ನೋವಿನ ಹಾದಿಯಿಂದ ಸಂತಸದ ತಾಣಕ್ಕೆ

Update: 2017-06-23 09:13 GMT

‘‘ಆರೋಗ್ಯವೆನ್ನುವುದು ಹೊರಗಿನಿಂದ ತರಿಸಿಕೊಳ್ಳುವಂಥದಲ್ಲ. ಅದು ಒಳಗೆ ತಾನೇ ತಾನಾಗಿ ಬೆಳೆಯುವಂಥದ್ದು, ಅರಳುವಂಥದ್ದು. ಮತ್ತು ಅದು ನಮ್ಮ ವ್ಯಕ್ತಿತ್ವದ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ’’ ಎನ್ನುವ ಅರಿವನ್ನು ನಮಗೆ ನೀಡುವ ಕೃತಿ, ನೇಮಿಚಂದ್ರ ಅವರು ಬರೆದಿರುವ ‘ಸಾವೇ, ಬರುವುದಿದ್ದರೆ ನಾಳೆ ಬಾ!’ ಕೃತಿ. ಈ ಹಿಂದಿನ ಬದುಕು ಬದಲಿಸಬಹುದು ಕೃತಿಯ ಎರಡನೆಯ ಭಾಗ ಇದು. ಹಲವು ಸಾಧಕರನ್ನು ಇಟ್ಟುಕೊಂಡು, ಅವರ ಜೀವನಶೈಲಿಯನ್ನು, ಆಶಾದಾಯಕವಾದ ಬದುಕನ್ನು ವಿವರಿಸುತ್ತಾ ನಮ್ಮಾಳಗಿನ ವ್ಯಕ್ತಿತ್ವವನ್ನು ಅರಳಿಸುವ ಕೆಲಸ ಮಾಡುತ್ತದೆ ಈ ಕೃತಿ. ಮುಖ್ಯವಾಗಿ ಈ ಕೃತಿ ದೈಹಿಕ ಆರೋಗ್ಯವನ್ನು ಕೇಂದ್ರವಾಗಿಟ್ಟುಕೊಂಡು ಬರೆದಿರುವುದಾದರೂ, ರೋಗವೆನ್ನುವುದನ್ನೂ ಪಾಸಿಟಿವ್ ಕಣ್ಣಿನಲ್ಲಿ ನೋಡುವುದನ್ನು ಕಲಿಸುತ್ತಾರೆ.

‘ನಮ್ಮ ಆರೋ ಗ್ಯದ ಜವಾಬ್ದಾರಿಯನ್ನು ನಾವು ಹೊತ್ತೊಡನೆ, ನಿರೋಗದ ಹಾದಿಯಲ್ಲಿ ನಮ್ಮ ಮೊದಲ ಹೆಜ್ಜೆ ಆರಂಭವಾಗುತ್ತದೆ’ ಎನ್ನುವುದನ್ನು ಆ ಕೃತಿ ಬೇರೆ ಬೇರೆ ಉದಾಹರಣೆಗಳ ಮೂಲಕ ಹೇಳುತ್ತದೆ. ‘ನೀರು-ಸರ್ವ ರೋಗ ನಿವಾರಕ’ ಲೇಖನ ದಲ್ಲಿ ನೀರನ್ನು ಬಳಸುವ ಮೂಲಕವೇ ನಮ್ಮ ದೇಹವನ್ನು ಹೇಗೆ ಆರೋಗ್ಯವಾಗಿಟ್ಟು ಕೊಳ್ಳ ಬಹುದು ಎನ್ನುವುದನ್ನು ವಿವರಿಸುತ್ತಾರೆ. ನೀರಿನ ಕೊಡುಗೆಗಳ ಕುರಿತಂತೆ ಕುತೂಹಲಕರ ಮಾಹಿತಿಗಳಿವೆ.

ಡಾ. ಬ್ಯಾಟ್‌ಮ್ಯಾಂಗ್ ಅವರ ಬದುಕಿನುದ್ದದ ಸಂದೇಶ ‘ನೀವು ರೋಗಿ ಯಲ್ಲ, ನೀವು ಬಾಯಾರಿದ್ದೀರಿ ಅಷ್ಟೇ’ ಎನ್ನುವು ದನ್ನು ಮನುಷ್ಯ ಸದಾ ನೆನಪಿನಲ್ಲಿಟ್ಟುಕೊಳ್ಳ ಬೇಕಾಗುತ್ತದೆ. ನಾವು ಸಾಧಾರಣವಾಗಿ ‘ಶತಾಯುಷಿ’ ಎಂದು ಒಬ್ಬ ವ್ಯಕ್ತಿಯನ್ನು ಕರೆದು ಮುಗಿಸಿ ಬಿಡುತ್ತೇವೆ. ಆದರೆ ಪ್ರತೀ ಶತಾಯುಷಿಯಿಂದಲೂ ಕಲಿಯುವುದು ಬಹಳಷ್ಟಿದೆ. ಅವರು ತಮ್ಮ ಬದುಕನ್ನು ರೂಪಿಸಿದ ರೀತಿಯನ್ನು ಅಧ್ಯಯನ ಮಾಡುವ ಅಗತ್ಯವಿದೆ.

ದೀರ್ಘಾ ಯುಷ್ಯದ ಗುಟ್ಟನ್ನು ಒಡೆಯುವ ಪ್ರಯತ್ನ ಇನ್ನೊಂದು ಲೇಖನದಲ್ಲಿ ಮಾಡುತ್ತಾರೆ. ತಮ್ಮ ಲೇಖನಕ್ಕೆ ಶ್ರೀ ಸಿದ್ಧಗಂಗ ಮಠದ ಶಿವಕುಮಾರ ಸ್ವಾಮಿಗಳು, ಪ್ರೊ. ಜೀವಿ, ಪಂಡಿತ್ ಸುಧಾಕರ ಚತುರ್ವೇದಿ ಮೊದಲಾದವರ ಬದುಕನ್ನು ಉದಾಹರಣೆಯಾಗಿ ತೆಗೆದುಕೊಳ್ಳುತ್ತಾರೆ. ಸಾಧಾರಣವಾಗಿ ಒಂದು ಪುಟ್ಟ ಕಾಲುನೋವು ಬಂದರೆ ನಾವು ಆಕಾಶಭೂಮಿ ಒಂದು ಮಾಡುತ್ತೇವೆ. ನಿರಾಶರಾಗುತ್ತೇವೆ. ಆದರೆ ತಮ್ಮ ವೈಕಲ್ಯ ಗಳನ್ನು ಗೆದ್ದು ಆಕಾಶದೆತ್ತರದ ಸಾಧನೆಗಳನ್ನು ಮಾಡಿದವರ ಬದುಕನ್ನು ಅವಲೋಕಿಸಿದರೆ ಸಾಕು, ನಾವು ಪಡೆದುಕೊಂಡದ್ದೇನು ಎನ್ನುವುದು ಗಮನಕ್ಕೆ ಬರುತ್ತದೆ.

‘ಬದುಕು ನಿಲ್ಲಲಿಲ್ಲ ಅಲ್ಲಿಗೇ’ ಕೃತಿಯಲ್ಲಿ ಇಂತಹ ಸಾಧಕರನ್ನು ಮುಂದಿಟ್ಟು ಆತ್ಮವಿಶ್ವಾಸವನ್ನು ಕಟ್ಟುತ್ತಾರೆ. ಕೃತಿಯುದ್ದಕ್ಕೂ ಸಣ್ಣ ಸಣ್ಣದರಲ್ಲಿ ಅಗಾಧತೆಯನ್ನು ಕಾಣಿಸುತ್ತಾರೆ ಲೇಖಕಿ. ನಾವು ಯಾವುದನ್ನು ದೈನಂದಿನ ಬದುಕಿನಲ್ಲಿ ತಿರಸ್ಕರಿಸುತ್ತಾ ಬಂದಿದ್ದೇವೆಯೋ ಅದರಲ್ಲೇ ನಮ್ಮ ಆರೋಗ್ಯವಿದೆ ಎನ್ನುವುದನ್ನು ವಿವರಿಸುತ್ತಾರೆ. ‘ನಮ್ಮ ಚಿಂತನೆ, ವಿಚಾರ ಕ್ರಿಯೆಯ ನಡುವಿನ ಸಾಮರಸ್ಯವನಿರಬೇಕು. ತೀವ್ರ ನೋವಿನ ಹಾದಿ ಸಂತಸದ ತಾಣಕ್ಕೆ ಕರೆದೊಯ್ಯುತ್ತದೆ’ ಎಂಬ ಭರವಸೆಯ ಲೇಖನಗಳು ಈ ಕೃತಿಯಲ್ಲಿವೆ. ನವಕರ್ನಾಟಕ ಪ್ರಕಾಶನ ಹೊರ ತಂದಿರುವ ಈ ಕೃತಿಯ ಮುಖಬೆಲೆ 190 ರೂ. .

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News