​"ಮೃತ" ನವಜಾತ ಶಿಶುವಿಗೆ ಜೀವ ಬಂತು!

Update: 2017-06-19 03:54 GMT

ಹೊಸದಿಲ್ಲಿ, ಜೂ.19: ಮೃತಪಟ್ಟಿದೆ ಎಂದು ಆಸ್ಪತ್ರೆ ಸಿಬ್ಬಂದಿ ಪೋಷಕರಿಗೆ ನೀಡಿದ್ದ ಮಗು, ಮನೆಗೆ ತಲುಪುತ್ತಿದ್ದಂತೆ 'ಜೀವ ಪಡೆದ' ವಿಚಿತ್ರ ಘಟನೆ ನಡೆದಿದೆ. ’ಮೃತ ಶಿಶು’ವಿನೊಂದಿಗೆ ಪೋಷಕರು ಮನೆಗೆ ಬಂದಾಗ ಮಗು ಕೈ ಕಾಲು ಅಲ್ಲಾಡಿಸುವುದು ಕಂಡುಬಂತು.

ಇಲ್ಲಿನ ಸಫ್ದರ್‌ಜಂಗ್ ಅಸ್ಪತ್ರೆಯಲ್ಲಿ ಕಾಂತಿದೇವಿ (28) ಎಂಬಾಕೆ ರವಿವಾರ ಮುಂಜಾನೆ 5ರ ವೇಳೆಗೆ ಮಗುವಿಗೆ ಜನ್ಮನೀಡಿದರು. ಇದು ಅವಧಿಪೂರ್ವ ಪ್ರಸವವಾಗಿದ್ದು, ಭ್ರೂಣ ಕೇವಲ 24 ವಾರದ ಬೆಳವಣಿಗೆಯನ್ನಷ್ಟೇ ಕಂಡಿತ್ತು ಹಾಗೂ ನವಜಾತ ಶಿಶುವಿನ ತೂಕ ಕೇವಲ 460 ಗ್ರಾಂ ಇತ್ತು. ಆರೋಗ್ಯವಂತ ಮಗುವಿಗೆ 40 ವಾರಗಳ ಬೆಳವಣಿಗೆ ಅಗತ್ಯ.

ನವಜಾತ ಶಿಶುವಿನಲ್ಲಿ ಯಾವುದೇ ಚಲನವಲನ ಗುರುತಿಸದ ಆಸ್ಪತ್ರೆ ಸಿಬ್ಬಂದಿ, ಮಗುವಿನ ಚಲನೆಗೆ ಹಲವು ಬಾರಿ ಪ್ರಯತ್ನ ಮಾಡಿ ಕೊನೆಗೆ ಅದು ಮೃತಪಟ್ಟಿದೆ ಎಂದು ಘೋಷಿಸಿ, ಮಗುವನ್ನು ಪ್ಯಾಕ್ ಮಾಡಿ ಪೋಷಕರಿಗೆ ನೀಡಿದರು. ಮನೆ ತಲುಪುತ್ತಿದ್ದಂತೆ ಗಂಡುಮಗುವಿನ ಚಲನೆಯನ್ನು ಗಮನಿಸಿದ ಪೋಷಕರು ಮತ್ತೆ ಅದನ್ನು ಸಪ್ಧರ್‌ಜಂಗ್ ಆಸ್ಪತ್ರೆಗೆ ಕರೆತಂದರು.

 "ಮನೆಯಲ್ಲಿ ಮಹಿಳೆಯರು ಇಲ್ಲದಿದ್ದರೆ ಆ ಪಾಲಿಥಿನ್ ಚೀಲವನ್ನು ನಾನು ತೆರೆಯುತ್ತಲೇ ಇರಲಿಲ್ಲ. ಗಂಡುಮಗುವಿನ ಮುಖ ನೋಡಬೇಕು ಎಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ ಅದನ್ನು ತೆರೆದೆವು. ಆಗ ಮಗು ಕೈ ಮತ್ತು ಪಾದವನ್ನು ಅಲ್ಲಾಡಿಸುವುದು ಕಂಡುಬಂತು" ಎಂದು ಕೂಲಿ ಕಾರ್ಮಿಕ ತಂದೆ ರೋಹಿತ್ ಕುಮಾರ್ (33) ಹೇಳಿದ್ದಾರೆ.

 ತಪ್ಪನ್ನು ಒಪ್ಪಿಕೊಂಡಿರುವ ಆಸ್ಪತ್ರೆ, ಈ ಬಗ್ಗೆ ತನಿಖೆಗೆ ಆದೇಶ ನೀಡಿದೆ. "ನಮ್ಮ ಕಡೆಯಿಂದ ತಪ್ಪಾಗಿದೆ. ಕರ್ತವ್ಯದಲ್ಲಿದ್ದ ಸಿಬ್ಬಂದಿ ವೈದ್ಯರ ಸಲಹೆ ಪಡೆಯದೇ, ಮಗುವಿನಲ್ಲಿ ಯಾವುದೇ ಚಲನೆ ಕಾಣುತ್ತಿಲ್ಲ ಎಂಬ ಕಾರಣಕ್ಕೆ ಮತ್ತು ಕೇವಲ 460 ಗ್ರಾಂ ತೂಕವಿತ್ತು. ಅಂಥ ಭ್ರೂಣ ಉಳಿಯುವ ಸಾಧ್ಯತೆ ತೀರಾ ಕಡಿಮೆ. ಆದ್ದರಿಂದ ನವಜಾತ ಶಿಶು ಮೃತಪಟ್ಟಿದೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ" ಎಂದು ವೈದ್ಯಕೀಯ ಅಧೀಕ್ಷಕ ಡಾ.ಎ.ಕೆ.ರಾಯ್ ಹೇಳಿದ್ದಾರೆ.

ಮಗುವನ್ನು ನವಜಾತ ಶಿಶುಗಳ ತುರ್ತು ನಿಗಾ ಘಟಕದಲ್ಲಿ ದಾಖಲಿಸಿದಾಗಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News