ಪೊಲೀಸರಿಗೆ ಲಂಚ ನೀಡಲು ಪಿಗ್ಗಿ ಬ್ಯಾಂಕ್ ತಂದ 5 ವರ್ಷದ ಬಾಲಕಿ !

Update: 2017-06-29 07:54 GMT

ಮೀರತ್, ಜೂ. 29: ಮನಕಲಕುವ ಘಟನೆಯೊಂದರಲ್ಲಿ ಎರಡು ತಿಂಗಳ ಹಿಂದೆ ತನ್ನ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿರುವ ಐದು ವರ್ಷದ ಬಾಲಕಿಯೊಬ್ಬಳು ಮಂಗಳವಾರ ಐಜಿ ರಾಮ್ ಕುಮಾರ್ ಅವರ ಕಚೇರಿಗೆ ತನ್ನ ಪಿಗ್ಗಿ ಬ್ಯಾಂಕಿನೊಂದಿಗೆ ತೆರಳಿ ಅದನ್ನು ಪಡೆದುಕೊಂಡು ತನ್ನ ತಾಯಿಯ ಪ್ರಕರಣದ ತನಿಖೆಯನ್ನು ಶೀಘ್ರಗೊಳಿಸುವಂತೆ ಬೇಡಿಕೊಂಡಿದ್ದಾಳೆ.

ಮೀರತ್ ನಲ್ಲಿ ವಾಸಿಸುವ ಈ ಮಾನ್ವಿ ಎಂಬ ಹೆಸರಿನ ಬಾಲಕಿ ತನ್ನ ಅಜ್ಜನೊಂದಿಗೆ ಠಾಣೆಗೆ ಆಗಮಿಸಿದ್ದಳು. ಲಂಚ ನೀಡದೆ ಈ ಪ್ರಕರಣದ ತನಿಖೆ ಮುಂದುವರಿಯದು ಎಂದು ತಿಳಿದಿದ್ದರಿಂದ ತಾನು ಹೀಗೆ ಮಾಡಿದೆ ಎಂದೂ ಬಾಲಕಿ ಪೊಲೀಸ್ ಅಧಿಕಾರಿಗೆ ಹೇಳಿದ್ದಳು.

ಐಜಿ ರಾಮ್ ಕುಮಾರ್ ಬಾಲಕಿಗೆ ಪ್ರಕರಣದ ಶೀಘ್ರ ತನಿಖೆಯ ಬಗ್ಗೆ ಆಶ್ವಾಸನೆ ನೀಡಿ ಆಕೆ ತಂದಿದ್ದ ಪಿಗ್ಗಿ ಬ್ಯಾಂಕನ್ನು ಆಕೆಗೆ ಹಿಂದಿರುಗಿಸಿದ್ದರು. ಅಲ್ಲಿಂದ ಹಿಂದಿರುಗುವಾಗ ಮಾನ್ವಿ ತನ್ನ ಪಿಗ್ಗಿ ಬ್ಯಾಂಕನ್ನು ಕೆಳಕ್ಕೆ ಹಾಕಿ ಜೋರಾಗಿ ಅತ್ತು ಬಿಟ್ಟಾಗ ಎಂಥವರ ಹೃದಯವೂ ಚುರ್ರೆನ್ನದೇ ಇರಲಿಲ್ಲ.

ಮಾನ್ವಿಯ ತಾಯಿ ಸೀಮಾ ಕೌಶಿಕ್ ಎಪ್ರಿಲ್ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ವರದಕ್ಷಿಣೆಗಾಗಿ ಗಂಡನ ಮನೆಯವರ ಕಿರುಕುಳವೇ ಇದಕ್ಕೆ ಕಾರಣವೆಂದು ಆಕೆಯ ಕುಟುಂಬ ದೂರಿತ್ತು. ಗಂಡನ ಮನೆಯವರು ಆಕೆಯ ವಿರುದ್ಧ ಎರಡು ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದರೂ ಅವುಗಳನ್ನು ನ್ಯಾಯಾಲಯ ತಿರಸ್ಕರಿಸಿತ್ತು ಎಂದು ಅವರು ಹೇಳಿದ್ದರು.

ಸೀಮಾ ತನ್ನ ಪತಿಯಿಂದ ನಾಲ್ಕು ವರ್ಷಗಳ ಹಿಂದೆಯೇ ಪ್ರತ್ಯೇಕಗೊಂಡಿದ್ದರು. ತನಗೆ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಹಾಗೂ ಬೆದರಿಕೆಯೊಡ್ಡಲಾಗುತ್ತಿದೆ ಎಂದು ಆಕೆ ಸಲ್ಲಿಸಿದ ದೂರುಗಳಿಂದ ಯಾವುದೇ ಪ್ರಯೋಜನವಾಗಿರದೆ ಹತಾಶಳಾಗಿ ಅವರು ಆತ್ಮಹತ್ಯೆಗೈದಿದ್ದರೆಂದು ಹೇಳಲಾಗುತ್ತಿದೆ.

ಸೀಮಾಳ ಪತಿ ಕೌಶಿಕ್ ನನ್ನು ಬಂಧಿಸಲಾಗಿದ್ದರೂ ಉಳಿದವರ ವಿರುದ್ಧ ಸಾಕಷ್ಟು ಸಾಕ್ಷ್ಯ ದೊರೆತಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ.

ಪ್ರಕರಣದ ಚಾರ್ಜ್ ಶೀಟ್ ಸಲ್ಲಿಸಬೇಕಾದರೆ ಪೊಲೀಸರು ಲಂಚದ ಬೇಡಿಕೆಯಿಟ್ಟಿದ್ದರು ಎಂದು ಸೀಮಾ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದು ಆದಷ್ಟು ಬೇಗ ಸಾಕ್ಷ್ಯಗಳನ್ನು ಸಂಗ್ರಹಿಸಿ ಎಲ್ಲಾ ಆರೋಪಿಗಳನ್ನು ಬಂಧಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದು ಮೀರತ್ ನಗರದ ಹಿರಿಯ ಪೊಲೀಸ್ ಅಧಿಕಾರಿ ಜೆ ರವೀಂದ್ರ ಗೌರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News