ಕಲ್ಲಡ್ಕ ಗಲಭೆಯ ಪ್ರಾಯೋಜಕರು ಜಿಲ್ಲಾ ಉಸ್ತುವಾರಿ ಸಚಿವರೇ?

Update: 2017-06-16 05:20 GMT

ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಸಂದರ್ಭದಲ್ಲಿ ಈಗಿನ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರು ‘‘ನಾನು ಸ್ಪರ್ಧಿಸುತ್ತಿರುವುದು ಆರೆಸ್ಸೆಸ್ ಮುಖಂಡ ಪ್ರಭಾಕರ ಭಟ್ಟರ ವಿರುದ್ಧ’’ ಎಂದು ಘೋಷಿಸಿದ್ದರು. ಚುನಾವಣೆಯಲ್ಲಿ ಗೆದ್ದೂ ಬಿಟ್ಟರು. ಆದರೆ ಇದೀಗ ಬಂಟ್ವಾಳ ತಾಲೂಕಿನ ಸ್ಥಿತಿ ನೋಡಿದರೆ, ನಿಜಕ್ಕೂ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವವರು ಸಚಿವ ರೈಗಳೋ ಅಥವಾ ತನ್ನನ್ನು ಗೆಲ್ಲಿಸಿದ್ದಕ್ಕಾಗಿ ಬಂಟ್ವಾಳ ಕ್ಷೇತ್ರವನ್ನು ಪ್ರಭಾಕರ ಭಟ್ಟರಿಗೆ ಇನಾಮಾಗಿ ಕೊಟ್ಟಿದ್ದಾರೆಯೋ ಎಂದು ಅನುಮಾನಿಸುವಂತಾಗಿದೆ.

ಕಲ್ಲಡ್ಕದಲ್ಲಿ ಕಳೆದ ಒಂದೆರಡು ವಾರಗಳಿಂದ ನಡೆಯುತ್ತಿರುವ ಕೋಮು ಉದ್ವಿಗ್ನಕಾರಿ ಸ್ಥಿತಿಗೆ ಆರೆಸ್ಸೆಸ್ ಮುಖಂಡ ಪ್ರಭಾಕರ ಭಟ್ಟರ ಭಾಷಣಕ್ಕಿಂತಲೂ, ಜಿಲ್ಲಾ ಉಸ್ತುವಾರಿ ಸಚಿವರ ರಮಾನಾಥ ರೈ ಅವರ ವೌನ ಸಮ್ಮತಿಯೇ ನೇರ ಕಾರಣವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಜನರು ಬಹಿರಂಗವಾಗಿಯೇ ಆಡಿಕೊಳ್ಳುತ್ತಿದ್ದಾರೆ. ಚುನಾವಣೆ ಹತ್ತಿರ ಬರುತ್ತಿರುವಂತೆಯೇ ಬಂಟ್ವಾಳ ಹದಗೆಡುವುದು, ಅಲ್ಪಸಂಖ್ಯಾತರು ಪ್ರಾಣ ಭಯದಿಂದ ಓಡಾಡುವುದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಗೂ ಅತ್ಯಗತ್ಯವಾದಂತಿದೆ. ಈ ಕಾರಣಕ್ಕೆ ಒಂದೆಡೆ ಸಂಘಪರಿವಾರ ಕಾರ್ಯಕರ್ತರ ದುಷ್ಕೃತ್ಯಗಳಿಗೆ ಬಂಟ್ವಾಳ ತಾಲೂಕನ್ನು ಪೊಲೀಸ್ ಇಲಾಖೆ ಮುಕ್ತವಾಗಿ ತೆರೆದುಕೊಟ್ಟಿದೆ.

ಮಗದೊಂದೆಡೆ ಆತಂಕಕ್ಕೀಡಾಗಿರುವ ಶ್ರೀಸಾಮಾನ್ಯರ ಮನೆ ಮನೆಗೆ ನುಗ್ಗಿ ರಮಾನಾಥ ರೈಯವರ ಕುಮ್ಮಕ್ಕಿನ ಮೇರೆಗೇ ಪೊಲೀಸರು ಅಮಾಯಕರನ್ನು ಬಂಧಿಸುತ್ತಿದ್ದಾರೆ ಎಂದು ಸಾರ್ವಜನಿಕರು ಅನುಮಾನಿಸುತ್ತಿದ್ದಾರೆ. ಈವರೆಗೆ ಕಲ್ಲಡ್ಕದಲ್ಲಿ ಅಮಾಯಕ ಮುಸ್ಲಿಮ್ ಯುವಕರ ಮೇಲೆ ಪದೇ ಪದೇ ಚೂರಿ ಇರಿತಗಳು ಸಂಭವಿಸಿದಾಗ ಅವರನ್ನು ಬಂಧಿಸಲು ಎಳ್ಳಷ್ಟೂ ಉತ್ಸಾಹ ತೋರಿರದ ಪೊಲೀಸರು, ಕಲ್ಲುತೂರಾಟ ನಡೆಸಿದ್ದಾರೆ ಎಂದು ಆರೋಪಿಸಿ ಕಂಡ ಕಂಡ ಮನೆಗೆ ನುಗ್ಗಿ ಬಂಧಿಸುತ್ತಿದ್ದಾರೆ. ಇಷ್ಟೇ ಉತ್ಸಾಹದಲ್ಲಿ ಹರೀಶ್ ಪೂಜಾರಿಯನ್ನು ಕೊಲೆಗೈದ ಸಂಘಪರಿವಾರದ ಕಾರ್ಯಕರ್ತರಾಗಿರುವ ಮಿಥುನ್ ಮತ್ತು ಭುವಿತ್‌ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಿದ್ದರೆ ಕಲ್ಲಡ್ಕವೆನ್ನುವ ಪುಟ್ಟ ಪ್ರದೇಶ ಇಷ್ಟರಮಟ್ಟಿಗೆ ಉದ್ವಿಗ್ನಗೊಳ್ಳುತ್ತಿರಲಿಲ್ಲ.

ಹಾಡಹಗಲೇ ಚೂರಿ ಇರಿತಗಳು ಸಂಭವಿಸುತ್ತಿರಲಿಲ್ಲ. ಬಂಟ್ವಾಳ ತಾಲೂಕು ಸದಾ ಉದ್ವಿಗ್ನ ಸ್ಥಿತಿಯಲ್ಲಿರುವುದು ಪ್ರಭಾಕರ ಭಟ್ಟರಿಗೆ ಮಾತ್ರವಲ್ಲ, ಉಸ್ತುವಾರಿ ಸಚಿವ ರಮಾನಾಥ ರೈ ಅವರಿಗೂ ಅತ್ಯಗತ್ಯವಾಗಿದೆ ಎನ್ನುವ ಕಾರಣದಿಂದಲೇ ಪೊಲೀಸರು ಸಂಘಪರಿವಾರದ ಇನ್ನೊಂದು ಶಾಖೆಯಾಗಿ ಬಂಟ್ವಾಳದಲ್ಲ್ಲಿ ಕಾರ್ಯಾಚರಿಸುತ್ತಿರುವುದು. ಮಂಗಳವಾರ ಕಲ್ಲಡ್ಕದಲ್ಲಿ ಚೂರಿ ಇರಿತ ನಡೆದಾಗ ಒಂದಿಷ್ಟು ಜನರು ಸ್ಥಳೀಯ ಮಸೀದಿಯ ಪಕ್ಕ ನೆರೆದಿದ್ದರು. ಉಭಯ ಗುಂಪುಗಳ ದುಷ್ಕರ್ಮಿಗಳಿಂದ ಪರಸ್ಪರ ಕಲ್ಲುತೂರಾಟ ನಡೆದಿತ್ತು. ಪದೇ ಪದೇ ಚೂರಿ ಇರಿತ ನಡೆಯುತ್ತಿದ್ದರೂ ಪೊಲೀಸರು ಆರೋಪಿಗಳನ್ನು ಬಂಧಿಸದೇ ಇರುವುದು ಸ್ಥಳೀಯ ಮುಸ್ಲಿಮ್ ಯುವಕರನ್ನೂ ಕೆರಳಿಸಿತ್ತು.

ಒಂದು ದಿಕ್ಕಿನಿಂದ ದುಷ್ಕರ್ಮಿಗಳು ಮಸೀದಿಯ ಕಡೆಗೆ ಕಲ್ಲು ತೂರಾಟ ನಡೆಸಿದ್ದಾರೆ. ಮಸೀದಿಯ ಕಟ್ಟಡಗಳಿಗೆ ಹಾನಿಯಾಗಿದೆ. ಇನ್ನೊಂದು ದಿಕ್ಕಿನಿಂದ ಮುಸ್ಲಿವರೊಳಗಿರುವ ದುಷ್ಕರ್ಮಿಗಳು ಪ್ರತಿ ಕಲ್ಲುತೂರಾಟ ನಡೆಸಿದ್ದಾರೆ. ಈ ಹಿಂದೆ ಎರಡು ಬಾರಿ ಚೂರಿ ಇರಿತಗಳು ಸಂಭವಿಸಿದಾಗಲೂ ಸ್ಥಳೀಯ ಮುಸ್ಲಿಮರು ಅತ್ಯಂತ ಸಹನೆಯಿಂದ ಪ್ರತಿಭಟನೆ ನಡೆಸಿದ್ದರು. ಮುಸ್ಲಿಮರು ಸಹನೆ ಕಳೆದುಕೊಂಡು ಕಲ್ಲು ತೂರಾಟ ನಡೆಸಬೇಕು, ಮನೆ ಮನೆಗೆ ನುಗ್ಗಿ ಮುಸ್ಲಿಮ್ ಯುವಕರನ್ನು ಬಂಧಿಸಬೇಕು ಎಂದು ಪೊಲೀಸರು ಅಂದೇ ಯೋಜನೆ ಹಾಕಿಕೊಂಡಿದ್ದರಾದರೂ, ಸಾರ್ವಜನಿಕರು ಅಪಾರ ತಾಳ್ಮೆ, ಸಹನೆಯನ್ನು ಪ್ರದರ್ಶಿಸಿ ಶಾಂತಿ ಕಾಪಾಡಿದ್ದರು. ಇದು ಸಂಘಪರಿವಾರ, ಪೊಲೀಸರು ಮತ್ತು ಉಸ್ತುವಾರಿ ಸಚಿವ ರಮಾನಾಥ ರೈ ಅವರಿಗೆ ತೀರಾ ನಿರಾಶೆ ತಂದಿರಬೇಕು. ಬಹುಶಃ ಈ ಕಾರಣದಿಂದಲೇ ಅವರು ಇನ್ನೊಂದು ಚೂರಿ ಇರಿತ ಅದೇ ಕಲ್ಲಡ್ಕದಲ್ಲಿ ನಡೆಯುವುದಕ್ಕೆ ದಾರಿ ಮಾಡಿಕೊಟ್ಟರು.

ವಿಪರ್ಯಾಸ ಗಮನಿಸಿ. ಒಂದೆಡೆ ಪೊಲೀಸರು ಕಲ್ಲುತೂರಾಟ ನಡೆಸಿದ್ದಾರೆ ಎಂದು ರಾತ್ರೋರಾತ್ರಿ ಮುಸ್ಲಿಮರ ಮನೆ ಬಾಗಿಲು ತಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಚೂರಿ ಇರಿತದ ಪ್ರಧಾನ ಆರೋಪಿ ಹಿಂಜಾವೆ ಜಿಲ್ಲಾಧ್ಯಕ್ಷ ರತ್ನಾಕರ ಶೆಟ್ಟಿ, ತನ್ನ ಮೇಲೆ ಹಲ್ಲೆಯಾಗಿದೆ ಎಂದು ಆಸ್ಪತ್ರೆ ಸೇರಿಕೊಂಡಿದ್ದಾನೆ. ಅವನನ್ನು ಕಾಯುವುದಕ್ಕಾಗಿ ಮೂರು ಪೊಲೀಸರನ್ನು ನೇಮಿಸಲಾಗಿತ್ತು. ಈ ಮೂವರು ಪೊಲೀಸರ ಸಮ್ಮುಖದಲ್ಲೇ ರತ್ನಾಕರ ಶೆಟ್ಟಿ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ. ಈ ಕಾರಣದಿಂದ ಎಸ್ಸೈ, ಹೆಡ್‌ಕಾನ್‌ಸ್ಟೇಬಲ್ ಸಹಿತ ಮೂವರು ಪೊಲೀಸರನ್ನು ತಕ್ಷಣ ಅಮಾನತು ಮಾಡಲಾಯಿತು.

ಹೀಗೆ ಅಮಾನತು ಮಾಡಿದ ಸುದ್ದಿ ಗೊತ್ತಾದದ್ದೇ, ಗುರುವಾರ ರತ್ನಾಕರ ಶೆಟ್ಟಿ ಮತ್ತೆ ಆಸ್ಪತ್ರೆಯಲ್ಲಿ ಪ್ರತ್ಯಕ್ಷನಾಗಿದ್ದಾನೆ. ಪೊಲೀಸರ ಹುದ್ದೆಗೆ ಕುತ್ತು ಬರುತ್ತದೆ ಎಂದು ಗೊತ್ತಾದಾಗ ಆರೋಪಿ ತಾನಾಗಿಯೇ ಆಸ್ಪತ್ರೆಯ ಮಂಚಕ್ಕೆ ಬಂದು ಒರಗಿಕೊಳ್ಳುತ್ತಾನೆ ಎಂದಾದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘಪರಿವಾರ ಮತ್ತು ಪೊಲೀಸರ ನಡುವಿನ ಸಂಬಂಧ ಎಷ್ಟು ಅನ್ಯೋನ್ಯವಾಗಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬಹುದು. ಇಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಂಘಪರಿವಾರ ಮತ್ತೆ ಚಿಗುರುತ್ತಿದ್ದರೆ, ಪೊಲೀಸರ ನೆರಳಲ್ಲೇ ತಮ್ಮ ಚಟುವಟಿಕೆಗಳನ್ನು ನಡೆಸುತ್ತಿದ್ದರೆ ಅದರ ಎಲ್ಲ ಹೆಗ್ಗಳಿಕೆ ಉಸ್ತುವಾರಿ ಸಚಿವ ರಮಾನಾಥ ರೈ ಅವರಿಗೇ ಸೇರಬೇಕು.

ದುರದೃಷ್ಟವಶಾತ್ ರಮಾನಾಥ ರೈ ತನ್ನ ಅದಕ್ಷತೆಯನ್ನು ಇಡೀ ಕ್ಷೇತ್ರಕ್ಕೆ ಮಾತ್ರವಲ್ಲ ದಕ್ಷಿಣ ಕನ್ನಡ ಜಿಲ್ಲೆಗೇ ಹರಡುತ್ತಿದ್ದಾರೆ. ಅರಣ್ಯ ಇಲಾಖೆಯ ಸಚಿವರಾಗಿರುವ ರಮಾನಾಥ ರೈ, ತನ್ನ ಕ್ಷೇತ್ರವನ್ನೇ ಪುಡಿ ರೌಡಿಗಳೆಂಬ ಕಾಡುಪ್ರಾಣಿಗಳನ್ನು ಸಾಕುವ ರಕ್ಷಿತಾರಣ್ಯ ಪ್ರದೇಶವಾಗಿ ಪರಿವರ್ತಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಗೆದ್ದಿರುವುದು ರಮಾನಾಥ ರೈ ಎನ್ನುವುದೇನೋ ನಿಜ. ಆದರೆ ಸೋತಿರುವುದು ಮಾತ್ರ ಮತದಾರರೇ.

ರಮಾನಾಥ ರೈ ಗೆದ್ದರೂ, ಜಿಲ್ಲೆಯ ಉಸ್ತುವಾರಿ ನೋಡಿಕೊಳ್ಳುವುದು ಪ್ರಭಾಕರ ಭಟ್ಟರೇ ಆಗಿರುವಾಗ, ಮತದಾರರ ಪಾಲಿಗೆ ಯಾರು ಗೆದ್ದರೂ ಏನಾಗಬೇಕಾಗಿದೆ? ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗೃಹಖಾತೆಯನ್ನು ಕೈಗೆ ತೆಗೆದುಕೊಳ್ಳಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಹಾಗೆಯೇ ಕಾಂಗ್ರೆಸ್‌ನ ವರಿಷ್ಠರು ರಮಾನಾಥ ರೈ ಅವರಿಗೆ ರಾಜಕೀಯ ವಿಶ್ರಾಂತಿಯನ್ನು ಕರುಣಿಸಿ, ಜಿಲ್ಲೆಯನ್ನು, ಕಾಂಗ್ರೆಸ್‌ನ್ನು ಒಟ್ಟೊಟ್ಟಿಗೇ ಕಾಪಾಡಿಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News