ದೇಶದ ಅತ್ಯಂತ ದೊಡ್ಡ ತೆರಿಗೆ ಸುಧಾರಣೆ ಎನ್ನಲಾದ "ಜಿಎಸ್ ಟಿ"ಯ ಶಿಲ್ಪಿಗಳಿವರು...

Update: 2017-07-01 09:25 GMT

ಹೊಸದಿಲ್ಲಿ, ಜು.1: ಸರಕು ಸೇವಾ ತೆರಿಗೆ, "ಜಿಎಸ್ ಟಿ" ದೇಶದಲ್ಲಿ ಇದೀಗ ಜಾರಿಯಾಗಿದೆ. ದೇಶದ ಅತ್ಯಂತ ದೊಡ್ಡ ತೆರಿಗೆ ಸುಧಾರಣೆ ಇದೆಂದು ಬಣ್ಣಿಸಲಾಗಿದ್ದು ಕಳೆದ 17 ವರ್ಷಗಳ ಅವಧಿಯಲ್ಲಿ ಇದರ ತಯಾರಿಯ ಹಿಂದೆ  ಹಲವು ಪ್ರಮುಖರ ಕೊಡುಗೆಯಿದೆ.
ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದ ವಿ.ಪಿ. ಸಿಂಗ್ ಅವರು ವಿತ್ತ ಸಚಿವರಾಗಿದ್ದಾಗ ಮೋಡಿಫೈಡ್ ವ್ಯಾಲ್ಯೂ ಆ್ಯಡೆಡ್ ಟ್ಯಾಕ್ಸ್  1986-87ರಲ್ಲಿ ಜಾರಿಯಾದಾಗ  ತೆರಿಗೆ ಸುಧಾರಣೆಯಲ್ಲಿ ಪ್ರಥಮ ಹೆಜ್ಜೆ ಇಡಲಾಗಿತ್ತು. ವಾಜಪೇಯಿಯವರು ಎನ್ ಡಿ ಎ ಸರಕಾರದ ನೇತೃತ್ವ ವಹಿಸಿದ್ದಾಗ 1999ರಲ್ಲಿ ಮೊದಲ ಬಾರಿ ಜಿ ಎಸ್ ಟಿ ಪ್ರಸ್ತಾಪವಾಗಿತ್ತು.

 
ಜಿಎಸ್ ಟಿ ಅನುಮೋದಿಸಿದ್ದ ವಾಜಪೇಯಿ: ವಾಜಪೇಯಿ ಹಾಗೂ ಅವರ ಮೂರು ಸಲಹೆಗಾರರಾಗಿದ್ದ  ಮಾಜಿ ಆರ್ ಬಿಐ ಗವರ್ನರುಗಳಾದ ಐ.ಜಿ. ಪಟೇಲ್, ಬಿಮಲ್ ಜಲನ್ ಹಾಗೂ ಸಿ. ರಂಗರಾಜನ್ ಅವರ ನಡುವೆ ನಡೆದ ಸಭೆಯೊಂದರಲ್ಲಿ ಜಿಎಸ್ ಟಿ ಮೊದಲು ಪ್ರಸ್ತಾಪವಾಗಿ ಅದನ್ನು ವಾಜಪೇಯಿ ಒಪ್ಪಿದ್ದರು. 2000ರಲ್ಲಿ ಸಿಪಿಐ(ಎಂ) ನಾಯಕ  ಹಾಗೂ ಆಗಿನ ಪಶ್ಚಿಮ ಬಂಗಾಳದ ವಿತ್ತ ಸಚಿವ ಅಸೀಮ್ ದಾಸಗುಪ್ತಾ ಅವರ ನೇತೃತ್ವದಲ್ಲಿ ವಾಜಪೇಯಿ ಸಮಿತಿಯೊದನ್ನು ರಚಿಸಿದ್ದರು. ಇದಕ್ಕಾಗಿ ಆಗಿನ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಜ್ಯೋತಿ ಬಸು ಅವರನ್ನು ಸಂಪರ್ಕಿಸಿ ಅವರ ಸಚಿವರೊಬ್ಬರನ್ನು ಈ ಮಹತ್ವದ ಕಾರ್ಯಕ್ಕೆ ಸೇವೆ ಸಲ್ಲಿಸಲು ಅವಕಾಶ ನೀಡುವಂತೆ ಕೋರಿದ್ದರು.

ಜಿಎಸ್ ಟಿಯ ನಿಜವಾದ ಶಿಲ್ಪಿ ಅಸೀಮ್ ದಾಸಗುಪ್ತಾ: ಎಂಐಟಿಯಿಂದ ಡಾಕ್ಟರೇಟ್ ಪದವಿ ಪಡೆದಿರುವ ದಾಸಗುಪ್ತಾ ಅವರು ದೇಶ ಕಂಡ ಅತ್ಯಂತ ಪ್ರತಿಭಾನ್ವಿತ ಆರ್ಥಿಕ ತಜ್ಞರಲ್ಲೊಬ್ಬರಾಗಿದ್ದರು. ವಾಜಪೇಯಿ ಆಡಳಿತದ ನಂತರ ಯುಪಿಎ ಅಧಿಕಾರಕ್ಕೆ ಬಂದು ಮನಮೋಹನ್ ಸಿಂಗ್ ಅವರು ಪ್ರಧಾನಿಯಾದಾಗ ಅವರು ದಾಸಗುಪ್ತಾ ಅವರ ಸ್ಥಾನಕ್ಕೆ ಬೇರೊಬ್ಬರನ್ನು ನೇಮಿಸಲು ನಿರಾಕರಿಸಿದ್ದರು. ಜಿಎಸ್ ಟಿ ಗಾಗಿ ಸಿಂಗ್ ಅವರಿಂದ ರಚಿತ ಸಮಿತಿಯ ನೇತೃತ್ವವನ್ನು ದಾಸಗುಪ್ತಾ  ವಹಿಸಿದ್ದರು. 2011ರಲ್ಲಿ ಅವರು ಈ ಸಮಿತಿಯಿಂದ ರಾಜೀನಾಮೆ ನೀಡಿದಾಗ ಶೇ 80ರಷ್ಟು ಕೆಲಸ ಪೂರೈಸಿದ್ದರು.

ಕೆ.ಎಂ. ಮಣಿ: ಆಗಿನ ಕೇರಳದ ವಿತ್ತ ಸಚಿವರಾಗಿದ್ದ ಮಣಿ ಅವರು ದಾಸಗುಪ್ತಾ ಅವರ ಸ್ಥಾನವನ್ನು 2011ರಲ್ಲಿ ತುಂಬಿದರು. ಜಿಎಸ್ ಟಿ ಮಸೂದೆಗೆ ಅಂತಿಮ ಸ್ವರೂಪ ನೀಡಿದವರು ಅವರು. ವಿವಿಧ ರಾಜ್ಯಗಳಿಗೆ ಜಿ ಎಸ್ ಟಿ ಬಗೆಗಿದ್ದ ಭಯವನ್ನು ದೂರ ಮಾಡಿದವರಿವರು. ವರ್ತಕರ ಸಂಘಟನೆಗಳನ್ನೂ ಅವರು ವಿಶ್ವಾಸಕ್ಕೆ ಪಡೆದುಕೊಂಡರು. ಆದರೆ 2015ರಲ್ಲಿ ಭ್ರಷ್ಟಾಚಾರ ಹಗರಣವೊಂದರಲ್ಲಿ ಸಿಲುಕಿದ ನಂತರ ಅವರು ರಾಜೀನಾಮೆ ನೀಡಬೇಕಾಯಿತು.

ಅಮಿತ್ ಮಿತ್ರ: ಮಣಿ ನಂತರ ಜಿಎಸ್ ಟಿ ಸಮಿತಿಯ ನೇತೃತ್ವವನ್ನು ಪಶ್ಚಿಮ ಬಂಗಾಳದ ವಿತ್ತ ಸಚಿವರಾಗಿದ್ದ ಅಮಿತ್ ಮಿತ್ರಾರಿಗೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ವಹಿಸಿದ್ದರು. ಮಿತ್ರಾ ಕೂಡ ಆರ್ಥಿಕ ತಜ್ಞರಾಗಿದ್ದು ಎಫ್‍ಐಸಿಸಿಐ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು. ರಾಜ್ಯಗಳು ಜಿಎಸ್ ಟಿ ಒಪ್ಪುವಂತೆ ಮಾಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರಲ್ಲದೆ ರಾಜ್ಯಗಳ ವಿತ್ತ ಸಚಿವರುಗಳೊಂದಿಗೆ ಹಲವು ಸಭೆಗಳನ್ನೂ ನಡೆಸಿದ್ದರು.

ಪಿ.ಚಿದಂಬರಂ: 2005ರಲ್ಲಿ ವಿತ್ತ ಸಚಿವರಾಗಿದ್ದ ಪಿ.ಚಿದಂಬರಂ ಜಿಎಸ್ ಟಿ ಜಾರಿಗೆ ಬದ್ಧತೆಯನ್ನು ತೋರಿಸಿದ್ದರು ಹಾಗೂ ವಿವಿಧ ಬಜೆಟ್ ಗಳಲ್ಲಿ ಜಿಎಸ್ ಟಿ ಜಾರಿ ಬಗ್ಗೆ ಪ್ರಸ್ತಾಪಿಸಿದ್ದರು. ನಂತರ ವಿತ್ತ ಸಚಿವರಾಗಿದ್ದ ಪ್ರಣಬ್ ಮುಖರ್ಜಿ ಕೂಡ ದಾಸಗುಪ್ತಾ ಸಮಿತಿಯ ಜಿಎಸ್ ಟಿ ನೀತಿಯನ್ನು ಒಪ್ಪಿದ್ದರೂ ಯುಪಿಎ ಎರಡನೇ ಸರಕಾರದ ಅವಧಿಯಲ್ಲಿ ರಾಜಕೀಯವೇ ಈ ಜಿಎಸ್ ಟಿ ಜಾರಿಯನ್ನು ತಡೆ ಹಿಡಿದಿತ್ತು. 

ಅರುಣ್ ಜೇಟ್ಲಿ: ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ವಿತ್ತ ಸಚಿವರಾಗಿರುವ ಅರುಣ್ ಜೇಟ್ಲಿ  ಮೊದಲು ಎಪ್ರಿಲ್ 2016ರಲ್ಲಿ ಜಿ ಎಸ್ ಟಿ ಜಾರಿಗೊಳಿಸಲಾಗುವುದು ಎಂದು ಹೇಳಿದ್ದರೂ ಅಂತಿಮವಾಗಿ ಜುಲೈ 1ರಂದು ಅದು ಜಾರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News