ಸಚಿವ ರಮಾನಾಥ ರೈ ವಜಾಕ್ಕೆ ಒತ್ತಾಯ : ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ

Update: 2017-06-20 11:43 GMT

ಮಡಿಕೇರಿ,ಜೂ.20 :ಸಂಘ ಪರಿವಾರದ ಪ್ರಮುಖರಾದ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ದೂರು ದಾಖಲಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿಗೆ ಒತ್ತಡ ಹೇರುವ ಮೂಲಕ ಅಧಿಕಾರ ದುರ್ಬಳಕೆ ಮಾಡಿಕೊಂಡು ಕೋಮು ಪ್ರಚೋದನೆಗೆ ಮುಂದಾಗಿರುವ ರಮಾನಾಥ ರೈ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.

 ಹಿಂದೂ ಜಾಗರಣಾ ವೇದಿಕೆ, ವಿಶ್ವಹಿಂದೂ ಪರಿಷತ್, ಭಜರಂಗದಳದ ಪ್ರಮುಖರು ಹಾಗೂ ಕಾರ್ಯಕರ್ತರು ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ವೃತ್ತದ ಬಳಿಯಿಂದ ಘೋಷಣೆಗಳ ಸಹಿತ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

 ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು, ಕಲ್ಲಡ್ಕದಲ್ಲಿ ಎರಡು ಕೋಮುಗಳ ನಡುವಿನ ಗಲಭೆಗೆ ಸಂಬಂಧಿಸಿದಂತೆ ಶಾಂತಿ ಸ್ಥಾಪಿಸುವ ಪ್ರಯತ್ನವನ್ನು ಮಾಡಬೇಕಾಗಿತ್ತು. ಆದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಅವರ ವಿರುದ್ಧ ಸೆಕ್ಷನ್ 307 ರ ಅನ್ವಯ ಪ್ರಕರಣ ದಾಖಲಿಸುವಂತೆ ಸೂಚಿಸುವ ಮೂಲಕ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪಟಾಕಿ ಸಿಡಿಸಿದ್ದು ದೇಶದ್ರೋಹ

ಬಜರಂಗದಳದ ಪ್ರಮುಖರಾದ ಅಜಿತ್ ಕುಮಾರ್ ಮಾತನಾಡಿ, ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿದ್ದನ್ನು ಸುಂಟಿಕೊಪ್ಪ ಬಳಿಯ ಏಳನೇ ಹೊಸಕೋಟೆಯಲ್ಲಿ ಪಟಾಕಿ ಸಿಡಿಸಿ ಕೆಲವರು ಸಂಭ್ರಮಿಸಿದ್ದಾರೆ. ಇವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದರೊಂದಿಗೆ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.

ಕಚೇರಿಗೆ ಮುತ್ತಿಗೆ

ಪ್ರತಿಭಟನೆಯ ಸಂದರ್ಭ ಸ್ಥಳಕ್ಕೆ ಜಿಲ್ಲಾಧಿಕಾರಿಗಳ ಬದಲಾಗಿ ಉಪ ವಿಭಾಗಾಧಿಕಾರಿ ನಂಜುಂಡೇಗೌಡ ಅವರು ಆಗಮಿಸಿದರು. ಈ ಹಂತದಲ್ಲಿ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಭಟನಾಕಾರರು ದೇಶ ದ್ರೋಹದ ಗಂಭೀರ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುತ್ತಿದ್ದೇವೆ. ಇದರ ಮನವಿಯನ್ನು ಸ್ವೀಕರಿಸಲು ಜಿಲ್ಲಾಧಿಕಾರಿಗಳು ಬಾರದಿರುವುದು ನಮ್ಮ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯವೆಂದು ಆರೋಪಿಸಿದರು. ಜಿಲ್ಲಾಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರಲ್ಲದೆ ಪೊಲೀಸ್ ರಕ್ಷಣೆಯನ್ನು ಮೀರಿ ಜಿಲ್ಲಾಡಳಿತ ಕಛೇರಿಗೆ ನುಗ್ಗಿ ಪ್ರತಿಭಟನೆ ನಡೆಸಿದರು. ಈ ಹಂತದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದು ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಈ ಎಲ್ಲಾ ಬೆಳವಣಿಗೆಗಳ ನಂತರ ಪ್ರತಿಭಟನಾಕಾರರು ಡಿಸಿ ಕಛೇರಿಯಿಂದ ಮತ್ತೆ ಜಿಲ್ಲಾಡಳಿತದ ಭವನದ ಎದುರು ಆಗಮಿಸಿ ಪ್ರತಿಭಟನೆ ಮುಂದುವರಿಸಿದರು. ಈ ಸಂದರ್ಭ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರಿಗೆ ವಿಹಿಂಪ ಪ್ರಮುಖ ಡಿ.ನರಸಿಂಹ ಅವರು ಮನವಿ ಸಲ್ಲಿಸಿದರು.

 ಪ್ರತಿಭಟನೆಯಲ್ಲಿ ಹಿಂದೂಪರ ಸಂಘಟನೆಗಳ ಪ್ರಮುಖರಾದ ಪ್ರಸನ್ನ ಭಟ್, ಚೇತನ್, ಮೇದಪ್ಪ, ಗಣೇಶ್, ಮಹೇಶ್ ಜೈನಿ ಸೇರಿದಂತೆ ಹಲವು ಪ್ರಮುಖರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News