ಪೌರ ಕಾರ್ಮಿಕರಿಂದ ಬರಿಗೈಲಿ ಕಸ ಬಾಚಿಸುವ ನಗರಸಭೆ ಗುತ್ತಿಗೆದಾರ

Update: 2017-06-15 10:17 GMT

ಹಾಸನ, ಜೂ.15: ನಗರವನ್ನು ಸ್ವಚ್ಛಗೊಳಿಸುವ ಪೌರ ಕಾರ್ಮಿಕರಿಗೆ ಸ್ವಚ್ಛತಾ ಪರಿಕರಗಳನ್ನು ಕೊಡದೆ ವಂಚಿಸಿ ಬರಿಗೈಲಿ ಕೆಲಸ ಮಾಡಿಸುತ್ತಿರುವ ಗುತ್ತಿಗೆದಾರರ ಮೇಲೆ ಕ್ರಿಮಿನಲ್ ಕೇಸು ದಾಖಲಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ)ಯ ರಾಜ್ಯ ಸಂಘಟನಾ ಸಂಚಾಲಕ ಹೆತ್ತೂರು ನಾಗರಾಜ್ ಒತ್ತಾಯಿಸಿದ್ದಾರೆ.

ಹಾಸನ ನಗರಸಭೆಯಲ್ಲಿ ಇನ್ನೂರಕ್ಕೂ ಹೆಚ್ಚು ಗುತ್ತಿಗೆ ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದು ಅವರಿಗೆ ಬೇಕಾದ ಜೀವ ರಕ್ಷಕ ಪರಿಕರಗಳಾದ ಕೈಚೀಲ, ಕಾಲಿಗೆ ಬೂಟು ಹಾಗೂ ಮುಖಕ್ಕೆ ಮಾಸ್ಕ್ ಗಳನ್ನು ಕಳೆದ ಹದಿನಾರು ತಿಂಗಳಿಂದ ನೀಡದೆ ವಂಚಿಸಲಾಗಿದೆ. ಇದು ನಿಯಮಾವಳಿ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಇವರ ಮೇಲೆ ಕ್ರಮಿನಲ್ ಕೇಸು ದಾಖಲಿಸಬೇಕು.

ಹಾಸನದಲ್ಲಿ ಈಗಾಗಲೇ ಕೆಲವು ಪ್ರದೇಶದಲ್ಲಿ ಡೆಂಗ್ಯೂ ಹಾಗೂ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ನಿತ್ಯ ಚರಂಡಿಯಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರ ಆರೋಗ್ಯವನ್ನು ರಕ್ಷಿಸಬೇಕಾಗಿರುವುದು ಗುತ್ತಿಗೆದಾರನ ಕರ್ತವ್ಯ. ಜೀವ ರಕ್ಷಕ ಪರಿಕರಗಳಿಲ್ಲದೆ ಪೌರ ಕಾರ್ಮಿಕರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಅಲರ್ಜಿಯಿಂದ ಬಳಲುತ್ತಿದ್ದಾರೆ ಕೂಡಲೇ ನಗರಸಭೆ ಅಧ್ಯಕ್ಷರು ಹಾಗೂ ಆಯುಕ್ತರು, ಗುತ್ತಿಗೆದಾರ ಹಾಗೂ ಆರೋಗ್ಯ ನಿರೀಕ್ಷಕರ ಮೇಲೆ ಕೇಸು ದಾಖಲಿಸಿ ತಕ್ಷಣವೇ ಪೌರ ಕಾರ್ಮಿಕರಿಗೆ ಜೀವ ರಕ್ಷಕ ಸಾಧನಗಳನ್ನು ಒದಗಿಸಿಕೊಡಬೇಕೆಂದು ಒತ್ತಾಯಿಸುತ್ತೇವೆ.

ಈ ಬಗ್ಗೆ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಿಗೆ ದೂರು ನೀಡಲಾಗುವುದು ತಕ್ಷಣವೇ ಪರಿಕರ ಒದಗಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಈ ಮೂಲಕ ಎಚ್ಚರಿಸುತ್ತೇವೆ.


   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News