ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಹಚ್ಚುವ ಹುನ್ನಾರ

Update: 2017-06-13 18:46 GMT

ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಾಂತಿಯನ್ನು ಕೆಡಿಸಲು ಸಂಘ ಪರಿವಾರ ನೇರವಾಗಿ ಬಯಲಿಗೆ ಇಳಿದಂತಿದೆ. ದೇಶಾದ್ಯಂತ ಮೋದಿ ನೇತೃತ್ವದ ಸರಕಾರದ ಮೇಲೆ ಜನರ ಅಸಹನೆ ಹೆಚ್ಚುತ್ತಿರುವಂತೆಯೇ, ಕರ್ನಾಟಕದಲ್ಲೂ ಅದು ತನ್ನ ಪರಿಣಾಮ ಬೀರುತ್ತಿದೆ. ವಿರೋಧ ಪಕ್ಷವಾಗಿರುವ ಬಿಜೆಪಿ ರಾಜ್ಯದಲ್ಲಿ ನಿಸ್ತೇಜವಾಗಿದೆ. ಮೋದಿಯ ಹೆಸರು ಹೇಳಿ ಮತಯಾಚನೆ ಮಾಡಲು ಬಿಜೆಪಿಗೆ ಮುಖ ಇಲ್ಲದಂತಾಗಿದೆ.

ಕೇಂದ್ರದ ಜನವಿರೋಧಿ ನೀತಿಗಳು ರಾಜ್ಯದಲ್ಲೂ ಬಿಜೆಪಿಯ ಮೇಲೆ ಪರಿಣಾಮ ಬೀರಿದೆ. ಇಂತಹ ಹೊತ್ತಿನಲ್ಲಿ ಜನರ ಗಮನವನ್ನು ಮೂಲಭೂತ ಸಮಸ್ಯೆಗಳಿಂದ ಬೇರೆಡೆಗೆ ಹರಿಸುವುದಕ್ಕೆ ಸಂಘಪರಿವಾರ ಸಕಲ ಪ್ರಯತ್ನವನ್ನು ಮಾಡುತ್ತಿದೆ. ನೋಟು ನಿಷೇಧದ ಬಳಿಕ ಬೀದಿಗೆ ಬಿದ್ದಿರುವ ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸಿ ಪರಸ್ಪರ ಎತ್ತಿಕಟ್ಟುವ ಹುನ್ನಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇರೆ ಬೇರೆ ರೀತಿಯಲ್ಲಿ ನಡೆಯುತ್ತಿದೆ. ವಿಷಾದನೀಯವೆಂದರೆ, ದಕ್ಷಿಣ ಕನ್ನಡ ಜಿಲ್ಲೆಯ ಸಂಸದರೇ ಜಿಲ್ಲೆಗೆ ಬೆಂಕಿ ಹಚ್ಚುವ ನೇತೃತ್ವವನ್ನು ವಹಿಸಿದ್ದಾರೆ.

ಇತ್ತೀಚೆಗೆ ಸಂಘಪರಿವಾರ ಕಾರ್ಯಕರ್ತನೋರ್ವನ ಕೊಲೆಯನ್ನ್ನು ಮುಸ್ಲಿಮರ ತಲೆಗೆ ಕಟ್ಟಿ, ಆರೋಪಿಗಳನ್ನು ಬಂಧಿಸದೇ ಇದ್ದರೆ ‘ಇಡೀ ಜಿಲ್ಲೆಗೆ ಬೆಂಕಿ ಹಚ್ಚುವುದಕ್ಕೆ ನಮಗೆ ಗೊತ್ತಿದೆ’’ ಎಂಬಂತಹ ಮಾತುಗಳನ್ನಾಡಿ ಜನರನ್ನು ಗಾಬರಿ ಬೀಳಿಸಿದ್ದರು. ಆದರೆ ಇದೀಗ ನಿಜವಾದ ಆರೋಪಿಗಳು ಬೆಳಕಿಗೆ ಬಂದಿದ್ದಾರೆ. ಸಂಘಪರಿವಾರ ಕಾರ್ಯಕರ್ತನ ಸೋದರಿಯೇ ಕೊಲೆಯ ಪ್ರಮುಖ ಆರೋಪಿ ಎನ್ನುವುದು ಗೊತ್ತಾಗಿದೆ. ಇದೀಗ ಸಂಘಪರಿವಾರದ ಕಾರ್ಯಕರ್ತರು ಇದೀಗ ಅಲ್ಲಲ್ಲಿ ಚೂರಿ ಇರಿತ ನಡೆಸುವ ಮೂಲಕ ಜನರಲ್ಲಿ ಕೋಮುಭಾವನೆಗಳನ್ನು ಪ್ರಚೋದಿಸಲು ಯತ್ನಿಸುತ್ತಿದ್ದಾರೆ. ಅದರ ಭಾಗವಾಗಿಯೇ ಆರೆಸ್ಸೆಸ್‌ನಾಯಕ ಪ್ರಭಾಕರ ಭಟ್ಟರ ಊರಾದ ಕಲ್ಲಡ್ಕದಲ್ಲಿ ಅಮಾಯಕರಿಗೆ ಚೂರಿಯಿಂದ ಇರಿದು ಪರಾರಿಯಾಗುವ ಘಟನೆಗಳು ಹೆಚ್ಚುತ್ತಿವೆ.

ಕೆಲವು ವಾರಗಳ ಹಿಂದೆ, ಪಾದಚಾರಿಗಳ ಮೇಲೆ ಅವರು ಮುಸ್ಲಿಮರು ಎನ್ನುವ ಒಂದೇ ಕಾರಣಕ್ಕಾಗಿ ಚೂರಿಯಿಂದ ಇರಿಯಲಾಗಿತ್ತು. ಕೋಮುಗಲಭೆಗಳನ್ನು ಹುಟ್ಟಿಸಿ ಹಾಕುವ ಒಂದೇ ಉದ್ದೇಶದಿಂದ ಅಮಾಯಕರ ಮೇಲೆ ಈ ದಾಳಿ ನಡೆಸಲಾಗಿತ್ತು. ಸಂತ್ರಸ್ತರ ನಡುವೆ ಚೂರಿಯಿಂದ ಇರಿದವರಿಗೆ ಯಾವುದೇ ವೈಯಕ್ತಿಕ ದ್ವೇಷ ಇರಲಿಲ್ಲ. ಈ ಘಟನೆ ಈ ಹಿಂದೆ ಬಂಟ್ವಾಳದಲ್ಲಿ ಹರೀಶ್ ಪೂಜಾರಿಯನ್ನು ಭುವಿತ್ ಮತ್ತು ಮಿಥುನ್ ಎಂಬ ಸಂಘಪರಿವಾರ ಕಾರ್ಯಕರ್ತರು ಚೂರಿಯಿಂದ ಇರಿದು ಹತ್ಯೆ ಮಾಡಿರುವ ಪ್ರಕರಣವನ್ನು ಹೋಲುತ್ತದೆ.

ಈ ಯುವಕರಿಗೆ ಹರೀಶ್ ಪೂಜಾರಿ ಎಂಬ ಯುವಕನ ಮೇಲೆ ಯಾವುದೇ ದ್ವೇಷ ಇದ್ದಿರಲಿಲ್ಲ. ಈತ ಮುಸ್ಲಿಮ್ ಎಂದು ಭಾವಿಸಿ ಅವನನ್ನು ಇರಿದು ಕೊಂದಿದ್ದರು. ಟಿಪ್ಪು ಜಯಂತಿಯ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕೋಮುಗಲಭೆ ಎಬ್ಬಿಸುವುದಕ್ಕಾಗಿಯೇ ಈ ಕೊಲೆಯನ್ನು ಮಾಡಲಾಗಿತ್ತು. ವಿಪರ್ಯಾಸವೆಂದರೆ ಈ ಹರೀಶ್ ಪೂಜಾರಿ ಕೊಲೆಯಾದ ಸಂಗತಿ ಬೆಳಕಿಗೆ ಬಂದ ಬೆನ್ನಿಗೇ ಅದರ ಆರೋಪವನ್ನು ಮುಸ್ಲಿಮರ ತಲೆಗೆ ಕಟ್ಟಿ ಸಂಘಪರಿವಾರ ಜಿಲ್ಲೆಯಾದ್ಯಂತ ಬಂದ್ ಘೋಷಿಸಿತು. ಕೆಲವೇ ದಿನಗಳಲ್ಲಿ ಹರೀಶ್ ಪೂಜಾರಿಯನ್ನು ಸಂಘಪರಿವಾರ ಕಾರ್ಯಕರ್ತರೇ ಕೊಲೆ ಮಾಡಿರುವುದು ಬೆಳಕಿಗೆ ಬಂತು.

ಇಷ್ಟಕ್ಕೂ ಈ ಹರೀಶ್ ಪೂಜಾರಿ ಕೊಲೆಯಲ್ಲಿ ಭಾಗಿಯಾಗಿರುವ ಓರ್ವ ಪ್ರಮುಖ ಆರೋಪಿ ಭುವಿತ್ ಎಂಬಾತ ಸಾಮಾಜಿಕ ತಾಣದಲ್ಲಿ ಕಲಬುರ್ಗಿ ಕೊಲೆಯನ್ನು ಸಂಭ್ರಮಿಸಿದ್ದ ಮತ್ತು ಇನ್ನಷ್ಟು ಪ್ರಗತಿಪರ ಚಿಂತಕರಿಗೆ ಇದೇ ರೀತಿಯ ಗತಿ ಒದಗುವುದಾಗಿ ಎಚ್ಚರಿಸಿದ್ದ. ಈ ಕಾರಣಕ್ಕಾಗಿ ಆತ ಜೈಲಿಗೂ ಸೇರಿದ್ದ. ಆದರೆ ಮರುದಿನವೇ ಅವನಿಗೆ ನಮ್ಮ ‘ಘನವೆತ್ತ ನ್ಯಾಯಾಲಯ’ ಜಾಮೀನು ನೀಡಿತ್ತು. ಒಂದು ರೀತಿಯಲ್ಲಿ ಹರೀಶ್ ಪೂಜಾರಿಯ ಕೊಲೆಗೆ ಭುವಿತ್‌ಗೆ ಸ್ಫೂರ್ತಿ ನೀಡಿದ್ದು ‘ಘನವೆತ್ತ ನ್ಯಾಯಾಲಯ’ವೇ ಆಗಿದೆ.

ಅವನಿಗೆ ಸುಲಭದಲ್ಲಿ ಜಾಮೀನು ಸಿಗದೇ ಇದ್ದಿದ್ದರೆ ಈತ ಹರೀಶ್ ಎನ್ನುವ ಅಮಾಯಕನನ್ನು ಕೊಂದು ಹಾಕುತ್ತಿರಲಿಲ್ಲವೇನೋ. ಕಲ್ಲಡ್ಕದಲ್ಲಿ ಇತ್ತೀಚೆಗೆ ನಡೆದಿರುವ ಚೂರಿ ಇರಿತದ ಹಿಂದೆಯೂ ನಮ್ಮ ‘ಘನವೆತ್ತ ನ್ಯಾಯಾಲಯ’ದ ಪಾತ್ರವಿರುವುದು ವಿಷಾದನೀಯ ಸಂಗತಿಯಾಗಿದೆ. ಹರೀಶ್ ಪೂಜಾರಿಯನ್ನು ಕೊಲೆ ಮಾಡಿ ಜೈಲು ಪಾಲಾಗಿರುವ ಭುವಿತ್ ಮತ್ತು ಮಿಥುನ್ ಜಾಮೀನು ಪಡೆದು ಕಲ್ಲಡ್ಕದಲ್ಲಿ ಮುಕ್ತವಾಗಿ ಓಡಾಡುತ್ತಿದ್ದಾರೆ.

ಒಂದು ಬರ್ಬರ ಕೊಲೆ ಮಾಡಿಯೂ ತಮಗೆ ಜಾಮೀನು ನೀಡಿರುವ ನ್ಯಾಯಾಲಯದ ಋಣ ಸಂದಾಯ ಮಾಡುವ ಉದ್ದೇಶದಿಂದಲೋ ಎಂಬಂತೆ ಆರೋಪಿಗಳಲ್ಲೋರ್ವನಾಗಿರುವ ಮಿಥುನ್ ಅಮಾಯಕ ತರುಣರ ಮೇಲೆ ಇತ್ತೀಚೆಗೆ ಚೂರಿಯಿಂದ ಬರ್ಬರವಾಗಿ ಹಲ್ಲೆ ನಡೆಸಿದ್ದಾನೆ. ಆರೋಪಿಗಳನ್ನು ಕಂಡುಹುಡುಕುವಲ್ಲಿ ಪೊಲೀಸರು ಯಶಸ್ವಿಯಾದರಾದರೂ, ಪ್ರಮುಖ ಆರೋಪಿ ಮಿಥುನ್‌ನನ್ನು ಬಂಧಿಸುವುದಕ್ಕೆ ಇನ್ನೂ ವಿಫಲರಾಗಿದ್ದಾರೆ.

ಕಲ್ಲಡ್ಕದಲ್ಲಿ ಮಾತ್ರ ಅಲ್ಲ, ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳಿಗೆ ನಾವು ಕೇವಲ ಸಂಘಪರಿವಾರದ ಪ್ರಭಾಕರ ಭಟ್ಟರನ್ನಷ್ಟೇ ಹೊಣೆ ಮಾಡುವುದರಿಂದ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ಸಾಧ್ಯವಿಲ್ಲ. ಪ್ರಭಾಕರ ಭಟ್ಟ ಮತ್ತು ಆತನ ಸಂಘಟನೆಗಳು ಸಮಾಜಕ್ಕೆ ಬೆಂಕಿ ಹಚ್ಚಿ ಅದರಿಂದ ರಾಜಕೀಯ ಲಾಭ ಪಡೆಯುವುದಕ್ಕಾಗಿಯೇ ಇರುವಂತಹದ್ದು.

ಆದರೆ ನಾವಿಂದು ಆತಂಕ ಪಡಬೇಕಾದುದು ದುಷ್ಕರ್ಮಿಗಳನ್ನು ಹದ್ದು ಬಸ್ತಿನಲ್ಲಿಡಬೇಕಾದ ನ್ಯಾಯಾಲಯಗಳೇ ಪರೋಕ್ಷವಾಗಿ ಗಲಭೆಗಳನ್ನು ಸಮ್ಮತಿಸುತ್ತಿರುವುದರ ಕುರಿತಂತೆ. ಭುವಿತ್ ಶೆಟ್ಟಿ ಎನ್ನುವ ಯುವಕನನ್ನು ಒಬ್ಬ ಕೊಲೆಗಾರನಾಗಿ ಪರಿವರ್ತಿಸುವಲ್ಲಿ ನ್ಯಾಯಾಲಯದ ಪಾತ್ರ ಬಹುದೊಡ್ಡದು. ‘ಕಲಬುರ್ಗಿಯ ಕೊಲೆ’ಯನ್ನು ಬೆಂಬಲಿಸಿ ಹೇಳಿಕೆ ನೀಡಿದ್ದ ಭುವಿತ್ ಶೆಟ್ಟಿ ಕೆಲವು ವಾರಗಳ ಕಾಲವಾದರೂ ಜೈಲಿನಲ್ಲಿ ಕಳೆದಿದ್ದರೆ, ಒಂದಿಷ್ಟು ಕಾನೂನಿನ ಕುರಿತಂತೆ ಭಯಭಕ್ತಿಯಿಂದ ನಡೆದುಕೊಳ್ಳುತ್ತಿದ್ದನೋ ಏನೋ? ಆದರೆ ತನ್ನ ಕೃತ್ಯಕ್ಕೆ ಯಾವಾಗ ಕೆಲವೇ ಗಂಟೆಗಳಲ್ಲಿ ಜಾಮೀನು ಸಿಕ್ಕಿತೋ, ಆಗ ನ್ಯಾಯಾಲಯ ತನ್ನ ಕೃತ್ಯವನ್ನು ಪರೋಕ್ಷವಾಗಿ ಸಮ್ಮತಿಸಿದೇ ಎಂದು ತಿಳಿದುಕೊಂಡ.

ಅದು ಅವನಿಗೆ ಇನ್ನಷ್ಟು ಕೃತ್ಯಗಳನ್ನು ಎಸಗಲು ಪ್ರೇರೇಪಿಸಿತು. ಸರಿ. ಹರೀಶ್ ಪೂಜಾರಿ ಎನ್ನುವ ಅಮಾಯಕ ಯುವಕನನ್ನು ಬರ್ಬರವಾಗಿ ಕೊಂದ ಬಳಿಕವಾದರೂ ಭುವಿತ್ ಮತ್ತು ಮಿಥುನ್‌ನಂತ ಪುಡಿ ರೌಡಿಗಳನ್ನು ಜೈಲಿನಲ್ಲಿಟ್ಟು ಅವರನ್ನು ಮನುಷ್ಯರನ್ನಾಗಿ ರೂಪಿಸುವುದು ಕಾನೂನಿನ ಕೆಲಸವಾಗಿತ್ತು. ಆದರೆ ಇಬ್ಬರಿಗೂ ಸುಲಭದಲ್ಲಿ ಜಾಮೀನು ದೊರಕಿತು. ಈ ಇಬ್ಬರು ಬಿಡುಗಡೆಗೊಂಡು ಬಂದ ಬಳಿಕ, ಕಲ್ಲಡ್ಕ ಪರಿಸರದಲ್ಲಿ ಪುಡಿ ರೌಡಿಗಳಿಗಳೆಲ್ಲ ಬೀದಿಗಳಲ್ಲಿ ಕಂಬಳಿ ಹುಳಗಳಂತೆ ಓಡಾಡಿ ಜನಸಾ ಮಾನ್ಯರಿಗೆ ಕಿರುಕುಳ ನೀಡಲು ಆರಂಭಿಸಿದ್ದಾರೆ.

ವಾರಗಳ ಹಿಂದೆ ನಡೆದ ಚೂರಿ ಇರಿತ ಒಂದು ದೊಡ್ಡ ಗಲಭೆಯನ್ನು ಸೃಷ್ಟಿಸುವ ಉದ್ದೇಶದಿಂದಲೇ ನಡೆದಿತ್ತು ಮತ್ತು ಅದರ ಹಿಂದೆ ಪ್ರಭಾಕರ ಭಟ್ಟರಂತ ದೇಶ ವಿರೋಧಿ ಶಕ್ತಿಗಳ ಕೈಗಳಿವೆ ಎಂದು ವಿವಿಧ ಸಂಘಟನೆಗಳು ಆರೋಪಿಸಿದ್ದವು. ಇದೀಗ ಪೊಲೀಸರು ಮತ್ತು ಕಾನೂನಿನ ದಿವ್ಯ ನಿರ್ಲಕ್ಷದ ಪರಿಣಾಮ ಮತ್ತೆ ಕಲ್ಲಡ್ಕದಲ್ಲಿ ಚೂರಿ ಇರಿತ ಸಂಭವಿಸಿದೆ. ಹಾಗೆಯೇ ಮಸೀದಿಗೆ ಕಲ್ಲುತೂರಾಟವೂ ನಡೆದಿದೆ. ಮುಸ್ಲಿಮರನ್ನು ಗಲಭೆಗಳಿಗೆ ಪ್ರಚೋದಿಸುವುದು ಸದ್ಯಕ್ಕೆ ಸಂಘಪರಿವಾರದ ಪ್ರಮುಖ ಅಜೆಂಡಾ ಆಗಿದೆ. ಎಲ್ಲ ಸಮುದಾಯಗಳು ಈ ಸಂದರ್ಭದಲ್ಲಿ ಗರಿಷ್ಠ ವಿವೇಕ, ಸಂಯಮದಿಂದ ಸಂಘಪರಿವಾರದ ಸಂಚನ್ನು ವಿಫಲಗೊಳಿಸಬೇಕಾಗಿದೆ.

ಎಲ್ಲ ಸಮುದಾಯದ ಮುಖಂಡರು ಈ ಸಂದರ್ಭದಲ್ಲಿ ಬಾಯಿ ಮುಚ್ಚಿ ಕೂರದೆ ಉಭಯ ಸಮುದಾಯಕ್ಕೆ ಪರಸ್ಪರ ಸೇತುಗಳಾಗಿ ಸೌಹಾರ್ದದ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳಬೇಕು. ಹಾಗೆಯೇ ಯಾವುದೇ ಗಲಭೆಗಳ ಹಿಂದೆ ಕಾನೂನು ವ್ಯವಸ್ಥೆಯ ದೌರ್ಬಲ್ಯಗಳೇ ಪ್ರಧಾನ ಪಾತ್ರವಹಿಸುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಶ್ರೀಸಾಮಾನ್ಯರ ಬದುಕು ಜಿಲ್ಲಾ ಪೊಲೀಸರ ಕೈಯಲ್ಲಿದೆ. ನಿದ್ದೆ ಮಾಡುತ್ತಿರುವ ಪೊಲೀಸರನ್ನು ಎಚ್ಚರಿಸ ಬೇಕಾದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಾಢ ನಿದ್ದೆಯಲ್ಲಿರುವ ಉಸ್ತುವಾರಿ ಸಚಿವರು ಮೊದಲು ಎಚ್ಚರಗೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News