ಜಿಎಸ್‌ಟಿ ಚಾಲನಾ ಸಭೆಗೆ ಮಾಜಿ ಪ್ರಧಾನಿ ಸಿಂಗ್‌ಗೆ ಆಹ್ವಾನ

Update: 2017-06-27 04:03 GMT

ಹೊಸದಿಲ್ಲಿ, ಜೂ. 27: ದೇಶದಲ್ಲಿ ಹೊಸ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಗೆ ಚಾಲನೆ ನೀಡುವ ಸಂಬಂಧ ಈ ತಿಂಗಳ 30ರಂದು ಮಧ್ಯರಾತ್ರಿ ಕರೆದಿರುವ ವಿಶೇಷ ಸಭೆಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಎನ್‌ಡಿಎ ಆಹ್ವಾನಿಸಿದೆ. ಮತ್ತೊಬ್ಬ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಜತೆಗೆ ಅವರು ವೇದಿಕೆ ಹಂಚಿಕೊಳ್ಳುವ ಸಾಧ್ಯತೆ ಇದೆ.

ಸಂಸತ್ ಭವನದಲ್ಲಿ ನಡೆಯುವ ಈ ಐತಿಹಾಸಿಕ ಸಭೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸುವ ಪತ್ರವನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ, ಸಿಂಗ್ ಅವರಿಗೆ ಖುದ್ದಾಗಿ ನೀಡಿದರು. ಲೋಕಸಭೆಯಲ್ಲಿ ಬಹುಮತ ಇದ್ದರೂ, ಜಿಎಸ್‌ಟಿ ಜಾರಿಗೆ ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ಬೆಂಬಲ ಪಡೆಯಲು ಎನ್‌ಡಿಎ ಸರ್ಕಾರಕ್ಕೆ ಮೂರು ವರ್ಷಗಳು  ಬೇಕಾದವು ಎನ್ನುವುದು ಗಮನಾರ್ಹ. ನೋಟು ರದ್ದತಿ ನಿರ್ಧಾರವನ್ನು ಕೇಂದ್ರ ಸರ್ಕಾರ ಗುಪ್ತವಾಗಿ ಕೈಗೊಂಡಿದ್ದರೆ, ಜಿಎಸ್‌ಟಿ ವಿಚಾರದಲ್ಲಿ ಒಮ್ಮತಾಭಿಪ್ರಾಯ ಮೂಡಿಸುವ ನಿಟ್ಟಿನಲ್ಲಿ ವಿರೋಧ ಪಕ್ಷಗಳ ಜತೆ ಹಲವು ಸುತ್ತಿನ ಮಾತುಕತೆ ನಡೆಸಿತ್ತು.

ನೋಟು ರದ್ದತಿಯನ್ನು ಸಂಘಟಿತ ಲೂಟಿ ಎಂದು ಕಿಡಿಕಾರಿದ್ದ ಮನಮೋಹನ್ ಅವರನ್ನು ಜಿಎಸ್‌ಟಿ ವಿಶೇಷ ಸಭೆಗೆ ಆಹ್ವಾನಿಸಿರುವುದು ಅಚ್ಚರಿ ಮೂಡಿಸಿದೆ. ಜಿಎಸ್‌ಟಿಗೆ ಚಾಲನೆ ನೀಡುವ ಸಂಬಂಧ ತರಾತುರಿ ನಿರ್ಧಾರ ಕೈಗೊಳ್ಳಲಾಗಿದೆ. ಆದ್ದರಿಂದ ಜಿಎಸ್‌ಟಿ ಚಾಲನಾ ಸಭೆಯಿಂದ ದೂರ ಉಳಿಯುವುದಾಗಿ ಕೆಲ ವಿರೋಧ ಪಕ್ಷಗಳು ಘೋಷಿಸಿದ್ದು, ಇದೀಗ ವಿರೋಧ ಪಕ್ಷಗಳ ನಡೆ ಕುತೂಹಲಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News