ಹಿರೇಮಗಳೂರು ಪ್ರೌಢ ಶಾಲೆಯಲ್ಲಿ ಸೈಕಲ್ ವಿತರಣೆ

Update: 2017-07-07 11:51 GMT

ಚಿಕ್ಕಮಗಳೂರು, ಜು.7: ನಿರಂತರ ಓದು, ಕಠಿಣ ಪರಿಶ್ರಮ ಸಾಧನೆಗೆ ಸಹಕಾರಿಯಾಗುತ್ತದೆ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಅಭಿಪ್ರಾಯಪಟ್ಟರು.

  ಅವರು ಶುಕ್ರವಾರ ನಗರದ ಹೊರವಲಯದ ಹಿರೇಮಗಳೂರಿನ ಪ್ರಭುಲಿಂಗಸ್ವಾಮಿ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಸೈಕಲ್ ವಿತರಣೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪ್ರವಚನ ನೀಡಿ, ಸಮಯವನ್ನು ವ್ಯರ್ಥ ಮಾಡದೆ ನಿರ್ಧಿಷ್ಟ ಗುರಿಯೊಂದಿಗೆ ನಿರಂತರ ಓದುವಿನಿಂದ ನಿಮ್ಮ ಭವಿಷ್ಯ ಬದಲಾಯಿಸಿಕೊಳ್ಳಬಹುದು. ಉಜ್ವಲ ಭವಿಷ್ಯಕ್ಕಾಗಿ ಶ್ರಮಪಡಬೇಕಾಗುತ್ತದೆ ಎಂದರು.

  ಏನೂ ಸೌಲಭ್ಯಗಳು ಇಲ್ಲದ ಅನೇಕರು ಕೇವಲ ಕಠಿಣ ಪರಿಶ್ರಮದಿಂದಲೇ ದೊಡ್ಡ ಸಾಧನೆಗಳನ್ನು ಮಾಡಿದ್ದಾರೆ ಎಂದು ಅನೇಕ ಸಾಧಕರನ್ನು ಉದಾಹರಿಸಿದ ಅವರು, ಸೈಕಲ್‍ಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವ ನಿಟ್ಟಿನಲ್ಲಿ ಮಕ್ಕಳು ಗಮನಕೊಡಬೇಕು ಎಂದು ಹೇಳಿದರು.

  ಸೈಕಲ್ ವಿತರಿಸಿದ ನಗರಸಭೆ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ, ಮಕ್ಕಳ ಓದುವಿಗೆ ಯಾವುದೇ ರೀತಿಯಲ್ಲೂ ಸಮಸ್ಯೆ, ತೊಂದರೆಗಳು ಎದುರಾಗಬಾರದು ಎಂಬ ಕಾರಣದಿಂದ ಸರ್ಕಾರ ಪಠ್ಯ ಪುಸ್ತಕಗಳ ವಿತರಣೆ, ಶೂ ವಿತರಣೆ, ಸಮವಸ್ತ್ರ ವಿತರಣೆ, ಬಿಸಿಯೂಟ ಸೇರಿದಂತೆ ಅನೇಕ ಉಪಯುಕ್ತ ಯೋಜನೆಗಳನ್ನು ಅನುಷ್ಟಾನಕ್ಕೆ ತಂದಿದೆ. ಆ ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಚನ್ನಾಗಿ ಓದಿ ಹೆತ್ತವರಿಗೆ, ಊರಿಗೆ, ಶಾಲೆಗೆ, ಗುರುಗಳಿಗೆ ಓಳ್ಳೆಯ ಹೆಸರು ತರಬೇಕು ಎಂದು ಸಲಹೆ ಮಾಡಿದರು.

  ಮುಖ್ಯೋಪಾಧ್ಯಾಯ ರಾಜಕುಮಾರ್, ಸಾಮಾಜಿಕ ಕಾರ್ಯಕರ್ತ ಸೀತಾರಾಮಶಾಸ್ತ್ರಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗೌರವ ಕೋಶಾಧ್ಯಕ್ಷ ಎಚ್.ಎಸ್.ಜಗದೀಶ್ ಮಾತನಾಡಿದರು. ಶಿಕ್ಷಕರಾದ ನಾಗರಾಜ್, ಶಿಲ್ಪ ಹಾಜರಿದ್ದರು. ಶಿಕ್ಷಕ ಸಿದ್ಧಲಿಂಗಪ್ಪ ಸ್ವಾಗತಿಸಿ, ಶಿಕ್ಷಕ ಮಹಾದೇವಪ್ಪ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News