ಒಂದೇ ನಿಮಿಷದಲ್ಲಿ ಗಮನ ಸೆಳೆಯುವ ರೆಸ್ಯುಮ್ ಮಾಡುವುದು ಹೇಗೆ ?

Update: 2017-06-14 09:41 GMT

ನೀವು ಕೆಲಸಕ್ಕಾಗಿ ಸಲ್ಲಿಸುವ ಅರ್ಜಿಯೊಂದಿಗೆ ನಿಮ್ಮ ಸಂಪೂರ್ಣ ವಿವರಗಳನ್ನು ಅಥವಾ ರೆಸ್ಯುಮ್ ಅನ್ನು ಸಲ್ಲಿಸುವುದು ಅಗತ್ಯವಾಗಿದೆ. ನೀವು ಎಷ್ಟೇ ಶ್ರಮಪಟ್ಟು ರೆಸ್ಯುಮ್ ತಯಾರಿಸಿದ್ದರೂ ನೇಮಕ ಮಾಡಿಕೊಳ್ಳುವವರಿಗೆ ಅದನ್ನೆಲ್ಲ ಓದುತ್ತ ಕುಳಿತುಕೊಳ್ಳುವ ಪುರಸೊತ್ತು ಇರುವುದಿಲ್ಲ. ಅವರು ಭರ್ತಿ ಮಾಡಬೇಕಾಗಿರುವ ಪ್ರತಿಯೊಂದು ಹುದ್ದೆಗೂ ಸೂಕ್ತ ಅಭ್ಯರ್ಥಿಯನ್ನು ಕಂಡುಕೊಳ್ಳಲು ನೂರಾರು ರೆಸ್ಯುಮ್‌ಗಳನ್ನು ಪರಿಶೀಲಿಸುವುದು ಅವರಿಗೆ ನಿಜಕ್ಕೂ ಕಷ್ಟದ ಕೆಲಸ. ಅಭ್ಯರ್ಥಿಯನ್ನು ಸಂದರ್ಶನದ ಶಾರ್ಟ್‌ಲಿಸ್ಟ್‌ಗೆ ಸೇರಿಸಬೇಕೇ ಎಂದು ನಿರ್ಧರಿಸುವ ಮುನ್ನ ಅವರಿಗೆ ಪ್ರತಿ ರೆಸ್ಯುಮ್‌ನ್ನು ಪರಿಶೀಲಿಸಲು ಹೆಚ್ಚೆಂದರೆ ಒಂದು ನಿಮಿಷ ದೊರೆಯುತ್ತದೆ, ಅಷ್ಟೇ.

ರೆಸ್ಯುಮ್‌ಗಳನ್ನು ಶಾರ್ಟ್‌ಲಿಸ್ಟ್ ಮಾಡಲು ಮತ್ತು ಅಭ್ಯರ್ಥಿಗಳ ಆಯ್ಕೆಗಾಗಿ ನೇಮಕಾತಿ ಮಾಡಿಕೊಳ್ಳುವವರು ಅನುಸರಿಸುವ ಮಾನದಂಡವನ್ನು ತಿಳಿದುಕೊಳ್ಳಲು ಅಂತಹ 690 ವ್ಯಕ್ತಿಗಳನ್ನು ಸಮೀಕ್ಷೆಗೊಳಪಡಿಸಲಾಗಿತ್ತು. ನೇಮಕಾತಿ ಮಾಡಿಕೊಳ್ಳುವವರು ಅಭ್ಯರ್ಥಿಯ ರೆಸ್ಯುಮ್‌ನಲ್ಲಿ ಏನನ್ನು ಬಯಸುತ್ತಾರೆ ಎಂಬ ಕುರಿತ ಅಧ್ಯಯನ ವರದಿ ಇಲ್ಲಿದೆ.

  ಹೆಚ್ಚಿನ ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುವ ಹುದ್ದೆಗೆ ಅಗತ್ಯವಿರುವ ಕೌಶಲ್ಯಗಳನ್ನು ಹೊಂದಿರುತ್ತಾರಾದರೂ, ಅವುಗಳ ಪೈಕಿ ಸರಿಯಾದ್ದನ್ನು ಪ್ರಮುಖವಾಗಿ ಬಿಂಬಿಸುವುದು ಒಂದು ಸವಾಲು ಆಗಿದೆ. ಹುದ್ದೆಗೆ ಸಂಬಂಧವೇ ಇಲ್ಲದ ಕೌಶಲ್ಯಗಳನ್ನು ಬರೆದು ರೆಸ್ಯುಮ್‌ನ್ನು ತುಂಬಿಸಬೇಕಿಲ್ಲ, ಈ ಬಗ್ಗೆ ಎಚ್ಚರಿಕೆ ಅಗತ್ಯ. ಅಭ್ಯರ್ಥಿಗಳು ತಾವು ಉಲ್ಲೇಖಿಸಿರುವ ಕೌಶಲ್ಯಗಳನ್ನು ಸಮರ್ಥಿಸಿಕೊಳ್ಳುವುದೂ ಅಗತ್ಯವಾಗಿದೆ ಎನ್ನುವುದೂ ಅಷ್ಟೇ ಮುಖ್ಯ. ಆದ್ದರಿಂದ ಅಭ್ಯರ್ಥಿಗಳು ತಮ್ಮ ರೆಸ್ಯುಮ್‌ನಲ್ಲಿ ಯಾವ ಕೌಶಲ್ಯಗಳನ್ನು ಉಲ್ಲೇಖಿಸುತ್ತಾರೆ ಎನ್ನುವುದು ಮಾತ್ರವಲ್ಲ,ಅವರು ಅವುಗಳನ್ನು ಹೇಗೆ ಮುಖ್ಯವಾಗಿ ಬಿಂಬಿಸುತ್ತಾರೆ ಎನ್ನುವುದೂ ಮಹತ್ವದ್ದಾಗಿದೆ ಎನ್ನುತ್ತಾರೆ ಟೈಮ್ಸ್ ಜಾಬ್ಸ್‌ನ ಬಿಜಿನೆಸ್ ಹೆಡ್ ರಾಮಾತ್ರೇಯ ಕೃಷ್ಣಮೂರ್ತಿ.

 ಪ್ರತಿಯೊಬ್ಬ ಅಭ್ಯರ್ಥಿಯೂ ತನ್ನ ರೆಸ್ಯುಮ್‌ನ್ನು ಹುದ್ದೆಗೆ ತಕ್ಕಂತೆ ಸಿದ್ಧಗೊಳಿಸಬೇಕು ಮತ್ತು ತನ್ನ ವಿಶಿಷ್ಟ ಕೌಶಲ್ಯ ಹಾಗೂ ಹುದ್ದೆಗೆ ಅಗತ್ಯವಾಗಿರುವ ಅನುಭವವನ್ನು ಸರಿಯಾಗಿ ಬಿಂಬಿಸಬೇಕು. ಹುದ್ದೆಗೆ ಸಂಬಂಧಪಟ್ಟ ಕೌಶಲ್ಯಗಳ ಮೇಲೆ ಗಮನ ಹರಿಸುವುದು ಶಾರ್ಟ್‌ಲಿಸ್ಟ್ ಆಗಲು ಅತ್ಯುತ್ತಮ ಮಾರ್ಗವಾಗಿದೆ ಎಂದು ಸುಮಾರು ಶೇ.40ರಷ್ಟು ಹೈರಿಂಗ್ ಮ್ಯಾನೇಜರ್(ಎಚ್‌ಎಂ)ಗಳು ಅಭಿಪ್ರಾಯಿಸಿದ್ದಾರೆ.

 ವಿಶ್ಲೇಷಣಾ ಕೌಶಲ್ಯ, ಟೀಮ್‌ವರ್ಕ್ ಮತ್ತು ನಾಯಕತ್ವದಂತಹ, ಹುದ್ದೆಗೆ ಸೂಕ್ತವಾದ ಸಾರ್ವತ್ರಿಕವಾಗಿ ಅಪೇಕ್ಷಿಸಲಾಗುವ ಕೌಶಲ್ಯಗಳನ್ನು ಬಿಂಬಿಸಿದರೆ ಅದು ರೆಸ್ಯುಮ್‌ನ್ನು ವಿಭಿನ್ನವಾಗಿಸುವಲ್ಲಿ ನೆರವಾಗುತ್ತದೆ ಎನ್ನುತ್ತಾರೆ ಶೇ.36ರಷ್ಟು ಎಚ್‌ಎಂಗಳು.

ರೆಸ್ಯುಮ್‌ಗೆ ಹೆಚ್ಚಿನ ವೌಲ್ಯವನ್ನು ಒದಗಿಸಬಲ್ಲ ಕೌಶಲ್ಯಗಳನ್ನು ಸೇರಿಸುವುದು ಒಳ್ಳೆಯದು ಎನ್ನುತ್ತಾರೆ ಶೆ.35ರಷ್ಟು ಎಚ್‌ಎಂಗಳು. ಉದಾಹರಣೆಗೆ ಬ್ಯಾಂಕಿಂಗ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ, ಅಗತ್ಯವೆಂದು ಜಾಹೀರಾತಿನಲ್ಲಿ ಉಲ್ಲೇಖಿಸಿರದಿದ್ದರೂ ಫೈನಾನ್ಸಿಯಲ್ ಡಾಟಾ ಅನಲೈಸಿಂಗ್ ಸಾಫ್ಟ್‌ವೇರ್ ಬಳಸಿ ತನ್ನ ಅನುಭವವನ್ನು ರೆಸ್ಯುಮ್‌ನಲ್ಲಿ ಸೇರಿಸಬಹುದು.

ಅಭ್ಯರ್ಥಿಯೋರ್ವ ತನ್ನ ರೆಸ್ಯುಮ್‌ನಲ್ಲಿ ತನ್ನ ಕೌಶಲ್ಯಗಳು ಮತ್ತು ಅನುಭವಗಳನ್ನು ಸಮರ್ಥಿಸಿಕೊಳ್ಳಲು ಅಂಕಿಅಂಶಗಳನ್ನು ಒದಗಿಸಿದರೆ ಅದು ನೇಮಕ ಮಾಡಿಕೊಳ್ಳುವವರ ಗಮನ ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುತ್ತಾರೆ ಶೇ.21ರಷ್ಟು ಎಚ್‌ಎಂಗಳು. ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಆ ಕ್ಷೇತ್ರದಲ್ಲಿನ ಜ್ಞಾನ ಪ್ರಮುಖವಾಗುತ್ತದೆಯಾದರೂ ತಾಂತ್ರಿಕೇತರ ಕೌಶಲ್ಯಗಳು ಅಥವಾ ಸಾಫ್ಟ್ ಸ್ಕಿಲ್ಸ್ ಅಭ್ಯರ್ಥಿಯನ್ನು ನೇಮಕ ಮಾಡಿಕೊಳ್ಳುವಲ್ಲಿ ನಿರ್ಣಾಯಕವಾಗಿರುತ್ತವೆ ಎನ್ನುತ್ತಾರೆ ಶೇ.60 ರಷ್ಟು ಹೈರಿಂಗ್ ಮ್ಯಾನೇಜರ್‌ಗಳು.

ಸಂವಹನ ಕೌಶಲ್ಯ,ನಾಯಕತ್ವ ಕೌಶಲ್ಯ ಮತ್ತು ಟೀಮ್ ವರ್ಕ್ ಇವು ನೇಮಕ ಮಾಡಿಕೊಳ್ಳುವವರು ರೆಸ್ಯುಮ್‌ವೊಂದರಲ್ಲಿ ಅಪೇಕ್ಷಿಸುವ ಮೂರು ಬಹು ಮುಖ್ಯ ಕೌಶಲ್ಯಗಳಾಗಿವೆ.

ರೆಸ್ಯುಮ್ ಅಭ್ಯರ್ಥಿ ಮತ್ತು ಉದ್ಯೋಗದಾತರ ನಡುವಿನ ಮೊದಲ ಸಂಪರ್ಕ ಕೊಂಡಿಯಾಗಿರುತ್ತದೆ ಮತ್ತು ಇದು ಬೀರುವ ಪ್ರಭಾವವು ವೃತ್ತಿಜೀವನದಲ್ಲಿ ಮುಂದುವರಿಯಲು ಮುಖ್ಯವಾಗಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News