ಕಂಬಳವೆಂಬ ಶೋಕಿಗೆ ಅನುಮತಿ: ರೈತರ ಹೈನೋದ್ಯಮಕ್ಕೆ ತಿಥಿ

Update: 2017-07-04 18:46 GMT

ಶ್ರೀಸಾಮಾನ್ಯ ಅಕ್ಕಿ, ಬೇಳೆಯ ಕುರಿತಂತೆ ಮಾತನಾಡುತ್ತಿರುವ ಹೊತ್ತಿನಲ್ಲಿ, ಕರಾವಳಿಯ ಜನರ ಜುಟ್ಟಿಗೆ ಮಲ್ಲಿಗೆ ಎಸಳನ್ನು ‘ಕೊಡುಗೆ’ಯಾಗಿ ಕೊಟ್ಟು ಮೋಸ ಮಾಡಲು ಹೊರಟಿದೆ ಸರಕಾರ. ಕಂಬಳಕ್ಕೆ ರಾಷ್ಟ್ರಪತಿ ಅಂಕಿತ ಹಾಕಿರುವುದನ್ನು ರಾಜ್ಯದ ಜನರ ಕಿವಿಗೆ ಇಟ್ಟ ಹೂವು ಎಂದೇ ಕರೆಯಬೇಕಾಗಿದೆ. ಸದ್ಯಕ್ಕೆ ಕರಾವಳಿಯೂ ಸೇರಿದಂತೆ ರಾಜ್ಯಾದ್ಯಂತ ಗೋವನ್ನು ಸಾಕುವವರು ‘ಗೋಮಾರಾಟ ನಿಯಂತ್ರಣ’ ದಿಂದ ಅತಂತ್ರದಲ್ಲಿರುವಾಗ, ರೈತರು ತಮ್ಮ ಹಟ್ಟಿಯಲ್ಲಿರುವ ಹಸುಗಳನ್ನು ಮಾರಲೂ ಆಗದೆ, ಸಾಕಲೂ ಆಗದೆ ಒದ್ದಾಡುತ್ತಿರುವಾಗ ‘ಕಂಬಳ’ಕ್ಕೆ ಅನುಮತಿ ನೀಡುವುದು ರೈತರ ಬದುಕಿನ ಅಣಕವೇ ಸರಿ.

ಹಟ್ಟಿಯಲ್ಲಿರುವ ಜಾನುವಾರುಗಳನ್ನು ಹೊರಗಟ್ಟಿ, ರೈತರು ಎಸಿ ರೂಮಿನಲ್ಲಿ ಕೋಣಗಳನ್ನು ಸಾಕಿ, ವರ್ಷಕ್ಕೊಮ್ಮೆ ಅದಕ್ಕೆ ಚೆನ್ನಾಗಿ ಥಳಿಸಿ ಓಡಿಸಿ ಶೋಕಿ ಮಾಡಿ ಎನ್ನುತ್ತಿದೆ ಸರಕಾರ. ಕಂಬಳದ ಹೆಸರಿನಲ್ಲಿ ಜನಸಾಮಾನ್ಯರನ್ನು ಭಾವನಾತ್ಮಕವಾಗಿ ವಂಚಿಸಿ, ಮೂಲಭೂತ ಸಮಸ್ಯೆಗಳ ವಿರುದ್ಧ ಧ್ವನಿಯೆತ್ತದಂತೆ ಬಾಯಿ ಮುಚ್ಚಿಸುವ ಕೆಲಸದಲ್ಲಿ ಸರಕಾರ ತೊಡಗಿದೆ. ಇಷ್ಟಕ್ಕೂ ತಮಿಳುನಾಡಿನ ಜಲ್ಲಿಕಟ್ಟು ಮತ್ತು ಕರಾವಳಿಯ ಕಂಬಳವನ್ನು ಒಂದೇ ತಕ್ಕಡಿಯಲ್ಲಿಟ್ಟು ವ್ಯಾಖ್ಯಾನಿಸುವುದೇ ಸರಿಯಲ್ಲ. ಜಲ್ಲಿಕಟ್ಟು ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಿ ಆಡುವ ಆಟ. ಮುಖ್ಯವಾಗಿ ತೀರಾ ತಳಸ್ತರದ ಯುವಕರು ಕ್ರೀಡೆಯಲ್ಲಿ ಭಾಗವಹಿಸುತ್ತಾರೆ.

ಕರಾವಳಿಯ ಕಂಬಳದ ರಚನೆಯೇ ಬೇರೆ ಸ್ವರೂಪದ್ದು. ಕಂಬಳ ಬರೇ ಒಂದು ಕ್ರೀಡೆಯಲ್ಲ. ಕಂಬಳದ ಹಿಂದಿರುವವರು ರೈತರೂ ಅಲ್ಲ, ತಳಸ್ತರದ ಜನರೂ ಅಲ್ಲ. ಕಂಬಳ ಕರಾವಳಿಯ ಜಮೀನ್ದಾರರ, ಉಳ್ಳವರ ಕ್ರೀಡೆ. ಊಳಿಗಮಾನ್ಯ ಪದ್ಧತಿಯ ಪ್ರತಿನಿಧಿಯಾಗಿದೆ ಈ ಕ್ರೀಡೆ. ಕೋಣಗಳನ್ನು ಸಾಕುವವರು ಜಮೀನ್ದಾರರು. ಇವರು ರೈತರಲ್ಲ. ಕೋಣಗಳನ್ನು ಸಾಕುವವರು, ಓಡಿಸುವವರು ಇವರಿಗಿಂತ ಕೆಳ ಜಾತಿಯವರು. ಎಲ್ಲಕ್ಕಿಂತ ಮುಖ್ಯವಾಗಿ ಕಂಬಳ ಸಂಸ್ಕೃತಿಯನ್ನು ನಾವು ಎತ್ತಿ ಹಿಡಿಯುವುದೆಂದರೆ ಪರೋಕ್ಷವಾಗಿ ಅಜಲು ಪದ್ಧತಿಯನ್ನೂ ಸಂಸ್ಕೃತಿಯೆಂದು ಒಪ್ಪಿಕೊಂಡಂತೆ. ಯಾಕೆಂದರೆ ಕಂಬಳ ಆಚರಣೆಯ ಸಂದರ್ಭದಲ್ಲಿ ಪರೋಕ್ಷ ರೀತಿಯಲ್ಲಿ ಅಜಲು ಪದ್ಧತಿಯನ್ನು ಅನುಸರಿಸಲಾಗುತ್ತದೆ. ತೀರಾ ತಳಸ್ತರದ ಕೊರಗ ಜಾತಿಯವರು ಈ ಆಚರಣೆಯಲ್ಲಿ ಕೆಟ್ಟದಾಗಿ ಬಳಸಲ್ಪಡುತ್ತಾರೆ.

ಕಂಬಳ ಕರೆಯಲ್ಲಿ ರಾತ್ರಿಯಿಡೀ ದುಡಿ ಬಾರಿಸುತ್ತಾ ಇರುವುದು, ಕೋಣ ಓಡಿಸುವ ಮೊದಲು ಅದರಲ್ಲಿ ಕೆಳ ಜಾತಿಯವರನ್ನು ಓಡಿಸುವುದು ಇತ್ಯಾದಿಗಳೆಲ್ಲ ಕಂಬಳದ ಜೊತೆಗೆ ತಳಕು ಹಾಕಿಕೊಂಡಿವೆೆ. ಕಂಬಳ ಕರಾವಳಿಯ ಸಂಸ್ಕೃತಿ ಆಗಿದ್ದಿದ್ದರೆ, ಅಜಲು ಪದ್ಧತಿಯನ್ನು ನಾವು ಸಂಸ್ಕೃತಿಯೆಂದು ಒಪ್ಪಬೇಕೇ ಎಂಬ ಪ್ರಶ್ನೆ ಎದುರಾಗುತ್ತದೆ. ಹಿಂದೆ ಕರಾವಳಿಯಲ್ಲಿ ಕೃಷಿ ವ್ಯಾಪಕವಾಗಿತ್ತು.

ಉಳುವುದಕ್ಕೆ ಕೋಣಗಳನ್ನು ಬಳಸಿಕೊಳ್ಳಲಾಗುತ್ತಿತ್ತು. ಇಂದು ಕೃಷಿಗೆ, ಹೈನುಗಾರಿಕೆಗೆ ಕರಾವಳಿಯಲ್ಲಿ ಕೋಣ, ಎಮ್ಮೆಗಳನ್ನು ಬಳಸುವ ಸಂಸ್ಕೃತಿಯೇ ಇಲ್ಲವಾಗಿದೆ. ಕೋಣಗಳನ್ನು ಕಂಬಳಕ್ಕಾಗಿಯೇ ಸಾಕುವ ಪ್ರವೃತ್ತಿ ಕರಾವಳಿಯಲ್ಲಿದೆ. ಇಂದು ಕಂಬಳ ಯಾವ ರೀತಿಯಲ್ಲೂ ಕೃಷಿಯನ್ನು ಪ್ರತಿನಿಧಿಸುವುದಿಲ್ಲ. ದೊಡ್ಡವರ ಪ್ರತಿಷ್ಠೆಯ ಪ್ರತಿನಿಧಿಯಾಗಿಯಷ್ಟೇ ಕಂಬಳ ಉಳಿದಿದೆ. ಕೆಳಜಾತಿಯನ್ನು ಪ್ರತಿಷ್ಠೆಗಾಗಿ ದುಡಿಸುವ, ಶೋಷಿಸುವ ಕೆಲಸ ಕರಾವಳಿಯಲ್ಲಿ ನಡೆಯುತ್ತಿದೆ. ಕಂಬಳಕ್ಕೆ ಅನುಮತಿ ಸಿಕ್ಕಿರುವುದರಿಂದ ಕರಾವಳಿಯ ರೈತರ ಬದುಕಿನಲ್ಲಿ ಯಾವ ಬದಲಾವಣೆಗಳೂ ಆಗುವುದಿಲ್ಲ.

  ಕಂಬಳಕ್ಕೆ ಅನುಮತಿ ನೀಡಿರುವುದು ಕೆಲವು ಕಾರಣಗಳಿಗೆ ಪ್ರಶ್ನಾರ್ಹವಾಗಿದೆ. ಒಂದೆಡೆ, ಉಳ್ಳವರ ಪ್ರತಿಷ್ಠೆಗಾಗಿ ಕೋಣಗಳನ್ನು ತಮಗೆ ಬೇಕಾದಂತೆ ಬಳಸಬಹುದು. ಆದರೆ ಇದೇ ಸಂದರ್ಭದಲ್ಲಿ ಹೊಟ್ಟೆ ಪಾಡಿಗಾಗಿ ದನ ಸಾಕಿ, ಹಾಲು ಮಾರಿ ಜೀವಿಸುತ್ತಿರುವ ರೈತರಿಗೆ ಮಾತ್ರ ಸಾವಿರ ಕಾನೂನುಗಳನ್ನು ವಿಧಿಸಲಾಗುತ್ತಿದೆ. ಸಾಕುವ ಜಾನುವಾರುಗಳಿಗೆ ಯಾವ ಕಾರಣಕ್ಕೂ ಹಿಂಸೆ ಕೊಡಬಾರದು ಎಂದು ಕಾನೂನು ರೂಪಿಸಿರುವ ಸರಕಾರಕ್ಕೆ ಕಂಬಳದಲ್ಲಿ ನಡೆಯುತ್ತಿರುವುದು ಏನು ಎನ್ನುವುದರ ಅರಿವಿಲ್ಲವೇ? ಕಂಬಳ ಓಡಿಸುವ ಸಂದರ್ಭದಲ್ಲಿ ಕೋಣಗಳನ್ನು ಭೀಕರವಾಗಿ ಬಳಸಿಕೊಳ್ಳುತ್ತಾರೆ.

ವೇಗವಾಗಿ ಓಡುವುದಕ್ಕಾಗಿ ಅದರ ಬಾಲವನ್ನು ಹಿಂಡುತ್ತಾ, ಯದ್ವಾತದ್ವಾ ಅದಕ್ಕೆ ಥಳಿಸಲಾಗುತ್ತದೆ. ಇದು ಹಿಂಸೆಯಲ್ಲವೆ? ಈ ಕ್ರೀಡೆಯಿಂದ ಜನಸಾಮಾನ್ಯರ ಹೊಟ್ಟೆ ತುಂಬುವುದಿಲ್ಲ. ಸದ್ಯದಲ್ಲಿ ಕಂಬಳ ಎನ್ನುವುದು ಕೆಲವು ನಿರ್ದಿಷ್ಟ ಜಮೀನ್ದಾರರ ಶೋಕಿಯಾಗಿ ಅಷ್ಟೇ ಆಚರಣೆಯಲ್ಲಿದೆ. ತಮ್ಮ ಶೋಕಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೋಣವನ್ನು ಸಾಕುತ್ತಾರೆ ಮತ್ತು ಕೃಷಿ ನಡೆಯುವ ಗದ್ದೆಗಳಲ್ಲಿ ಇಂದು ಕಂಬಳಗಳು ನಡೆಯುವುದಿಲ್ಲ. ಕಂಬಳಕ್ಕಾಗಿಯೇ ಪ್ರತ್ಯೇಕ ಕರೆಗಳನ್ನು ಖಾಸಗಿ ಭೂಮಿಯಲ್ಲಿ ನಿರ್ಮಿಸಲಾಗುತ್ತದೆ. ಕಂಬಳ ಇಂದು ಸಂಪೂರ್ಣ ವಾಣಿಜ್ಯೀಕರಣಗೊಂಡಿರುವಾಗ, ಇದನ್ನ್ನು ಕರಾವಳಿಯ ಜನರ ಬದುಕಿನ ಪ್ರಶ್ನೆಯಾಗಿ ಬಿಂಬಿಸುವುದು ಅಪ್ಪಟ ರಾಜಕೀಯದ ಭಾಗವಾಗಿದೆ.

ಕರಾವಳಿ ಮತ್ತು ರಾಜ್ಯದ ನಿಜವಾದ ಸಮಸ್ಯೆಗಳನ್ನು ಮರೆ ಮಾಚುವ ಉದ್ದೇಶ ಇದರ ಹಿಂದಿದೆ. ಉಳ್ಳವರು ಶೋಕಿಗಾಗಿ ಮಾಡುವ ಕಂಬಳಕ್ಕೆ ಅನುಮತಿ ನೀಡುವುದಾಗಿದ್ದರೆ, ತಮ್ಮ ಜೀವನೋಪಾಯಕ್ಕಾಗಿ ರೈತರು ಸಾಕುತ್ತಿರುವ ಗೋವುಗಳ ಮಾರಾಟದ ನಿಯಂತ್ರಣವನ್ನು ತಕ್ಷಣ ಹಿಂದೆಗೆಯಬೇಕು. ಕರಾವಳಿಯ ಗ್ರಾಮೀಣ ಪ್ರದೇಶದಲ್ಲಿ ಬಹುಸಂಖ್ಯೆಯ ರೈತರು ಗೋವುಗಳನ್ನು ಸಾಕುತ್ತಾ ಹೈನೋದ್ಯಮ ನಡೆಸುತ್ತಿದ್ದಾರೆ. ಹಾಲು ಮಾರಿ ಬದುಕು ಸವೆಸುತ್ತಿದ್ದಾರೆ. ಆದರೆ ಗೋ ಮಾರಾಟ ನಿಯಂತ್ರಣ ಕಾಯ್ದೆ ಬಂದ ಬಳಿಕ, ರೈತರು ತಮ್ಮ ಹಟ್ಟಿಯಲ್ಲಿರುವ ಎತ್ತು, ಹಸುಗಳನ್ನು ಹೊರಗೆ ಒಯ್ಯುವುದಕ್ಕೂ ಹೆದರುವಂತಹ ಸನ್ನಿವೇಶ ನಿರ್ಮಾಣವಾಗಿದೆ.

ಸಾಧಾರಣವಾಗಿ ಹಟ್ಟಿಯಲ್ಲಿ ಹಾಲು ಕೊಡದ ಜಾನುವಾರುಗಳನ್ನು ರೈತರು ಮಾರಾಟ ಮಾಡುತ್ತಾರೆ. ರೈತರು ಜಾನುವಾರುಗಳನ್ನು ಸಾಕುವುದು ಪೂಜಿಸುವುದಕ್ಕಾಗಿಯಲ್ಲ. ಜೀವನ ಸಾಗಿಸುವುದಕ್ಕಾಗಿ. ಅವರ ಪಾಲಿಗೆ ಅದೊಂದು ಉದ್ಯಮ. ಹಾಲು ಕೊಡದ ಜಾನುವಾರುಗಳನ್ನ್ನು ಹಟ್ಟಿಯಲ್ಲಿಟ್ಟುಕೊಂಡರೆ ಅದಕ್ಕೆ ಹುಲ್ಲು ಆಹಾರಕ್ಕಾಗಿ ವೆಚ್ಚ ಮಾಡಬೇಕಾಗುತ್ತದೆ. ಇದು ನಷ್ಟದಾಯಕ. ಆದುದರಿಂದ ಅಂತಹ ಜಾನುವಾರುಗಳನ್ನು ಮಾರಾಟ ಮಾಡಿ, ತಮ್ಮ ದೈನಂದಿನ ಬದುಕಿಗೆ ಬೇಕಾಗಿರುವ ವಸ್ತುಗಳನ್ನು ಖರೀದಿಸುತ್ತಾರೆ.

ಉಳಿದ ಹಸುಗಳಿಗೆ ಬೇಕಾಗುವ ಹುಲ್ಲು ಇನ್ನಿತರ ಆಹಾರಗಳನ್ನು ಒದಗಿಸುತ್ತಾರೆ. ಸರಕಾರದ ಮಾರಾಟ ನಿಯಂತ್ರಣದಿಂದಾಗಿ ಇಂತಹ ನಿರುಪಯುಕ್ತ ಜಾನುವಾರುಗಳನ್ನು ಮಾರಾಟ ಮಾಡಲಾಗದೆ ಅವರ ಉದ್ಯಮ ನಷ್ಟಕ್ಕೀಡಾಗಿದೆ. ಇರುವ ಹಸುಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ, ಇಟ್ಟುಕೊಳ್ಳಲೂ ಆಗದೆ ಅವರು ಆತಂಕದಲ್ಲಿ ಜೀವನ ಕಳೆಯುತ್ತಿದ್ದಾರೆ. ಇಂತಹ ರೈತರಿಗೆ ಕಂಬಳ ಇದ್ದರೂ, ಇಲ್ಲದಿದ್ದರೂ ಅದರಿಂದ ವ್ಯತ್ಯಾಸವೇನೂ ಆಗುವುದಿಲ್ಲ. ಆದುದರಿಂದ ಕಂಬಳಕ್ಕಾಗಿ ರಾಜ್ಯ ಸರಕಾರ ಎಷ್ಟು ಆಸಕ್ತಿ ವಹಿಸಿದೆಯೋ, ಈ ನಾಡಿನ ಹೈನೋದ್ಯಮದ ಬೆನ್ನೆಲುಬಾಗಿರುವ ಗ್ರಾಮೀಣ ಪ್ರದೇಶದ ರೈತರ ಕುರಿತಂತೆಯೂ ಆಸಕ್ತಿ ವಹಿಸಬೇಕು. ಜಾನುವಾರು ಮಾರಾಟ ನಿಯಂತ್ರಣ ಕಾಯ್ದೆಯನ್ನು ಹಿಂಪಡೆಯಲು ರಾಜ್ಯ ಸರಕಾರ ಸರ್ವ ರೀತಿಯ ಒತ್ತಡವನ್ನು ಕೇಂದ್ರದ ಮೇಲೆ ಹೇರಬೇಕು. ಕಂಬಳದ ಕೋಣಗಳಿಂದ ಹಾಲುಕರೆಯುವುದಕ್ಕಾಗುವುದಿಲ್ಲ ಎನ್ನುವ ಸತ್ಯವನ್ನು ನಾಡಿನ ಜನತೆ ಒಂದಾಗಿ ರಾಷ್ಟ್ರಪತಿಗೆ ಮನವರಿಕೆ ಮಾಡಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News