ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಲಕ್ನೋದಲ್ಲಿ ಪ್ರಧಾನಿ ಸಹಿತ 50 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ

Update: 2017-06-21 04:17 GMT

ಹೊಸದಿಲ್ಲಿ, ಜೂ.21: ದೇಶಾದ್ಯಂತ ಮೂರನೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಲಕ್ನೋದ ರಮಾಬಾಯಿ ಅಂಬೇಡ್ಕರ್ ಮೈದಾನದಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, 50 ಸಾವಿರಕ್ಕೂ ಹೆಚ್ಚು ಮಂದಿ ಯೋಗಾಭ್ಯಾಸಿಗಳು ಇದರಲ್ಲಿ ಭಾಗವಹಿಸಿದ್ದಾರೆ.

ಉತ್ತರ ಪ್ರದೇಶದ ರಾಮ್ಯಪಾಲ ರಾಮ ನಾಯ್ಕ, ಮುಖ್ಯಮಂತ್ರಿ ಆದಿತ್ಯನಾಥ್, ಅವರ ಸಂಪುಟ ಸಹೋದ್ಯೋಗಿಗಳು ಕೂಡಾ ಇದರಲ್ಲಿ ಪಾಲ್ಗೊಂಡಿದ್ದಾರೆ. ಯೋಗ ಆರೋಗ್ಯಕ್ಕೆ ಅತ್ಯಂತ ಮಿತವ್ಯಯ ವಿಧಾನ ಎಂದು ಮೋದಿ ಹೇಳಿದ್ದಾರೆ.

ಯೋಗಾಭ್ಯಾಸಿಗಳಿಗೆ ನೆರವು ನೀಡಲು 90 ಮಂದಿ ತಾಲೂಕು ಮ್ಯಾಜಿಸ್ಟ್ರೇಟ್‌ಗಳು, 83 ಮಂದಿ ಮ್ಯಾಜಿಸ್ಟ್ರೇಟ್ ಹಾಗೂ 200 ಮಂದಿ ನಾಗರಿಕ ಸುರಕ್ಷಾ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ ಎಂದು ಲಕ್ನೋ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲ್‌ರಾಜ್ ಶರ್ಮಾ ಪ್ರಕಟಿಸಿದ್ದಾರೆ.

ನಿಯೋಜಿತ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್ ಕೋವಿದ್ ಕೂಡಾ ದಿಲ್ಲಿಯಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಕೇಂದ್ರ ಸಚಿವ ಕೃಷ್ಣರಾಜ್ ಅವರು ಆಗ್ರಾದ ಏಕಲವ್ಯ ಕ್ರೀಡಾಂಗಣದಲ್ಲಿ, ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಭುವನೇಶ್ವರದಲ್ಲಿ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಎ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಗುವಾಹಟಿಯಲ್ಲಿ ಆಯೋಜಿಸಿದ ಸಮಾರಂಭದಲ್ಲಿ ಮುಖ್ಯಮಂತ್ರಿ ಸರ್ವಾನಂದ ಸೋನವಾಲ್ ಪಾಲ್ಗೊಂಡಿದ್ದಾರೆ.

ಅಲೀಗಢ ಮುಸ್ಲಿಂ ವಿವಿ ವತಿಯಿಂದ ತಾಜ್‌ಮಹಲ್ ಎದುರಿನ ಯಮುನಾ ನದಿ ತೀರ ಹಾಗೂ ಮೆಹ್ತಾಬಾಗ್‌ನಲ್ಲಿ ಯೋಗ ದಿನ ಆಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News