ಟ್ರಂಪ್ ವಿನಾಶಕಾರಿ ನೀತಿ

Update: 2017-06-14 18:46 GMT

ಸಕಲ ಜೀವಸಂಕುಲಕ್ಕೆ ಆಸರೆ ನೀಡಿದ ಈ ಭೂಮಂಡಲ ಸುರಕ್ಷಿತವಾಗಿರಬೇಕೆಂಬ ಆಶಯ ಎಲ್ಲರದ್ದೂ ಆಗಿದೆ. ಆದರೆ, ಈ ಭೂಮಿಯ ಮೇಲೆ ಹಿಡಿತವನ್ನು ಸಾಧಿಸಿ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಲು ಹೊರಟ ಶಕ್ತಿಗಳಿಗೆ ಭೂಮಂಡಲದ ಸುರಕ್ಷತೆಯ ಬಗ್ಗೆ ಕಾಳಜಿ ಇಲ್ಲ. ಈ ಶಕ್ತಿಗಳನ್ನು ಪ್ರತಿನಿಧಿಸುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದಾಗಿನಿಂದ ಅತ್ಯಂತ ಅವಿವೇಕತನದಿಂದ ವರ್ತಿಸುತ್ತಿದ್ದಾರೆ. ಅಮೆರಿಕದ ಹಿತಾಸಕ್ತಿಗೆ ಮಾರಕವಾಗಿದೆಯೆಂಬ ಕಾರಣ ನೀಡಿ, ಈ ಹಿಂದೆ ಮಾಡಿಕೊಳ್ಳಲಾದ ಪ್ಯಾರಿಸ್ ಒಪ್ಪಂದದಿಂದ ಅಮೆರಿಕ ಹಿಂದೆ ಸರಿಯುವುದಾಗಿ ಅವರು ಪ್ರಕಟಿಸಿದ್ದಾರೆ. ಟ್ರಂಪ್‌ಗೆ ಮುನ್ನ ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಈ ಒಪ್ಪಂದದ ಬಗ್ಗೆ ಅತ್ಯಂತ ಕಾಳಜಿಯಿಂದ ಸ್ಪಂದಿಸಿದ್ದರು.

ಮನುಕುಲದ ಒಳಿತಿಗೆ ಇದು ಅತ್ಯಗತ್ಯ ಎಂದು ಪ್ರತಿಪಾದಿಸಿದ್ದರು. ಆದರೆ, ಒಬಾಮಾಗೆ ಇದ್ದ ವಿವೇಕ ಟ್ರಂಪ್‌ಗೆ ಇಲ್ಲ. ಲಾಭಕೋರ ಉದ್ಯಮಿಗಳ ಕೈಗೆ ದೇಶದ ಅಧಿಕಾರ ದೊರಕಿದರೆ ಏನಾಗುತ್ತದೆ ಎಂಬುದಕ್ಕೆ ಈ ಟ್ರಂಪ್ ಉದಾಹರಣೆಯಾಗಿದ್ದಾರೆ. ಸಿರಿವಂತಿಕೆಯ ಸುಪ್ಪತ್ತಿಗೆಯಲ್ಲಿ ಬೆಳೆದ ಟ್ರಂಪ್‌ಗೆ ಭೂಮಂಡಲದ ಸುರಕ್ಷತೆಯ ಬಗ್ಗೆ ಕಾಳಜಿ ಇಲ್ಲ. ಭೂಮಿ ಹಾಳಾಗಿ ಹೋದರೆ ಹೋಗಲಿ ನಮಗೇನು, ಅಮೆರಿಕದ ಐಶಾರಾಮಿ ಜೀವನಕ್ಕೆ ತೊಂದರೆಯಾಗದಿದ್ದರೆ ಸಾಕು ಎಂಬುದು ಅವರ ಧೋರಣೆಯಾಗಿದೆ. ಚುನಾವಣೆಗೆ ಸ್ಪರ್ಧಿಸಿದ್ದಾಗಲೂ ಕೂಡಾ ಪ್ಯಾರಿಸ್ ಒಪ್ಪಂದದಿಂದ ಹೊರಗೆ ಬರುವುದಾಗಿ ಅವರು ಹೇಳುತ್ತಲೇ ಇದ್ದರು. ಆದರೂ ಗೆದ್ದು ಬಂದರು!

ಚುನಾವಣಾ ಗೆಲುವಿನ ಆ ನಂತರ ದೊರೆತ ಅಧಿಕಾರ ಅವರಿಗೆ ವಿವೇಕವನ್ನು ನೀಡಲಿಲ್ಲ. ದುಡ್ಡಿನ ಮದದ ಜೊತೆಗೆ ಅಧಿಕಾರದ ಮದವೂ ಸೇರಿ ಹುಚ್ಚುಹುಚ್ಚಾಗಿ ವರ್ತಿಸುತ್ತಿದ್ದಾರೆ. ಈ ಜಗತ್ತಿನಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ಮಿತಿಮೀರಿ ಬಳಸಿದ ಪರಿಣಾಮವಾಗಿ ಹಾಗೂ ಲಂಗುಲಗಾಮಿಲ್ಲದ ಕೈಗಾರಿಕೀಕರಣದಿಂದಾಗಿ ಭೂಮಿಯ ತಾಪಮಾನ ಹೆಚ್ಚಿದೆ ಎಂಬುದರಲ್ಲಿ ಭಿನ್ನಾಭಿಪ್ರಾಯವಿಲ್ಲ. ಆದರೆ, ನೈಸರ್ಗಿಕ ಸಂಪನ್ಮೂಲಗಳನ್ನು ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಬಳಸಿ ಜಗತ್ತಿನ ಈ ದುಸ್ಥಿತಿಗೆ ಕಾರಣವಾದ ದೇಶ ಅಮೆರಿಕ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಅನಾಹುತಕ್ಕೆ ಕಾರಣವಾದ ಅಮೆರಿಕ ಜಾಗತಿಕ ತಾಪಮಾನವನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಆದರೆ, ವಿಷಾದದ ಸಂಗತಿಯೆಂದರೆ ಈ ಹೊಣೆಗಾರಿಕೆಗೂ ತಮಗೂ ಸಂಬಂಧವೇ ಇಲ್ಲವೆಂಬಂತೆ ಟ್ರಂಪ್ ವರ್ತಿಸುತ್ತಿದ್ದಾರೆ.

‘ಪ್ಯಾರಿಸ್ ಒಪ್ಪಂದದಿಂದ ಅತೀ ಹೆಚ್ಚು ಲಾಭ ಆಗುವುದು ಭಾರತ ಮತ್ತು ಚೀನಾಗಳಿಗೆ. ಈ ಒಪ್ಪಂದದಿಂದ ಅಮೆರಿಕಕ್ಕೆ ಅನ್ಯಾಯವಾಗುತ್ತದೆ’ ಎಂದು ಟ್ರಂಪ್ ಮಾಡುತ್ತಿರುವ ವಾದದಲ್ಲಿ ಹುರುಳಿಲ್ಲ. ಹಲವಾರು ವರ್ಷಗಳ ಹಿಂದೆಯೇ ಔದ್ಯಮಿಕ ಕ್ಷೇತ್ರದಲ್ಲಿ ಪ್ರಗತಿಯನ್ನು ಸಾಧಿಸಿ ನೈಸರ್ಗಿಕ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಾ ಬಂದ ಅಮೆರಿಕ ಇದೀಗ ಕೈಗಾರಿಕಾ ಕ್ಷೇತ್ರದಲ್ಲಿ ಹೆಜ್ಜೆ ಇಡುತ್ತಿರುವ ಚೀನಾ ಮತ್ತು ಭಾರತದಂತಹ ದೇಶಗಳ ಬಗ್ಗೆ ಇಂತಹ ಸುಳ್ಳು ಆರೋಪ ಮಾಡುತ್ತಿರುವುದು ಸರಿಯಲ್ಲ. ಇಂತಹ ಸುಳ್ಳು ನೆಪಗಳನ್ನು ಮುಂದಿಟ್ಟು ಒಪ್ಪಂದದಿಂದ ಹಿಂದೆ ಸರಿಯುವುದು ಖಂಡನೀಯವಾಗಿದೆ. ಜಾಗತಿಕ ತಾಪಮಾನ ಹೆಚ್ಚಳವನ್ನು ತಡೆಯುವುದು ಕೇವಲ ಒಂದು ದೇಶದ ಜವಾಬ್ದಾರಿಯಲ್ಲ. ಜಗತ್ತಿನ ಎಲ್ಲ ದೇಶಗಳು ಒಮ್ಮನಸ್ಸಿನಿಂದ ಇದಕ್ಕೆ ಮುಂದಾಗಬೇಕು. ಪ್ಯಾರಿಸ್ ಒಪ್ಪಂದಕ್ಕೆ ಜಗತ್ತಿನ ಎಲ್ಲ ದೇಶಗಳ ಸರಕಾರಗಳು ಬೆಂಬಲ ನೀಡಬೇಕು.

ಈ ಭೂಮಿ ಉಳಿದರೆ ಮಾತ್ರ ಮನುಷ್ಯ ಸೇರಿದಂತೆ ಇಡೀ ಜೀವರಾಶಿ ಸುರಕ್ಷಿತವಾಗಿ ಉಳಿಯುತ್ತದೆ. ಈ ಭೂಮಂಡಲ ನಾಶವಾದರೆ ಅಮೆರಿಕ ಸೇರಿದಂತೆ ಜಗತ್ತಿನ ಯಾವ ದೇಶವೂ ಉಳಿಯುವುದಿಲ್ಲ. ಸಣ್ಣಮಕ್ಕಳಿಗೂ ಅರ್ಥವಾಗುವ ಇಂತಹ ಸಾಮಾನ್ಯ ಸಂಗತಿ ಹಣದ ಮದದಿಂದ ಹೂಂಕರಿಸುತ್ತಿರುವ ಟ್ರಂಪ್‌ಗೆ ಅರ್ಥವಾಗುವುದಿಲ್ಲ. ಅವರಿಗೆ ಅರ್ಥವಾಗದಿದ್ದರೆ ಅರ್ಥಮಾಡಿಕೊಡಲು ಜಗತ್ತಿನ ಎಲ್ಲ ದೇಶಗಳು ಅಮೆರಿಕದ ಮೇಲೆ ಒತ್ತಡ ಹೇರಬೇಕು. ಈಗ ಸುಮ್ಮನಿದ್ದರೆ ಜಗತ್ತಿಗೆ ಉಳಿಗಾಲವಿಲ್ಲ. ಪ್ಯಾರಿಸ್ ಒಪ್ಪಂದಕ್ಕೆ ಸಹಿ ಮಾಡಿದ ಎಲ್ಲ ದೇಶಗಳು ತಮ್ಮ ಮಾತಿಗೆ ತಕ್ಕಂತೆ ನಡೆದುಕೊಂಡರೆ ಜಾಗತಿಕ ತಾಪಮಾನದ ಪ್ರಮಾಣ ಕಡಿಮೆಯಾಗಬಹುದು. ಈ ಗುರಿಯನ್ನು ಸಾಧಿಸಲು ಜಾಗತಿಕ ನಾಯಕರು ದೂರದೃಷ್ಟಿಯಿಂದ ತಮ್ಮ ವಿವೇಚನೆಯನ್ನು ಪ್ರದರ್ಶಿಸಬೇಕಾಗಿದೆ.

ಸಾಂಪ್ರದಾಯಿಕ ಇಂಧನ ಬಳಕೆಗೆ ಕಡಿವಾಣ ಹಾಕಬೇಕಾಗಿದೆ. ಪ್ಯಾರಿಸ್ ಒಪ್ಪಂದದ ಪ್ರಕಾರ ಕಲ್ಲಿದ್ದಲು, ಡೀಸೆಲ್, ಪೆಟ್ರೋಲ್ ಬಳಕೆಯನ್ನು ಕಡಿಮೆ ಮಾಡಬೇಕು. ಸೌರಶಕ್ತಿ ಮತ್ತು ಪವನಶಕ್ತಿಗಳನ್ನು ನಾವು ಇನ್ನುಮುಂದೆ ಹೆಚ್ಚಾಗಿ ಅವಲಂಬಿಸಬೇಕು. ಈ ನಿಟ್ಟಿನಲ್ಲಿ ಭಾರತ ಈಗಾಗಲೇ ಮಹತ್ತರ ಹೆಜ್ಜೆಯನ್ನು ಇರಿಸಿದೆ. ಅಮೆರಿಕ ಕೂಡಾ ಈ ವಾಸ್ತವ ಸಂಗತಿಯನ್ನು ಅರ್ಥಮಾಡಿಕೊಂಡು ಪ್ಯಾರಿಸ್ ಒಪ್ಪಂದದ ಸೂತ್ರಗಳಿಗೆ ಬದ್ಧವಾಗಿ ಉಳಿಯಬೇಕು. ಹವಾಮಾನ ಬದಲಾವಣೆಗೆ ಸಂಬಂಧಿಸಿದ ಆತಂಕಕ್ಕಿಂತಲೂ ಅಮೆರಿಕನ್ನರ ಉದ್ಯೋಗವೇ ತನಗೆ ಹೆಚ್ಚು ಮುಖ್ಯ ಎಂಬ ಮಾತನ್ನು ಡೊನಾಲ್ಡ್ ಟ್ರಂಪ್ ಆಡಿರುವುದು ಸರಿಯಲ್ಲ.

ಪ್ಯಾರಿಸ್ ಒಪ್ಪಂದಕ್ಕೆ ಬದ್ಧವಾಗಿ ನಡೆದುಕೊಂಡರೆ ಮುಂದಿನ ಏಳು ವರ್ಷಗಳಲ್ಲಿ 27 ಲಕ್ಷ ಉದ್ಯೋಗಗಳು ನಷ್ಟವಾಗುತ್ತವೆ ಎಂಬ ಅವರ ಮಾತು ಸತ್ಯಾಂಶದಿಂದ ಕೂಡಿಲ್ಲ. ತಾಪಮಾನ ಹೆಚ್ಚಳಕ್ಕೆ ಸಂಬಂಧಿಸಿದ ಅಂಕಿಅಂಶಗಳು ತೀರಾ ಸ್ಪಷ್ಟವಾಗಿದೆ. ಜಗತ್ತು ಇಂದು ಅಪಾಯಕಾರಿ ಸನ್ನಿವೇಶದಲ್ಲಿದೆ. ಜಾಗತಿಕ ತಾಪಮಾನ ಏರಿಕೆಗೆ ಮಾನವನ ಕೊಡುಗೆ ಸಾಕಷ್ಟಿದೆ. ಅಭಿವೃದ್ಧಿಯ ಹೆಸರಿನಲ್ಲಿ ವಾತಾವರಣ ಮಲಿನಗೊಳ್ಳಲು ನಾವು ಕಾರಣರಾಗಿದ್ದೇವೆ. ಹವಾಮಾನ ಬದಲಾವಣೆಯ ಪರಿಣಾಮವಾಗಿ ಭಾರತದಂತಹ ದೇಶದಲ್ಲಿ ಸಮುದ್ರದ ಮಟ್ಟದಲ್ಲಿ ಏರಿಕೆಯಾಗಲಿದೆ.

ಇದು ಮುಂಬೈ, ಚೆನ್ನೈ, ಕೋಲ್ಕತ್ತಾದಂತಹ ಸಮುದ್ರ ತೀರದ ಪ್ರದೇಶಗಳಿಗೆ ಹೊಸ ಸಮಸ್ಯೆಯನ್ನು ಉಂಟುಮಾಡಲಿದೆ. ಅಷ್ಟೇ ಅಲ್ಲದೆ ಮುಂಗಾರು ಮಳೆ ಅನಿಶ್ಚಿತವಾಗಲಿದೆ ಮತ್ತು ಕೃಷಿ ಉತ್ಪಾದನೆಗೂ ಪೆಟ್ಟು ಬೀಳಲಿದೆ. ಈ ಕಾರಣಕ್ಕಾಗಿಯೇ ಜಗತ್ತಿನ ಎಲ್ಲ ದೇಶಗಳು ಒಮ್ಮತದಿಂದ ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿದ್ದವು. ಆದರೆ, ಟ್ರಂಪ್ ಅಪಸ್ವರದಿಂದಾಗಿ ಈ ಒಪ್ಪಂದಕ್ಕೆ ಈಗ ಹಿನ್ನಡೆಯಾಗುವ ಸಂಭವವಿದೆ. ಜಗತ್ತಿನ ಎಲ್ಲ ದೇಶಗಳು ಒತ್ತಡ ತಂದು ಒಪ್ಪಂದಕ್ಕೆ ಬದ್ಧವಾಗಿ ಉಳಿಯುವಂತೆ ಅಮೆರಿಕದ ಮನವೊಲಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News