ಟ್ರಂಪ್ ಆಪ್ತ ಭಾರತಕ್ಕೆ ನೂತನ ರಾಯಭಾರಿ

Update: 2017-06-22 04:21 GMT

ವಾಷಿಂಗ್ಟನ್, ಜೂ. 22: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ, ಆರ್ಥಿಕ ಸಲಹೆಗಾರ ಹಾಗೂ ಭಾರತ ವಿಷಯಗಳ ತಜ್ಞ ಕೆನೆತ್ ಐ.ಜಸ್ಟರ್ ಅವರನ್ನು ಭಾರತಕ್ಕೆ ನೂತನ ರಾಯಭಾರಿಯಾಗಿ ನೇಮಕ ಮಾಡಿ ಶ್ವೇತಭವನ ಆದೇಶ ಹೊರಡಿಸಿದೆ.

ಅಂತಾರಾಷ್ಟ್ರೀಯ ಆರ್ಥಿಕ ವ್ಯವಹಾರಗಳ ವಿಚಾರದಲ್ಲಿ ಟ್ರಂಪ್ ಅವರಿಗೆ ಉಪ ಸಹಾಯಕರಾಗಿರುವ ಜಸ್ಟೆರ್, ರಾಷ್ಟ್ರೀಯ ಆರ್ಥಿಕ ಮಂಡಳಿಯ ಉಪ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಸೆನೆಟ್ ಈ ಆಯ್ಕೆಯನ್ನು ಅನುಮೋದಿಸಿದರೆ, ರಿಚರ್ಡ್ ವರ್ಮಾ ಅವರ ಅಧಿಕಾರವನ್ನು ಜಸ್ಟರ್ ವಹಿಸಿಕೊಳ್ಳಲಿದ್ದಾರೆ.

ಭಾರತದಲ್ಲಿ ಅಮೆರಿಕದ ರಾಯಭಾರಿಯಾಗಲು ಸೂಕ್ತ ಹಾಗೂ ಅರ್ಹರಾಗಿರುವುದರಿಂದ ಅವರನ್ನು ನೇಮಕ ಮಾಡಲಾಗಿದೆ ಎಂದು ಶ್ವೇತಭವನದ ವಕ್ತಾರ ಲಿಂಡ್ಸೆ ಇ.ವಾಲ್ಟೆರ್ಸ್‌ ಹೇಳಿದ್ದಾರೆ. ಕೆನ್ ಅವರು ಟ್ರಂಪ್ ಸೇರಿದಂತೆ ಶ್ವೇತಭವನದ ಪ್ರತಿಯೊಬ್ಬರ ಜತೆಗೂ ಗಾಢ ಹಾಗೂ ಧನಾತ್ಮಕ ಸಂಬಂಧ ಹೊಂದಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ಈ ತಿಂಗಳ 26ರಂದು ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡಿ, ಟ್ರಂಪ್ ಜತೆಗೆ ಚರ್ಚಿಸುವ ಹಿನ್ನೆಲೆಯಲ್ಲಿ ಟ್ರಂಪ್ ಹೊಸ ನಡೆಗೆ ವಿಶೇಷ ಮಹತ್ವ ಬಂದಿದೆ. ಟ್ರಂಪ್ ಅವರ ಈ ಅಚ್ಚರಿಯ ನಡೆಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ ಎಂದು ಭಾರತ ವಿಷಯ ತಜ್ಞ ಆಶ್ಲೆ ಟೆಲಿಸ್ ಹೇಳಿದ್ದಾರೆ. ಕೆನ್ ಭಾರತದ ಬಗ್ಗೆ ಆಳವಾದ ಜ್ಞಾನ ಹೊಂದಿದ್ದು, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಒಪ್ಪಂದಗಳ ಮಾತುಕತೆಯಲ್ಲಿ ಗಾಢವಾಗಿ ತೊಡಗಿಸಿ ಕೊಂಡಿದ್ದಾರೆ ಎಂದು ಅವರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News