗುಂಪು ಥಳಿಸಿಕೊಲ್ಲುವುದನ್ನು ಅವರು ದರ್ಶನ ಮಾಡದಂತೆ ಸೇನೆ ನೋಡಿಕೊಳ್ಳುವುದು ಅತ್ಯಗತ್ಯವಾಗಿದೆ. ಫ್ರಿಜ್‌ನಲ್ಲಿ ಗೋಮಾಂಸ ಇದೆ ಎಂದು ಆರೋಪಿಸಿ ಸೇನಾನಿಯೊಬ್ಬನ ವೃದ್ಧ ತಂದೆ ಅಖ್ಲಾಕ್‌ರನ್ನು ಥಳಿಸಿಕೊಂದ ಭಾರತವನ್ನು ಅವರಿಗೆ ಯಾವ ಕಾರಣಕ್ಕೂ ತೋರಿಸಬಾರದು.

ರಾಜಸ್ಥಾನದಲ್ಲಿ ಹತ್ತು ಜನ ಅಮಾಯಕರನ್ನು ನಡು ದಾರಿಯಲ್ಲಿ ಹಾಡಹಗಲೇ ಸಾರ್ವಜನಿಕರೇ ಥಳಿಸಿಕೊಂದ ಭಾರತವನ್ನು ಕಂಡರೆ ಆ ಕಾಶ್ಮೀರಿ ಮಕ್ಕಳ ಮಾನಸಿಕ ಸ್ಥಿತಿ ಏನಾಗಬಹುದು? ಇರುವ ಗೋವುಗಳನ್ನು ಹಟ್ಟಿಯಲ್ಲೂ ಇಟ್ಟುಕೊಳ್ಳಲಾಗದೆ ಮಾರುಕಟ್ಟೆಯಲ್ಲೂ ಮಾರಲಾಗದೆ ಆತ್ಮಹತ್ಯೆಗೆ ಈಡಾಗಿರುವ ರೈತರ ಭಾರತ, ತಮ್ಮ ಹಕ್ಕಿಗಾಗಿ ಬೀದಿಗಿಳಿದು ಪೊಲೀಸರ ಗುಂಡಿಗೆ ಬಲಿಯಾದ ಕೃಷಿಕರ ಭಾರತ, ಭಯೋತ್ಪಾದನೆಯ ಸುಳ್ಳು ಆರೋಪದಿಂದ ಬಂಧಿತರಾಗಿ ಜೈಲಲ್ಲಿ ನರಳುವ ಅಮಾಯಕ ಮುಸ್ಲಿಮರ ಭಾರತ, ದೇವಸ್ಥಾನಕ್ಕೆ ಪ್ರವೇಶಿಸಿದ ತಪ್ಪಿಗೆ ದಲಿತರನ್ನು ಜೀವಂತ ಸುಟ್ಟ ಭಾರತ...ಇವೆಲ್ಲವನ್ನೂ ಮುಚ್ಚಿಟ್ಟು ಆ ಕಾಶ್ಮೀರದ ಮಕ್ಕಳಿಗೆ ತೋರಿಸಿ ಅವರ ಮನಸು ಬದಲಿಸುವುದಕ್ಕಾದರೂ ನಾವು ಗಾಂಧಿ, ನೆಹರೂ, ಅಬುಲ್ ಕಲಾಂ ಆಝಾದ್ ಮೊದಲಾದವರ ಕನಸಿನ ಸುಂದರ ಭಾರತದ ಚಿಕ್ಕ ಚೂರೊಂದನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News