ವಿಧವೆ ಮಹಿಳೆ ಬರ ಹಿಮ್ಮೆಟ್ಟಿಸಿದ ಯಶೋಗಾಥೆ

Update: 2017-06-22 04:13 GMT

ಚೆನ್ನೈ, ಜೂ.22: ದಶಕದಲ್ಲೇ ಅತ್ಯಂತ ಭೀಕರ ಬರ ಪರಿಸ್ಥಿತಿ ಎದುರಿಸುತ್ತಿರುವ ತಮಿಳುನಾಡಿನ ಸಾಹಸಿ ಮಹಿಳೆಯ ಕಥೆ ಇದು. 45ನೆ ವರ್ಷದಲ್ಲಿ ವಿಧವೆಯಾದಾಗ ತನ್ನ 23 ಎಕರೆಯಲ್ಲಿ ಕೃಷಿ ಮಾಡುವುದು ಬಿಟ್ಟರೆ ಬೇರೆ ಯಾವ ಆಯ್ಕೆಯೂ ಇವರ ಮುಂದಿರಲಿಲ್ಲ. ಇದೀಗ 65 ವರ್ಷದ ರಂಗನಾಯಕಿ, ಭೀಕರ ಬರವನ್ನು ಸಮರ್ಥವಾಗಿ ಎದುರಿಸಿ ಆ ಭಾಗದ ನೂರಾರು ರೈತರಿಗೆ ಮಾದರಿಯಾಗಿದ್ದಾರೆ.

ದಶಕದ ಹಿಂದೆಯೇ 13 ಗ್ರಾಮಗಳ 1,400 ಕ್ಕೂ ಅಧಿಕ ಎಕರೆ ಪ್ರದೇಶಕ್ಕೆ ನೀರುಣಿಸುವ ಸಾಹಸ ಆರಂಭವಾಗಿತ್ತು. "ರೈತ ಮಹಿಳೆಯಾಗುವುದು ಕಷ್ಟ. ಆರಂಭದಲ್ಲಿ ಯಾರೂ ನನ್ನನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ವೀರನಮ್ ಕೆರೆ ಹಾಗೂ ರಾಜಾ ಕಾಲುವೆಯ ಹೂಳೆತ್ತುವ ಸಲುವಾಗಿ ನಾನು ಹೋರಾಟ ಆರಂಭಿಸಿದಾಗ, ನನ್ನ ಕೃಷಿ ಪ್ರೀತಿ ಜನರಿಗೆ ಮನವರಿಕೆಯಾಯಿತು"

ಕುಡಲೂರು ಜಿಲ್ಲೆ ಮಡಮೂರು ಗ್ರಾಮದ ರಂಗನಾಯಕಿ ಹಾಗೂ ಸುತ್ತಮುತ್ತಲ 13 ಗ್ರಾಮಗಳ 1,300 ಎಕರೆ ಕೃಷಿಭೂಮಿಗೆ ನೀರಾಶ್ರಯವಾಗಿದ್ದ ವೀರನಮ್ ಕೆರೆಯಿಂದ ನೀರು ಪೂರೈಕೆಯಾಗಬೇಕಿದ್ದರೆ, 10 ಕಿಲೋಮೀಟರ್ ಉದ್ದದ ರಾಜಾ ಕಾಲುವೆಯ ಹೂಳೆತ್ತುವುದು ಅನಿವಾರ್ಯವಾಗಿತ್ತು. ಆದರೆ ಅಧಿಕಾರಿಗಳು ಈ ಯೋಜನೆಯ ಬಗ್ಗೆ ಉದಾಸೀನ ಹೊಂದಿದ್ದರು.

2003ರಲ್ಲಿ ಹೂಳೆತ್ತುವ ಹೋರಾಟ ಆರಂಭಿಸಿದ ಅವರು, ತಮ್ಮದೇ ಟ್ರ್ಯಾಕ್ಟರ್ ಹಾಗೂ ಕೂಲಿಗಳನ್ನು ಬಳಸಿ ಕಾಲುವೆಯ ಒಂದು ಭಾಗದ ಹೂಳೆತ್ತಿದರು. ಒಂದು ಲಕ್ಷ ವ್ಯಯಿಸಿ 3 ಕಿಲೋ ಮೀಟರ್ ಹೂಳು ತೆಗೆದು 400 ಎಕರೆಗೆ ನೀರು ತಂದರು. ಇದರಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಕಾಮಗಾರಿ ಮುಂದುವರಿಸಲು 2007-08ರಲ್ಲಿ 1.75 ಲಕ್ಷ ರೂಪಾಯಿ ಬಿಡುಗಡೆ ಮಾಡಿತು. ಬಳಿಕ ವಾರ್ಷಿಕವಾಗಿ ಕಾಲುವೆಗೆ ನೀರು ಹರಿಸಲಾಗುತ್ತಿದೆ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ. ರಂಗನಾಯಕಿಯ ಈ ಭಗೀರಥ ಪ್ರಯತ್ನದ ಫಲವಾಗಿ ಈ ಭಾಗದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ನಿಂತಿದೆ ಎಂದು ಕೃಷಿ ಆರ್. ಕವಿಯರಸು ಹೇಳುತ್ತಾರೆ. ರೈತರು ನಿರಾಶರಾದ ಸಂದರ್ಭದಲ್ಲಿ ಸರ್ಕಾರವನ್ನು ಬಡಿದೆಬ್ಬಿಸಿದ ಸಾಹಸಿ ಮಹಿಳೆ ಆಕೆ ಎನ್ನುವುದು ಅವರ ಅಭಿಪ್ರಾಯ.

ಬಳಿಕ ರಂಗನಾಯಕಿಯ ಗಮನ ಸಾವಯವ ಕೃಷಿಯತ್ತ ಹರಿಯಿತು. 2016ರಲ್ಲಿ ಇವರು ಕೃಷಿ ಭೂಮಿಯಿಂದ ಕರುವೆಲಂ ಟ್ರೀ ಎಂಬ ಕಳೆಯನ್ನು ಕೀಳುವಂತೆ ಜಾಗೃತಿ ಮೂಡಿಸಲು ಅಭಿಯಾನ ಆರಂಭಿಸಿದರು. ಅಧಿಕವಾಗಿ ನೀರು ಹೀರುವ ಈ ಕಳೆಯನ್ನು ಕಿತ್ತರೆ ಬಹಳಷ್ಟು ನೀರು ಉಳಿಸಬಹುದು ಎಂಬ ಅಂಶ ವಿಜ್ಞಾನಿಗಳ ಜತೆ ಚರ್ಚಿಸಿದಾಗ ತಿಳಿಯಿತು. ಆದ್ದರಿಂದ ಜಾಗೃತಿ ಮೂಡಿಸಲು ಆರಂಭಿದೆ ಎಂದು ವಿವರಿಸುತ್ತಾರೆ.

ರಾಜ್ಯದಲ್ಲಿ ಈ ಕಳೆ ಕೀಳಲು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಸೂಚನೆ ನೀಡುವ ವೇಳೆಗೆ ರಾಜಾ ಕಾಲುವೆಯ ಸುತ್ತಮುತ್ತಲ ಹಳ್ಳಿಗಳ ಜನರು ತಮ್ಮ ಗ್ರಾಮಗಳಿಂದ ಈ ಕಳೆಯನ್ನು ನಿರ್ಮೂಲನೆ ಮಾಡಿದ್ದರು. ಇದರಿಂದಾಗಿ ಇಡೀ ರಾಜ್ಯದಲ್ಲಿ ಭೀರಕ ಬರ ಇದ್ದರೂ, ಇಲ್ಲಿನ ರೈತರಿಗೆ ನೀರಿಗೆ ಕೊರತೆ ಇಲ್ಲ. ಕೆರೆ- ಕಾಲುವೆ ಸಂರಕ್ಷಣೆಗೆ ನೆರವು ನೀಡುವಂತೆ ಇದೀಗ ನಬಾರ್ಡ್‌ಗೆ ಒತ್ತಾಯಿಸಿರುವ ಅವರು ಈ ಆಂದೋಲನವನ್ನು ಇತರ ರಾಜ್ಯಗಳಿಗೂ ಬೆಳೆಸುವ ಗುರಿ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News