ಗ್ರಾಮಸಂಸ್ಕೃತಿಯ ಒಳ ತಿಕ್ಕಾಟಗಳನ್ನು ತೆರೆದಿಡುವ ‘ದ್ವಿತ್ವ’

Update: 2017-06-13 18:49 GMT

‘ದ್ವಿತ್ವ’ ಡಾ. ಆರ್. ಸುನಂದಮ್ಮ ಅವರು ಬರೆದಿರುವ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದಿರುವ ಕಾದಂಬರಿ. ಮಹದ್ಗ್ರಂಥವೊಂದರ ಆಯಾಮವನ್ನು ಹೊಂದಿರುವ ಈ ಕಾದಂಬರಿಯ ಬದುಕು ಪಾತ್ರಗಳನ್ನು ದಟ್ಟವಾಗಿ ಹರಡಿಕೊಂಡಿದೆ. ಎಲ್ಲ ಪಾತ್ರಗಳೂ ತಮ್ಮದೇ ಪಾತ್ರ ಪೋಷಣೆಯ ಮೂಲಕ ನಮ್ಮಿಂದಿಗೆ ಮಾತನಾಡುತ್ತವೆ. ನಾಶವಾಗುತ್ತಿರುವ ಗ್ರಾಮಸಂಸ್ಕೃತಿಯನ್ನು ಈ ಕಾದಂಬರಿ ಬಹುನೆಲೆಗಳಲ್ಲಿ ಚರ್ಚಿಸುತ್ತದೆ. ಗ್ರಾಮಸಂಸ್ಕೃತಿಯನ್ನು ಕೇಂದ್ರವಾಗಿಟ್ಟುಕೊಂಡು ಜಾತಿ ಮತ್ತು ಲಿಂಗ ರಾಜಕಾರಣದ ಚರ್ಚೆ ಕಾದಂಬರಿಯ ಮುಖ್ಯ ಗುರಿಯೇನೋ ಎಂದೆನಿಸುತ್ತದೆ. ಕಲ್ಲಮ್ಮ ಮತ್ತು ಪುಟ್ನಂಜಿ ಕಾದಂಬರಿಯ ಎರಡು ಮುಖ್ಯ ಪಾತ್ರಗಳಾಗಿವೆ. ಜಾತಿ, ಒಳಜಾತಿಗಳ ನಡುವಿನ ತಿಕ್ಕಾಟಗಳನ್ನು ಕಲ್ಲಮ್ಮನ ಪಾತ್ರದ ಮೂಲಕ ಕಾದಂಬರಿಕಾರ್ತಿ ನಿರೂಪಿಸುತ್ತಾರೆ. ಕುರುಬ, ದಲಿತ ಜಾತಿಗಳೊಳಗೂ ಒಳ ಸಂಘರ್ಷಗಳಿವೆ. ಜಾತಿ ಶೋಷಣೆಗಳಿವೆ. ಹಾಗೆಯೇ ಮಹಿಳೆಯರು ಎಲ್ಲ ಜಾತಿ ಗಳಲ್ಲೂ ಶೋಷಿತರಾಗುವ ಮತ್ತೊಂದು ಉಪಜಾತಿಗಳಾಗಿ ಕಾಣಿಸಿಕೊಳ್ಳುತ್ತಾರೆ. ಗ್ರಾಮವೆನ್ನುವುದು ಹೊರನೋಟಕ್ಕೆ ಸುಂದರ ವಾದ ಆದರ್ಶವಾದರೂ ಅದರೊಳಗಿರುವ ಜಾತಿ, ಲಿಂಗ ರಾಜಕಾರಣ ಅತ್ಯಂತ ಹೇಯ ವಾದುದು. ಸಾಧಾರಣವಾಗಿ ಒಂದು ಗ್ರಾಮಸಂಘರ್ಷವನ್ನು ಮಹಿಳಾ ಲೇಖಕಿಯರು ಬರೆದಿರುವುದು ಕಡಿಮೆ. ಪುರುಷನ ಕಣ್ಣಲ್ಲಿ ಗ್ರಾಮ ಮತ್ತು ಅಲ್ಲಿನ ಜಾತಿ ರಾಜಕಾರಣಗಳನ್ನು ನೋಡುವುದಕ್ಕೂ, ಮಹಿಳೆಯ ಕಣ್ಣಲ್ಲಿ ನೋಡುವುದಕ್ಕೂ ವ್ಯತ್ಯಾಸವಿದೆ. ಇಲ್ಲಿ ಸುನಂದಮ್ಮ ಜಾತಿ ಮತ್ತು ಲಿಂಗ ರಾಜಕಾರಣವನ್ನು ಕಲ್ಲಮ್ಮ, ಪುಟ್ನಂಜಿ, ತಿಮ್ಮಿ, ಜಬ್ಬಿ ಮೊದಲಾದ ಪಾತ್ರಗಳ ಮೂಲಕ ನೋಡಿದ ರೀತಿ ಈ ಕಾರಣಕ್ಕೇ ಮುಖ್ಯ ವಾಗಿದೆ. ಡಾ. ಸಬೀಹಾ ಭೂಮಿಗೌಡ ಅವರು ಮುನ್ನುಡಿಯಲ್ಲಿ ಹೇಳುವಂತೆ ಲೇಖಕಿಯ ಸ್ತ್ರೀವಾದಿ ದೃಷ್ಟಿಕೋನ ಮಹಿಳೆಯ ಬದುಕಿನ ಇಕ್ಕಟ್ಟುಗಳ ಕಾರಣಗಳನ್ನು ಶೋಧಿಸಿ, ಚರ್ಚಿಸಲು ಅನುವು ಮಾಡಿಕೊಟ್ಟಿದೆ. ಇಲ್ಲಿನ ಬಹುತೇಕ ಪಾತ್ರಗಳನ್ನು ಸಹಜವಾಗಿ ಲೇಖಕಿ ಬೆಳೆಸಿದ್ದಾರೆ. ಎಲ್ಲೂ ಹಸ್ತಕ್ಷೇಪಗಳಿಲ್ಲ. ಯಾವ ಸಾಮಾಜಿಕ ವ್ಯವಸ್ಥೆಯನ್ನೂ, ಯಾವುದೇ ಪೂರ್ವಾಗ್ರಹವಿಲ್ಲದೆ ಅವರು ಚಿತ್ರಿಸಿದ್ದಾರೆ. ಮೇಲು ಜಾತಿಯ ಕುಟಿಲತೆಗಳನ್ನು ಬಯಲುಗೈಯುವ, ದಲಿತ ಜೀವಗಳ ತಾಕಲಾಟಗಳನ್ನು ಮನಮುಟ್ಟುವಂತೆ ಲೇಖಕಿ ಕಟ್ಟಿಕೊಟ್ಟಿದ್ದಾರೆ. ‘ದ್ವಿತ್ವ’ ಸುನಂದಮ್ಮ ಅವರ ಮೊತ್ತ ಮೊದಲ ಕಾದಂಬರಿಯಾಗಿದ್ದರೂ, ಕನ್ನಡದ ಪಾಲಿಗೆ ಮಹತ್ವದ ಕೃತಿ ಎನ್ನುವುದರಲ್ಲಿ ಎರಡು ಮಾತಿಲ್ಲ. 350 ಪುಟಗಳ ಈ ಬೃಹತ್ ಕೃತಿಯನ್ನು ಕವಿ ಪ್ರಕಾಶನ, ಕವಲಕ್ಕಿ ಹೊರತಂದಿದೆ. ಕೃತಿಯ ಮುಖಬೆಲೆ 300 ರೂಪಾಯಿ. ಆಸಕ್ತರು 9480211320 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News