ದೇಶದ ವಿರುದ್ಧ ಯುದ್ಧ ಹೂಡಿರುವ ಡ್ರಗ್ಸ್ ಮಾಫಿಯಾ

Update: 2017-06-18 19:00 GMT

ದೇಶದಲ್ಲಿ ಸಂಪೂರ್ಣ ಮದ್ಯ ನಿಷೇಧ ಚರ್ಚೆಯಲ್ಲಿದೆ. ಹಲವು ರಾಜ್ಯಗಳು ಈ ನಿಟ್ಟಿನಲ್ಲಿ ಕ್ರಾಂತಿಕಾರಕ ಹೆಜ್ಜೆಗಳನ್ನು ಇಟ್ಟಿವೆ. ಕರ್ನಾಟಕ ಮಾತ್ರ ಈ ಬಗ್ಗೆ ದ್ವಂದ್ವ ನಿಲುವನ್ನು ತಾಳಿದೆ. ಒಂದೆಡೆ ಮದ್ಯಪಾನ ಸೇವನೆಯ ವಿರುದ್ಧ ಮಾತನಾಡುತ್ತಲೇ, ಮತ್ತೊಂದೆಡೆ ರಾಜ್ಯ ಬೊಕ್ಕಸಕ್ಕೆ ಅದರಿಂದ ಬರುವ ಆದಾಯಕ್ಕೆ ಎಂಜಲು ಸುರಿಸುತ್ತಿದೆ. ಮದ್ಯ ನಿಷೇಧದಿಂದ ಅಕ್ರಮ ಕಳ್ಳಭಟ್ಟಿ ಸಾರಾಯಿ ದಂಧೆ ಮುಂದುವರಿಯುತ್ತದೆ ಎಂಬ ಸುಳ್ಳು ಸಾಮಾಜಿಕ ಕಾಳಜಿಯ ಮರೆಯಲ್ಲಿ ಮದ್ಯ ಮಾಫಿಯಾಗಳನ್ನು ರಕ್ಷಿಸಲು ಯತ್ನಿಸುತ್ತಿದೆ. ಸಾರಾಯಿ ದೇಶವನ್ನು ಕಾಡುತ್ತಿರುವ ಸ್ಥಳೀಯ ಸಮಸ್ಯೆಯಾದರೆ, ಇದೇ ಸಂದರ್ಭದಲ್ಲಿ ಇಂದು ಈ ದೇಶ ಮದ್ಯ, ಸಾರಾಯಿಯಾಚೆಗಿನ ವಿಪತ್ತಿನೆಡೆಗೆ ನಿಧಾನವಾಗಿ ಸರಿಯುತ್ತಿರುವುದನ್ನು ನಮ್ಮ ನಾಯಕರು ಗಂಭೀರವಾಗಿ ತೆಗೆದುಕೊಂಡಂತಿಲ್ಲ. ಸಾರಾಯಿ, ಮದ್ಯ ಇವೆಲ್ಲದರ ನಡುವೆಯೇ ಮಾದಕ ದ್ರವ್ಯ ಅಥವಾ ಡ್ರಗ್ಸ್ ಮಾಫಿಯಾಗಳು ತನ್ನ ಜಾಲವನ್ನು ನಿಧಾನವಾಗಿ ದೇಶಾದ್ಯಂತ ಹರಡುತ್ತಿವೆ. ಸಾರಾಯಿ ನಿಷೇಧ ಬೇಕೋ ಬೇಡವೋ ಎನ್ನುವ ಚರ್ಚೆಯ ಗದ್ದಲಗಳ ನಡುವೆ, ಮಾದಕ ದ್ರವ್ಯಗಳು ನಿಧಾನಕ್ಕೆ ಸಮಾಜವನ್ನು ತನ್ನ ಕಬಂಧಬಾಹುವೊಳಗೆ ತೆಗೆದುಕೊಳ್ಳುತ್ತಿದೆ. ಯಾವುದೇ ಅಣು ಅಸ್ತ್ರಕ್ಕಿಂತಲೂ ವೇಗವಾಗಿ, ತೀಕ್ಷ್ಣವಾಗಿ ದೇಶವನ್ನು ಆಹುತಿ ತೆಗೆದುಕೊಳ್ಳಲು ಸಾಧ್ಯವಿರುವ ಈ ಮಾಫಿಯಾವನ್ನು ಬಗ್ಗು ಬಡಿಯುವ ಕುರಿತಂತೆ ಸರಕಾರ ಇನ್ನೂ ಎಚ್ಚೆತ್ತುಕೊಂಡಿಲ್ಲ. ಎಲ್ಲ ಕಾನೂನುಗಳನ್ನೂ ಉಲ್ಲಂಘಿಸಿ ನಮ್ಮ ಮನೆಯ ಹಿತ್ತಲನ್ನು ಪ್ರವೇಶಿಸಿರುವ ಕರಿ ನಾಗರ, ಈಗಾಗಲೇ ಪ್ರತೀ ಮನೆಯ ಬಾತ್ ರೂಂಗಳಲ್ಲಿ, ಡ್ರಾಯಿಂಗ್ ರೂಮ್‌ಗಳಲ್ಲಿ, ಸಾರ್ವಜನಿಕ ಟಾಯ್ಲೆಟ್‌ಗಳಲ್ಲಿ, ಶಾಲೆ ಕಾಲೇಜುಗಳ ಮೈದಾನಗಳಲ್ಲಿ ಹರಿದಾಡುತ್ತಿವೆ.
  ಪ್ರತಿ ದಿನ ಡ್ರಗ್ಸ್ ಚಟದಿಂದಲೇ 10ಕ್ಕೂ ಅಧಿಕ ಯುವಕರು ಈ ದೇಶದಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಮತ್ತು ಆ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಒಬ್ಬ ಪಂಜಾಬಿನವನಾಗಿರುತ್ತಾನೆ. ಪಂಜಾಬ್ ಎಂದರೆ ನಮಗೆ ಒಂದು ಕಾಲದಲ್ಲಿ ನೆನಪಾಗುತ್ತಿದ್ದುದು ಜಲಿಯನ್ ವಾಲಾಬಾಗ್, ಭಗತ್ ಸಿಂಗ್, ಸ್ವಾತಂತ್ರ ಹೋರಾಟ. ಸ್ವಾತಂತ್ರೋತ್ತರ ದಿನಗಳಲ್ಲಿ ನಮಗೆ ಪಂಜಾಬ್ ಎಂದಾಗ ನೆನಪಾಗುತ್ತಿದ್ದುದು ಮೊತ್ತ ಮೊದಲ ಹಸಿರು ಕ್ರಾಂತಿ. ಇಂದಿರಾ ಗಾಂಧಿ ಹಸಿರು ಕ್ರಾಂತಿಗೆ ಕರೆಕೊಟ್ಟಾಗ ಅದಕ್ಕೆ ಸ್ಪಂದಿಸಿ, ಈ ದೇಶಕ್ಕೆ ಆಹಾರ ವನ್ನು ಮೊಗೆ ಮೊಗೆದು ಕೊಟ್ಟದ್ದು ಪಂಜಾಬ್. ಆದರೆ ನಿಧಾನವಾಗಿಪಂಜಾಬ್ ಉಗ್ರವಾದದ ಕಡೆಗೆ ವಾಲಿತು. ಹಿಂಸೆ ಪಂಜಾಬ್‌ನ್ನು ಯಾವ ರೀತಿಯಲ್ಲಿ ನಲುಗಿಸಿತೆಂದರೆ ಹೊಸ ತಲೆಮಾರು ಗಳನ್ನು ಹಾದಿ ತಪ್ಪುವಂತೆ ಮಾಡಿತು. ಉಗ್ರವಾದ ಬೇರೆ ಬೇರೆ ರೂಪಗಳಲ್ಲಿ ಪಂಜಾಬನ್ನು ಬಲಿತೆಗೆದು ಕೊಳ್ಳುತ್ತಿರುವಾಗ, ಅದು ಡ್ರಗ್ಸ್ ನ ರೂಪದಲ್ಲೂ ಪಂಜಾಬ್‌ನ್ನು ಪ್ರವೇಶಿಸಿತು. ಪರಿಣಾಮವಾಗಿ ಪಂಜಾಬ್ ಎಂದಾಗ ಇಂದು ನಮಗೆ ನೆನಪಾಗುವುದು ಮಾದಕ ದ್ರವ್ಯ. ಪಂಜಾಬ್‌ನ ಪ್ರತೀ ಮನೆಯಲ್ಲಿ ಒಬ್ಬ ಯುವಕನಾದರೂ ಮಾದಕದ್ರವ್ಯಕ್ಕೆ ಬಲಿಯಾದ ವನಿರುತ್ತಾನೆ ಎನ್ನುವುದನ್ನು ಸಮೀಕ್ಷೆ ತಿಳಿಸುತ್ತದೆ. ವರ್ಷದ ಹಿಂದೆ ಇಡೀ ಪಂಜಾಬ್‌ನ ಡ್ರಗ್ಸ್ ಸಮಸ್ಯೆಯನ್ನು ಇಟ್ಟುಕೊಂಡು ‘ಉಡ್ತಾ ಪಂಜಾಬ್’ ಎಂಬ ಸಿನೆಮಾ ಮಾಡಿದಾಗ, ಇದರ ಬಿಡುಗಡೆಗೆ ರಾಜಕೀಯ ನಾಯಕರು ಆಕ್ಷೇಪಿಸಿದರು. ಈ ಚಿತ್ರ ಪಂಜಾಬ್‌ನ ವರ್ಚಸ್ಸಿನ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಅವರ ಆತಂಕವಾಗಿತ್ತು. ಒಂದು ಬರ್ಬರ ಸಮಸ್ಯೆಯನ್ನು ಮುಚ್ಚಿಡುವ ಮೂಲಕವೇ ಅದು ಉಲ್ಬಣಿಸಲು ನಮ್ಮ ರಾಜಕಾರಣಿಗಳು ಹೇಗೆ ಕಾರಣವಾಗುತ್ತಿದ್ದಾರೆ ಎನ್ನುವುದಕ್ಕೆ ಇದು ಉದಾ ಹರಣೆಯಾಗಿದೆ. ಪರಿಣಾಮವಾಗಿಯೇ ಪಂಜಾಬ್‌ನಲ್ಲಿ 10 ಲಕ್ಷಕ್ಕೂ ಅಧಿಕ ಯುವಕರು ಡ್ರಗ್ಸ್ ಗೆ ಬಲಿ ಬಿದ್ದಿದ್ದಾರೆ. ಒಂದನ್ನು ಗಮನಿಸಬೇಕು. ಮಾದಕದ್ರವ್ಯ ಚಟುವಟಿಕೆಗಳು ಪಂಜಾಬ್‌ನಲ್ಲಿ ವಿಸ್ತರಿಸುತ್ತಿದ್ದಂತೆಯೇ ಅಲ್ಲಿ ಉಗ್ರವಾದಿ ಚಟುವಟಿಕೆಗಳೂ ಗರಿ ಬಿಚ್ಚುತ್ತಿವೆ.
  
 ಇದು ಎಲ್ಲೋ ದೂರದ ಪಂಜಾಬ್‌ಗೆ ಸಂಬಂಧಪಟ್ಟ ವಿಷಯವೆಂದು ನಾವು ಕರ್ನಾಟಕದಲ್ಲಿ ನೆಮ್ಮದಿಯಿಂದ ನಿದ್ರಿಸುವಂತಹ ಸ್ಥಿತಿ ಸದ್ಯಕ್ಕಿಲ್ಲ. ಈಗಾಗಲೇ ಗೋವಾ, ಮುಂಬಯಿ ಮೂಲಕ ಡ್ರಗ್ಸ್ ಮಾಫಿಯಾ ಕರ್ನಾಟಕವನ್ನೂ ಪ್ರವೇಶಿಸಿದೆ. ನೆರೆಯ ಕೇರಳದಲ್ಲೂ ಈ ಜಾಲ ನಿಧಾನಕ್ಕೆ ವಿಸ್ತರಿಸಿಕೊಳ್ಳುತ್ತಿದೆ. ಮದ್ಯ, ಸಾರಾಯಿಯಂತಹ ಚಟಗಳು ಸ್ಥಳೀಯವಾದುದು ಮತ್ತು ಅದರ ಬಹುತೇಕ ಬಲಿಪಶುಗಳು ತಳಸ್ತರದ ಜನರು; ಮುಖ್ಯವಾಗಿ ದುಡಿಯುವ ಜನರು. ಆದರೆ ಮಾದಕ ದ್ರವ್ಯದ ಬೇರುಗಳು ಅಂತಾರಾಷ್ಟ್ರೀಯ ಮಟ್ಟವನ್ನು ಸುತ್ತಿಕೊಂಡಿದೆ. ಮತ್ತು ಈ ಚಟ ನೇರವಾಗಿ ಯುವ ಜನಾಂಗವನ್ನೇ ಗುರಿಯಾಗಿಸಿಕೊಂಡಿದೆ . ಮುಖ್ಯವಾಗಿ ಶಾಲೆ, ಕಾಲೇಜುಗಳನ್ನೇ ಇದು ಕೇಂದ್ರವಾಗಿಸಿಕೊಂಡಿದೆ. ನಗರಗಳಲ್ಲಿ ವಿದ್ಯಾರ್ಥಿಗಳೇ ಮಾದಕ ದ್ರವ್ಯಗಳ ನೇರ ಬಲಿಪಶುಗಳು. ಭವಿಷ್ಯದಲ್ಲಿ ದೇಶಕಟ್ಟುವ ಯುವ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಜಾಲ ವಿಸ್ತರಿಸಿಕೊಳ್ಳುತ್ತಿದೆ. ಡ್ರಗ್ಸ್‌ನ ಸುಳಿಗೆ ವಿದ್ಯಾರ್ಥಿಯೊಬ್ಬ ಸಿಲುಕಿಕೊಂಡರೆ, ಅವನದೆಷ್ಟೇ ಪ್ರಯತ್ನಿಸಿದರೂ ಹೊರಬರುವುದು ಜಟಿಲ. ಅಷ್ಟೇ ಅಲ್ಲ, ಆತನ ಗೆಳೆಯರು, ಆತನ ಕುಟುಂಬ ಎಲ್ಲರೂ ಆ ಸುಳಿಗೆ ಸಿಲುಕಿ ನಲುಗಬೇಕಾಗುತ್ತದೆ. ಕೆಲ ವರ್ಷಗಳ ಹಿಂದೆ ಮಂಗಳೂರಿನಲ್ಲಿ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಈ ಡ್ರಗ್ಸ್ ಚಟಕ್ಕೆ ಬಲಿಯಾದಳು. ಒಂಬತ್ತನೆ ತರಗತಿಯಲ್ಲಿರುವ ಹೊತ್ತಿನಲ್ಲಿ ಈ ಚಟವನ್ನು ಆಕೆ ಅಂಟಿಸಿಕೊಂಡಿದ್ದಳು. ಆಕೆಗೆ ತಿಳಿಯದಂತೆಯೇ ಈ ಚಟವನ್ನು ದುಷ್ಕರ್ಮಿಗಳು ಅಂಟಿಸಿದ್ದರು. ಬಳಿಕ ಇದರಿಂದ ಕಳಚಿಕೊಳ್ಳಲು ಆಕೆಗೆ ಅಸಾಧ್ಯವಾಯಿತು. ಅಂತಿಮವಾಗಿ ಆತ್ಮಹತ್ಯೆಯನ್ನು ಆಕೆ ಆರಿಸಿಕೊಂಡಳು. ಇಂದು ಪ್ರಮುಖ ವಿದ್ಯಾಸಂಸ್ಥೆಗಳನ್ನೇ ಆ ಮಾದಕದ್ರವ್ಯ ಹುಡುಕಿಕೊಂಡು ಹೊರಟಿವೆ. ನಗರದಲ್ಲಿರುವ ಹಲವು ವಿದ್ಯಾರ್ಥಿಗಳು ತಮಗೆ ತಿಳಿಯದೆಯೇ ಈ ಸುಳಿಗೆ ಸಿಲುಕಿಕೊಳ್ಳುತ್ತಿದ್ದಾರೆ. ಪಾಲಕರು ಮತ್ತು ಶಿಕ್ಷಕರು ಇದನ್ನು ತಕ್ಷಣ ಗುರುತಿಸಿ ಅವರನ್ನು ಆ ಸುಳಿಯಿಂದ ಪಾರು ಮಾಡದೇ ಇದ್ದರೆ, ಇವರು ಹೊರಬರಲಾಗದಷ್ಟು ಆಳಕ್ಕೆ ಇಳಿದು ಬಿಡುತ್ತಾರೆ. ಅಂತಿಮವಾಗಿ ಇದು ಅಪರಾಧಗಳಲ್ಲಿ ಕೊನೆಯಾಗುತ್ತದೆ. ಬೆಂಗಳೂರಿನಂತಹ ನಗರಗಳಲ್ಲಿ ವಿದ್ಯಾರ್ಥಿಗಳು ಹಣಕ್ಕಾಗಿ ದರೋಡೆ ನಡೆಸುತ್ತಿರುವ ಪ್ರಕರಣಗಳ ಹಿಂದೆ ಮಾದಕ ದ್ರವ್ಯದ ಚಟಗಳಿವೆ ಎನ್ನುವುದು ಈಗಾಗಲೇ ಹಲವು ಬಾರಿ ಬಹಿರಂಗವಾಗಿದೆ. ದೇಶ ವಿದೇಶಗಳ ವಿದ್ಯಾರ್ಥಿಗಳು ಆಗಮಿಸುವ ಮಣಿಪಾಲವನ್ನು ಕೇಂದ್ರವಾಗಿಟ್ಟುಕೊಂಡು ಡ್ರಗ್ಸ್ ಜಾಲ ಬಿರುಸಿನಿಂದ ಕಾರ್ಯಾಚರಿಸುತ್ತಿದೆೆ. ಎಂಬ ಆರೋಪ ವ್ಯಾಪಕವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುಗಲಭೆ ನಡೆಸುವ ದುಷ್ಕರ್ಮಿಗಳಲ್ಲಿ ಬಹುತೇಕ ಜನರು ಈ ಜಾಲದಲ್ಲಿ ಗುರುತಿಸಿಕೊಂಡವರೇ ಆಗಿದ್ದಾರೆ. ಗೋರಕ್ಷಕ ವೇಷದಲ್ಲಿರುವ ದುಷ್ಕರ್ಮಿಗಳಲ್ಲಿ ಹೆಚ್ಚಿನವರು ಮಾದಕದ್ರವ್ಯಗಳಿಗೆ ದಾಸರಾದವರು ಮತ್ತು ಅವುಗಳ ಮಾರಾಟಗಳಲ್ಲಿ ಗುರುತಿಸಿಕೊಂಡವರೆನ್ನುವುದನ್ನು ಪೊಲೀಸ್ ಇಲಾಖೆಯ ಮೂಲಗಳು ತಿಳಿಸುತ್ತವೆ. ಸಾರಾಯಿ ಮಾರುವುದಕ್ಕೆ ಇರುವಂತೆ ಮಾದಕದ್ರವ್ಯ ಮಾರಾಟಕ್ಕೆ ಅಂಗಡಿಗಳಿಲ್ಲ. ಸರಕಾರದ ಅನುಮತಿಯೂ ಇಲ್ಲ. ಪೊಲೀಸರ ಕಣ್ಗಾವಲು ಬೇರೆ. ಇಷ್ಟೆಲ್ಲದರ ನಡುವೆ ಈ ದೇಶವನ್ನು ಈ ಪರಿಯಲ್ಲಿ ಡ್ರಗ್ಸ್ ಸುತ್ತಿಕೊಂಡಿದೆಯಾದರೆ, ಅದರ ಹಿಂದಿರುವ ಜಾಲ ಅದೆಷ್ಟು ವ್ಯವಸ್ಥಿತವಾಗಿರಬೇಕು? ಡ್ರಗ್ಸ್ ಚಟ ಒಬ್ಬ ಮನುಷ್ಯನನ್ನು ಮಾತ್ರವಲ್ಲ, ಒಂದು ದೇಶವನ್ನೇ ಸರ್ವನಾಶ ಮಾಡಬಲ್ಲ ಶಕ್ತಿಯನ್ನು ಹೊಂದಿದೆ. ಭಾರತದಲ್ಲಿ ಡ್ರಗ್ಸ್ ಮಾಫಿಯಾ ವಿಸ್ತರಿಸಿಕೊಳ್ಳುತ್ತಿರುವುದರ ಹಿಂದೆ ಅಂತಾರಾಷ್ಟ್ರೀಯ ಹಿತಾಸಕ್ತಿಗಳ ಕೈವಾಡವಿದೆ ಎನ್ನುವುದನ್ನು ಕೆಲವು ವರದಿಗಳು ಈಗಾಗಲೇ ಬಹಿರಂಗಪಡಿಸಿವೆ. ಒಂದು ದೇಶವನ್ನು ನಿಧಾನವಾಗಿ ಸರ್ವನಾಶ ಮಾಡಬೇಕಾದರೆ ಅಣು ಬಾಂಬ್, ಮಾರಕಾಸ್ತ್ರಗಳ ಅಗತ್ಯವೇ ಇಲ್ಲ. ಅಲ್ಲಿ ಮಾದಕ ದ್ರವ್ಯಗಳನ್ನು ಯುವ ಸಮೂಹದ ನಡುವೆ ಹರಡುತ್ತಾ ಹೋದರೆ ಸಾಕು. ಮಾದಕದ್ರವ್ಯದ ಮೂಲಕವೇ ಭಾರತದ ವಿರುದ್ಧ ಶತ್ರುಗಳು ಯುದ್ಧ ಸಾರ ಹೊರಟಿದ್ದಾರೆ. ಇದನ್ನು ಹೇಗೆ ಎದುರಿಸುವುದು ಎನ್ನುವ ಕುರಿತಂತೆ ಸರಕಾರ ಈಗಲೇ ಗಂಭೀರವಾಗಿ ಯೋಚಿಸಬೇಕಾಗಿದೆ. ಕೋಟೆ ಸೂರೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದರೆ ಯಾವ ಪ್ರಯೋಜನವೂ ಇಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News