ನಾನೇಕೆ ಹಿಂದೂ ಅಲ್ಲ ಒಂದು ಶೂದ್ರ ವಿಮರ್ಶೆ

Update: 2017-07-02 18:29 GMT

ಕಳೆದ ಒಂದು ದಶಕದಿಂದ ‘ಹಿಂದೂ’ ಎನ್ನುವ ಶಬ್ದ ಸಾಕಷ್ಟು ಚರ್ಚೆಗಳಿಗೆ, ವಾದ ವಿವಾದಗಳಿಗೆ ಕಾರಣವಾಗುತ್ತಿದೆ. ಹಿಂದುತ್ವ ಎನ್ನುವ ಶಬ್ದದ ಪೊಳ್ಳುತನಗಳು ಪದೇ ಪದೇ ಬಯಲಾಗುತ್ತಿದ್ದರೂ, ಈ ದೇಶವನ್ನು ಹಿಂದುತ್ವ ರಾಷ್ಟ್ರೀಯತೆಯ ಅಡಿಯಲ್ಲಿ ತಂದು ನಿಲ್ಲಿಸಲು ಕೆಲವು ಶಕ್ತಿಗಳು ದುಡಿಯುತ್ತಿವೆ. ಹಿಂದುತ್ವ ಎನ್ನುವ ಮೋಸಕ್ಕೆ ಶ್ರೀಸಾಮಾನ್ಯ ಸುಲಭದಲ್ಲಿ ಬಲಿ ಬೀಳುತ್ತಿದ್ದಾರೆ. ಶೂದ್ರ, ದಲಿತ ವರ್ಗ ಕೂಡ ಹಿಂದುತ್ವದ ಬಲೆಗೆ ಬೀಳುತ್ತಿರುವುದು ಸದ್ಯದ ಅತ್ಯಂತ ಆತಂಕಕಾರಿ ಸಂಗತಿಯಾಗಿದೆ. ಇಂತಹ ಹೊತ್ತಿನಲ್ಲಿ ‘ನಾನೇಕೆ ಹಿಂದೂ ಅಲ್ಲ’ ಎನ್ನುವ ಕಾಂಚ ಐಲಯ್ಯ ಅವರ ಕೃತಿ ಹೆಚ್ಚು ಹೆಚ್ಚು ಪ್ರಸ್ತುತವಾಗುತ್ತಿದೆ. ಹಿಂದುತ್ವ ತತ್ವ ಜ್ಞಾನ ಸಂಸ್ಕೃತಿ ಮತ್ತು ರಾಜಕೀಯ ಅರ್ಥವ್ಯವಸ್ಥೆ ಕುರಿತಂತೆ ಒಂದು ಶೂದ್ರ ವಿಮರ್ಶೆ ಇದಾಗಿದೆ. 90ರ ದಶಕದಲ್ಲಿ ಬಂದ ಈ ಕೃತಿ, ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿತ್ತು. ಕನ್ನಡದಲ್ಲಿ ಎರಡನೆ ಬಾರಿ ಇದು ಮುದ್ರಿಸಲ್ಪಡುತ್ತಿದ್ದು, ಲಡಾಯಿ ಪ್ರಕಾಶನ ಹೊರತಂದಿದೆ. ಮಂಗಳೂರು ವಿಜಯ ಇದನ್ನು ಕನ್ನಡಕ್ಕಿಳಿಸಿದ್ದಾರೆ.

ತಾನು ಬದುಕಿದ ಸಮಾಜವನ್ನು ಕೇಂದ್ರವಾಗಿಟ್ಟುಕೊಂಡು ಹಿಂದುತ್ವದ ಅಸಲಿಯತ್ತು ಏನು ಎನ್ನುವುದನ್ನು ಕಾಂಚ ಐಲಯ್ಯ ನಿರೂಪಿಸುತ್ತಾ ಸಾಗುತ್ತಾರೆ. ಈ ಮೂಲಕ ಸ್ವಕಥನ ವಾಗುವುದರ ಜೊತೆಗೆ ಸಾರ್ವತ್ರಿಕವಾಗಿ ಇಲ್ಲಿರುವ ಚಿಂತನೆಗಳು ವಿಸ್ತರಿಸಿಕೊಳ್ಳುತ್ತದೆ. ತಾನು ಹೇಗೆ ಹಿಂದೂ ಅಲ್ಲ ಎನ್ನುವುದನ್ನು ತನ್ನದೇ ಸಮಾಜದ ನಂಬಿಕೆ ಆಚರಣೆಗಳನ್ನು ಮುಂದಿಟ್ಟುಕೊಂಡು ಲೇಖಕರು ವಿಶ್ಲೇಷಿಸುತ್ತಾರೆ. ಬಾಲ್ಯ, ಮದುವೆ, ಮಾರುಕಟ್ಟೆ, ಸಾಮಾಜಿಕ ಸಂಬಂಧಗಳು, ತಾವು ನಂಬುವ ದೇವರು ಹೇಗೆ ಹಿಂದೂ ನಂಬಿಕೆಗಿಂತ ಭಿನ್ನ ಎನ್ನುವುದನ್ನು ಅವರು ಬರೆಯುತ್ತಾರೆ. ಅಂತಿಮವಾಗಿ ಹಿಂದುತ್ವ ಎನ್ನುವ ವೈದಿಕೀಕರಣಕ್ಕೂ, ದಲಿತ ಬದುಕಿಗೂ ಇರುವ ಅಗಾಧ ಅಂತರವನ್ನು ಅವರು ಸ್ಪಷ್ಟಪಡಿಸುತ್ತಾರೆ. ಸಾಮಾಜಿಕ, ಸಾಂಸ್ಕೃತಿಕ ಭಿನ್ನತೆಗಳನ್ನು ತುಲನೆ ಮಾಡುವಾಗ ವೈಯಕ್ತಿಕ ಅನುಭವಗಳನ್ನು ಒರೆಗೆ ಹಚ್ಚುವುದೇ ಅಧ್ಯಯನ ಮತ್ತು ಮನವರಿಕೆಯ ಉತ್ತಮ ವಿಧಾನ ಎಂದು ಅಭಿಪ್ರಾಯ ಪಡುವ ಲೇಖಕರು, ನಿಜವನ್ನು ಸಮರ್ಥವಾಗಿ ರಾಚುವ ಶಕ್ತಿ ಇರುವುದು ವ್ಯಕ್ತಿಗತ ಅನುಭವಗಳಿಗೇ ಆಗಿದೆ ಎನ್ನುವ ನಂಬಿಕೆಯಲ್ಲಿ ಈ ಕೃತಿಯನ್ನು ಬರೆದಿದ್ದಾರೆ. ಸಾಮಾಜಿಕ-ಸಾಂಸ್ಕೃತಿಕ ಹಾಗೂ ಆರ್ಥಿಕ ಚರಿತ್ರೆಯನ್ನು ಈ ಮೂಲಕವೇ ನಿಕಷಕ್ಕೊಡು್ಡವ ಪ್ರಯತ್ನವನ್ನು ಮಾಡುತ್ತಾರೆ.

184 ಪುಟಗಳ ಈ ಕೃತಿಯ ಮುಖಬೆಲೆ 140 ರೂಪಾಯಿ. ಆಸಕ್ತರು 94802 86844 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News