ಜಿಎಸ್‌ಟಿ ಪ್ರಭಾವ: ದುರ್ಗಾಪೂಜೆಯ ಸಂದರ್ಭ ಜವಳಿ ಬೆಲೆ ಹೆಚ್ಚುವ ನಿರೀಕ್ಷೆ

Update: 2017-07-03 17:19 GMT

ಕೋಲ್ಕತಾ, ಜು.3: ಜಿಎಸ್‌ಟಿ ಜಾರಿಗೆ ಬಂದಿರುವ ಕಾರಣ ಈ ಬಾರಿಯ ದುರ್ಗಾಪೂಜೆಯ ಸಂದರ್ಭ ಜವಳಿ(ಬಟ್ಟೆ ಬರೆ) ಖರೀದಿಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ನಿರೀಕ್ಷೆಯಿದೆ.

      ಜಿಎಸ್‌ಟಿ ಯುಗದಲ್ಲಿ ನೂಲು, ಹತ್ತಿಯ ಮೇಲೆ ಹಾಗೂ 1,000 ರೂ.ವರೆಗಿನ ಬಟ್ಟೆಬರೆ ಮೇಲೆ ಶೇ.5ರಷ್ಟು ತೆರಿಗೆ ವಿಧಿಸಿರುವ ಕಾರಣ ಜವಳಿ ಬೆಲೆಯಲ್ಲಿ ಶೇ.22ರಿಂದ-ಶೇ.25ರಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ. ಸಿದ್ಧಬಟ್ಟೆಗಳಿಗೆ ಶೇ.12ರಷ್ಟು, ಕೈಯಿಂದ ತಯಾರಿಸಿದ ನೂಲಿನ ಮೇಲೆ ಶೇ.18ರಷ್ಟು ತೆರಿಗೆ ವಿಧಿಸಲಾಗಿದೆ. ಶಾಂತಿಪುರ, ಫುಲಿಯ, ಮುರ್ಷಿದಾಬಾದ್, ಬೀರ್ಭಮ್ ಮುಂತಾದ ಪ್ರದೇಶಗಳಲ್ಲಿರುವ ಹಲವಾರು ಸಾಂಪ್ರದಾಯಿಕ, ಯಾಂತ್ರೀಕೃತವಲ್ಲದ ಸೀರೆ ಉತ್ಪಾದಿಸುವ ಘಟಕಗಳು ಜಿಎಸ್‌ಟಿಯ ಕಾರಣ ತಮ್ಮ ವ್ಯವಹಾರಕ್ಕೆ ಭಾರೀ ಹೊಡೆತ ಬೀಳುವುದೆಂಬ ಭೀತಿಯಲ್ಲಿವೆ. ಮುಂಬರುವ ಹಬ್ಬಗಳ ಸೀಸನ್‌ನಲ್ಲಿ ತಮ್ಮ ಲಾಭದ ಮಟ್ಟವನ್ನು ಕಾಯ್ದುಕೊಳ್ಳಲು ಸಗಟು ವ್ಯಾಪಾರಿಗಳು ಚೌಕಾಸಿಗೆ ಇಳಿಯಲಿದ್ದಾರೆ ಎಂದು ಜವಳಿ ಉತ್ಪಾದಕರು ಹೇಳುತ್ತಾರೆ.

  ಜವಳಿ ಉದ್ದಿಮೆ ಕ್ಷೇತ್ರದಲ್ಲಿರುವ ಬಹುತೇಕ ಕಾರ್ಮಿಕರು ಅವಿದ್ಯಾವಂತರು. ಈ ಉದ್ಯಮಗಳನ್ನು ನಡೆಸುವವರಲ್ಲಿ ಕೂಡಾ ಹೆಚ್ಚಿನವರಿಗೆ ತೆರಿಗೆ ಪದ್ದತಿಯ ಬಗ್ಗೆ ಅರಿವು ಇರುವುದಿಲ್ಲ. ನಮ್ಮ ವ್ಯವಹಾರ ನಡೆಸುವುದು ಹೇಗೆ ಎಂದು ತಿಳಿಯದೆ ಗೊಂದಲದಲ್ಲಿದ್ದೇವೆ ಎಂದು ಫುಲಿಯಾದಲ್ಲಿರುವ ಬೆಂಗಾಲಿ ಸೀರೆಗಳ ಸಗಟು ವ್ಯಾಪಾರಿ ಭವಾನಿ ಮಲಿಕ್ ಎಂಬವರು ಹೇಳಿದ್ದಾರೆ.

    ಈ ಬಾರಿ ಸೆಪ್ಟೆಂಬರ್‌ನಲ್ಲೇ ದುರ್ಗಾ ಪೂಜೆ ಬರುತ್ತದೆ. ಜಿಎಸ್‌ಟಿ ಜಾರಿಯ ಬಳಿಕ ಪರಿಷ್ಕೃತ ಬೆಲೆಯ ಬಗ್ಗೆ ಹಾಗೂ ಜವಳಿ ವ್ಯಾಪಾರದ ಮೇಲೆ ಎಷ್ಟು ತೆರಿಗೆ ಹೊರೆ ಬೀಳಲಿದೆ ಎಂದು ಅರಿತುಕೊಂಡು ಈ ವ್ಯವಸ್ಥೆಗೆ ಹೊಂದಿಕೊಳ್ಳಲು ನಮಗೆ ಹೆಚ್ಚು ಸಮಯವಿಲ್ಲ ಎಂದು ಜವಳಿ ವ್ಯಾಪಾರ ಮತ್ತು ಉದ್ದಿಮೆ ಮಂಡಳಿ ಅಧ್ಯಕ್ಷ ಅರುಣ್ ಭುವಾಲ್ಕ ಹೇಳುತ್ತಾರೆ. ದೇಶಕ್ಕೆ ಸ್ವಾತಂತ್ರ ದೊರೆತ ಬಳಿಕ ಇದುವರೆಗೂ ನಾವು ತೆರಿಗೆ ಪಾವತಿಸಿಲ್ಲ. ಆದರೆ ಈಗ ಬೆಲೆ ಏರಿಸದೆ ಬೇರೆ ಆಯ್ಕೆಯಿಲ್ಲ. ನಮ್ಮ ಉತ್ಪಾದನಾ ವೆಚ್ಚ ಶೇ.10ರಿಂದ 12ರಷ್ಟು ಹೆಚ್ಚಳವಾಗಲಿದ್ದು ಅಂತಿಮವಾಗಿ ಗ್ರಾಹಕರ ಮೇಲೆ ಇದು ಪರಿಣಾಮ ಬೀರಲಿದೆ ಎಂದವರು ಹೇಳುತ್ತಾರೆ.

   ಪ.ಬಂಗಾಳದಲ್ಲಿ 5 ಲಕ್ಷಕ್ಕೂ ಹೆಚ್ಚು ಜವಳಿ ವ್ಯಾಪಾರಿಗಳಿದ್ದು ಇವರಲ್ಲಿ ಸುಮಾರು 52,000 ಮಂದಿ ಕೋಲ್ಕತಾದಲ್ಲಿಯೇ ಇದ್ದಾರೆ. ಬಂಗಾಳದಲ್ಲಿ ಜವಳಿ ಮಾರುಕಟ್ಟೆ ಬೃಹದಾಕಾರದಲ್ಲಿ ಬೆಳೆದಿದೆ. ದುರ್ಗಾಪೂಜೆ (ನವರಾತ್ರಿ) ಸಂದರ್ಭದಲ್ಲಿ ಮಾರಾಟ ಪ್ರಮಾಣ ಸುಮಾರು ಶೇ.10ರಿಂದ 15ರಷ್ಟು ಹೆಚ್ಚಳವಾಗುತ್ತದೆ. ಈ ವ್ಯಾಪಾರದ ಮೇಲೆ ತೆರಿಗೆ ಶ್ರೇಣಿ ಯಾವ ರೀತಿಯ ಪ್ರಭಾವ ಬೀರಲಿದೆ ಎಂಬುದನ್ನು ಯಾರು ಕೂಡಾ ಊಹಿಸಬಹುದು . ಪ.ಬಂಗಾಲ ಮಾತ್ರವಲ್ಲ, ಗುಜರಾತ್, ಮಹಾರಾಷ್ಟ, ತಮಿಳುನಾಡಿನಲ್ಲೂ ಇದೇ ರೀತಿಯ ಸಮಸ್ಯೆಯಿದೆ ಎಂದು ಅರುಣ್ ಹೇಳುತ್ತಾರೆ.

ತಮಗೆ ಎದುರಾಗಲಿರುವ ಸಮಸ್ಯೆ ಕುರಿತು ಜವಳಿ ವ್ಯಾಪಾರಿಗಳ ಒಕ್ಕೂಟವು ಕೇಂದ್ರ ವಿತ್ತ ಸಚಿವರಿಗೆ, ಸಹಾಯಕ ವಿತ್ತ ಸಚಿವರಿಗೆ ಹಲವಾರು ಬಾರಿ ಪತ್ರ ಬರೆದು ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ದೇಶದಾದ್ಯಂತದ ಜವಳಿ ವ್ಯಾಪಾರಿ, ಉದ್ದಿಮೆಗಳ ಸಂಘಟನೆಯವರು ಸಭೆ ಸೇರಿ, ಮುಂದಿನ ನಡೆಯ ಬಗ್ಗೆ ಚರ್ಚಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News