ರಾಜೀವ್‌ಗಾಂಧಿ ಹತ್ಯೆ: ತಪ್ಪಿತಸ್ಥನಿಂದ ದಯಾಮರಣಕ್ಕೆ ಅರ್ಜಿ

Update: 2017-06-22 04:31 GMT

ಚೆನ್ನೈ, ಜೂ. 22: ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವವರ ಪೈಕಿ ಒಬ್ಬನಾದ ರಾಬರ್ಟ್ ಪಿಯೂಸ್ ಕಳೆದ 26 ವರ್ಷಗಳಿಂದ ಜೈಲಿನಲ್ಲಿದ್ದು, ಈತ ಇದೀಗ ದಯಾಮರಣಕ್ಕೆ ಅನುಮತಿ ಕೋರಿ ಪುಳಾಲ್ ಜೈಲಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದಾನೆ.

ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಈತನನ್ನೂ ಸೇರಿಸಿ ಎಲ್ಲ ಏಳು ಮಂದಿಯನ್ನು ಬಿಡುಗಡೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಆದರೆ ಈ ಪ್ರಕ್ರಿಯೆಗೆ ಸುಪ್ರೀಂಕೋರ್ಟ್ ತಡೆ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಜೈಲಿನ ಅಪರಾಧಿಗಳ ವಾರ್ಡ್ ಅಧೀಕ್ಷಕರಿಗೆ ಪಿಯೂಸ್ ಅರ್ಜಿ ಸಲ್ಲಿಸಿ, ದಯಾಮರಣಕ್ಕೆ ಅನುಮತಿ ನೀಡುವಂತೆ ಕೋರಿದ್ದಾನೆ. ಇದನ್ನು ಡಿಜಿಪಿ ಕಚೇರಿಗೆ ವರ್ಗಾಯಿಸಲಾಗಿದೆ. ಈ ವಿಚಾರ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ್ದು, ಪ್ರಕರಣದ ವಿಚಾರಣೆ ಇನ್ನೂ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.

ಶ್ರೀಲಂಕಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಭಾರತೀಯ ಶಾಂತಿಪಾಲನಾ ಪಡೆಯ ಕಾರ್ಯಾಚರಣೆಯಲ್ಲಿ ತನ್ನ ಮಗ ಮೃತಪಟ್ಟ ಹಿನ್ನೆಲೆಯಲ್ಲಿ ಶ್ರೀಲಂಕನ್ ತಮಿಳ ಪಿಯೂಸ್ ರಾಜೀವ್ ಹತ್ಯೆ ಪಿತೂರಿಗೆ ಸೇರಿದ್ದ. ಹತ್ಯೆ ಸಂಚು ರೂಪಿಸಿದ ರೂವಾರಿ ಈತ ಎನ್ನುವುದು ತನಿಖೆಯಿಂದ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News