ಸಿರಿಯಾ ನಿರಾಶ್ರಿತೆ ಮಝೂನ್ ಅಲ್ಮೆಲಿಹಾನ್ ಯುನಿಸೆಫ್ ರಾಯಭಾರಿ

Update: 2017-06-21 03:48 GMT

ವಿಶ್ವಸಂಸ್ಥೆ, ಜೂ.21: ಸಿರಿಯಾ ನಿರಾಶ್ರಿತೆ ಮಝೂನ್ ಅಲ್ಮೆಲಿಹಾನ್ ಅವರನ್ನು ಹೊಸ ಹಾಗೂ ಅತ್ಯಂತ ಯುವ ಸದಾಶಯ ರಾಯಭಾರಿ (ಗುಡ್‌ವಿಲ್ ಅಂಬಾಸಿಡರ್) ಆಗಿ ನೇಮಕ ಮಾಡಲಾಗಿದೆ ಎಂದು ಯುನೈಟೆಡ್ ನೇಷನ್ಸ್ ಚಿಲ್ಡ್ರನ್ಸ್ ಫಂಡ್ (ಯುನಿಸೆಫ್) ಪ್ರಕಟಿಸಿದೆ.

ವಿಶ್ವ ನಿರಾಶ್ರಿತರ ದಿನದ ಹಿನ್ನೆಲೆಯಲ್ಲಿ ಈ ನೇಮಕ ಮಾಡಲಾಗಿದೆ. 19 ವರ್ಷದ ಈ ಶಿಕ್ಷಣ ಹೋರಾಟಗಾರ್ತಿ, ರಾಯಭಾರಿಯಾಗಿ ನೇಮಕಗೊಂಡ ನಿರಾಶ್ರಿತರಲ್ಲಿ ಮೊಟ್ಟಮೊದಲಿಗರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೋರ್ಡಾನ್‌ನ ಝಾತರಿ ನಿರಾಶ್ರಿತ ಶಿಬಿರದಲ್ಲಿ ವಾಸವಿರುವ ಇವರು, ವಿಶ್ವಸಂಸ್ಥೆಯಿಂದ ನೆರವು ಪಡೆದಿದ್ದರು. ಬಾಲ್ಯದಲ್ಲಿದ್ದಾಗಲೇ ಯುನಿಸೆಫ್ ಬೆಂಬಲಿಸಿದ ಆಡ್ರಿ ಹೆಪ್ಬರ್ನ್ ಅವರನ್ನು ಮಝೂನ್ ಅನುಸರಿಸಿದ್ದಾರೆ.

"ಶಿಕ್ಷಣ ನನ್ನ ಭವ್ಯ ಭವಿಷ್ಯದ ಕೀಲಿಕೈ ಎನ್ನುವುದನ್ನು ಮಗುವಾಗಿಯೇ ನಾನು ತಿಳಿದುಕೊಂಡಿದ್ದೆ. ಆದ್ದರಿಂದ ನಾನು ಸಿರಿಯಾದಿಂದ ಹೊರಬಂದಾಗ, ನಾನು ತಂದ ಏಕೈಕ ವಸ್ತು ಎಂದರೆ ನನ್ನ ಶಾಲಾ ಪುಸ್ತಕ" ಎಂದು ಮಝೂನ್ ಹೇಳಿದ್ದಾರೆ. "ಮಕ್ಕಳನ್ನು ಬಾಲ್ಯದಲ್ಲೇ ವಿವಾಹ ಬಂಧನಕ್ಕೆ ಒಳಪಡಿಸಿದರೆ ಏನಾಗುತ್ತದೆ ಎನ್ನುವುದನ್ನು, ನಿರಾಶ್ರಿತರ ಶಿಬಿರದಲ್ಲಿದ್ದುಕೊಂಡು ನಾನು ನೋಡಿದ್ದೇನೆ. ಅವರು ಶಿಕ್ಷಣದ ಅವಕಾಶ ಕಳೆದುಕೊಳ್ಳುವುದು ಮಾತ್ರವಲ್ಲದೇ, ಅವರ ಭವಿಷ್ಯದ ಅವಕಾಶಗಳನ್ನೂ ಕಳೆದುಕೊಳ್ಳುತ್ತಾರೆ" ಎಂದು ಹೇಳಿದ್ದಾರೆ. ಪ್ರತೀ ವರ್ಷದ ಜೂನ್ 20ನ್ನು ವಿಶ್ವ ನಿರಾಶ್ರಿತರ ದಿನವಾಗಿ ಆಚರಿಸಲಾಗುತ್ತದೆ.

ಸಿರಿಯಾದಿಂದ 2013ರಲ್ಲಿ ತನ್ನ ಕುಟುಂಬದ ಜತೆ ಹೊರಬಂದ ಮಝೂನ್, ಬ್ರಿಟನ್‌ನಲ್ಲಿ ಪುನರ್ವಸತಿ ಪಡೆಯುವ ಮುನ್ನ ಮೂರು ವರ್ಷ ಕಾಲ ಜೋರ್ಡಾನ್ ನಿರಾಶ್ರಿತರ ಶಿಬಿರದಲ್ಲಿದ್ದರು. 18 ತಿಂಗಳ ನಿರಾಶ್ರಿತ ಶಿಬಿರ ವಾಸದ ಸಂದರ್ಭದಲ್ಲಿ ಅವರು, ಮಕ್ಕಳ ಅದರಲ್ಲೂ ಪ್ರಮುಖವಾಗಿ ಹೆಣ್ಣುಮಕ್ಕಳ ಶಿಕ್ಷಣ ಅಗತ್ಯತೆಯನ್ನು ಪ್ರತಿಪಾದಿಸಿದ್ದರು.

ಇತ್ತೀಚೆಗೆ ಮಝೂನ್ ಅವರು ಯುನಿಸೆಫ್ ಜತೆಗೆ ಛಡ್‌ಗೆ ಪ್ರಯಾಣ ಬೆಳೆಸಿದ್ದರು. ಇಲ್ಲಿನ ಗಲಭೆಪೀಡಿತ ಪ್ರದೇಶಗಳಲ್ಲಿ ಬಾಲಕರ ಮೂರು ಪಟ್ಟು ಬಾಲಕಿಯರು ಪ್ರಾಥಮಿಕ ಶಿಕ್ಷಣದಿಂದಲೂ ವಂಚಿತರಾಗುತ್ತಿರುವ ಬಗ್ಗೆ ಅಧ್ಯಯನ ಮಾಡಿದ್ದರು. ಈ ಪ್ರದೇಶದಲ್ಲಿ ಸುಮಾರು 25 ದಶಲಕ್ಷ ಮಕ್ಕಳು ಶಾಲೆಗಳಿಂದ ಹೊರಗಿರುವ ಹಿನ್ನೆಲೆಯಲ್ಲಿ ಈ ಸವಾಲನ್ನು ಎದುರಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಲು ಮಝೂನ್ ಶ್ರಮಿಸುತ್ತಿದ್ದಾರೆ ಎಮದು ಯುನಿಸೆಫ್ ಪ್ರಕಟನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News