ಬಹುಮುಖ ಪ್ರತಿಭೆಯ ಸಾಧಕ ಪ್ರೊ.ಎನ್ನೆಸ್ಸೆಲ್

Update: 2017-07-08 18:45 GMT

ವರ್ಷ ಕೊಡಮಾಡುವ 2016ರ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಗೆ ಭಾಜನರಾಗಿರುವ ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಹೊಸಗನ್ನಡದ ಮಹತ್ವಪೂರ್ಣ ಕವಿಗಳು ಹಾಗೂ ವಿದ್ವಾಂಸರು. ನವ್ಯ ಕಾವ್ಯ ಪ್ರವರ್ಧಮಾನ ಸ್ಥಿತಿಯಲ್ಲಿದ್ದಾಗ ಕಾವ್ಯ ರಚನೆ ಆರಂಭಿಸಿದ ಲಕ್ಷ್ಮೀನಾರಾಯಣ ಭಟ್ಟರ ಸೃಜನಶೀಲ ಪ್ರತಿಭೆ ಪರಂಪರೆಯ ತಾಯಿ ಬೇರಿನ ಸತ್ವ ಹೀರಿಕೊಂಡೇ ಬೆಳೆದು ಹೊಸದಿಗಂತಗಳಿಗೆ ಕೈಚಾಚಿದ ಪರಿಯದು. ನವೋದಯದ ಪ್ರಭಾವವನ್ನು ಅರಗಿಸಿಕೊಂಡು ನವ್ಯಮಾರ್ಗದಲ್ಲಿ ಪ್ರಯೋಗಶೀಲರಾದ ಭಟ್ಟರ ಸಾಹಿತ್ಯ ಕೃಷಿ ವೈವಿಧ್ಯಮಯವಾದದ್ದು. ಲಕ್ಷ್ಮೀನಾಭರ ಬಾಳಬಟ್ಟೆಯಂತೆ ಸಾಹಿತ್ಯ ಮಾರ್ಗವೂ ಏಕತಾನತೆಯಿಂದ ಪಾರಾಗಿ ತನ್ನದೇ ಅಸ್ಮಿತೆಯನ್ನು ಸಾಧಿಸುವ ಹೋರಾಟದ ಮಾರ್ಗವೇ ಆಗಿದೆ.

ಎನ್ನೆಸ್ಸೆಲ್ ಎಂದೇ ಶಿಷ್ಯವರ್ಗದಲ್ಲಿ, ಸ್ನೇಹವಲಯದಲ್ಲಿ ಚಿರಪರಿಚಿತರಾಗಿ ರುವ ಲಕ್ಷ್ಮೀನಾರಾಯಣ ಭಟ್ಟರು ಮಲೆನಾಡಿನ ಸಂಸ್ಕಾರವಂತರು. ಹುಟ್ಟಿದ್ದು 1936ರ ಅಕ್ಟೋಬರ್ 29ರಂದು, ಶಿವಮೊಗ್ಗೆಯಲ್ಲಿ. ತಂದೆ ಶಿವರಾಮಭಟ್ಟರು, ತಾಯಿ ಮೂಕಾಂಬಿಕಮ್ಮನವರು. ಬಡಕುಟುಂಬ ವಾದರೂ ವಿದ್ಯೆಯಲ್ಲಿ ಶ್ರೀಮಂತರು. ತಂದೆ ವೇದವಿದ್ಯಾಪಾರಂಗತರೆಂದು ಖ್ಯಾತರಾದವರು. ಎನ್ನೆಸ್ಸೆಲ್ ಒಂದೂವರೆ ವರ್ಷದ ಹಸುಳೆಯಾಗಿದ್ದಾಗಲೇ ತಂದೆಯ ಪ್ರೀತಿಯಿಂದ ವಂಚಿತರಾದರು. ತಂದೆಯ ಅಕಾಲಿಕ ನಿಧನದಿಂದಾಗಿ ಸಂಸಾರದ ಹೊಣೆಯೆಲ್ಲ ತಾಯಿಯದೇ. ನಾಲ್ಕು ಜನ ಅಕ್ಕಂದಿರ ಮಧ್ಯೆ ತಾಯಿಯ ಅಕ್ಕರೆಯ ಮಡಿಲಲ್ಲಿ ಬೆಳೆದ ಎನ್ನೆಸ್ಸೆಲ್ ಶಿಕ್ಷಣ ಪ್ರಾಥಮಿಕದಿಂದ ಇಂಟರಮೀಡಿಯಟ್‌ವರೆಗೆ ಶಿವಮೊಗ್ಗೆಯಲ್ಲೇ ನಡೆಯಿತು. ಹೆಣ್ಣುಮಕ್ಕಳ ಮದುವೆ, ಮಗನ ವಿದ್ಯಾಭ್ಯಾಸ ಎಲ್ಲವೂ ತಾಯಿಯ ದುಡಿಮೆಯಿಂದಲೇ ನಡೆಯಬೇಕಾದ ಕಡುಬಡತನದ ದಿನಗಳು. ಉನ್ನತ ವ್ಯಾಸಂಗಕ್ಕೆ ಬಡತನವೇ ದೊಡ್ಡ ಅಡಚಣೆಯಾಗಿದ್ದ ಆ ದಿನಗಳಲ್ಲಿ ಎನ್ನೆಸ್ಸೆಲ್ ಓದಲೇಬೇಕೆಂಬ ದೃಢ ಸಂಕಲ್ಪದಿಂದ ಒಂದು ರಾತ್ರಿ ಮೈಸೂರು ರೈಲು ಹತ್ತಿದರು. ಖಾಲಿ ಜೇಬಿನಲ್ಲಿ ಮೈಸೂರು ರೈಲು ನಿಲ್ದಾಣದಲ್ಲಿಳಿದು ಹೊಸಪರಿಸರದಲ್ಲಿ ದಾರಿಕಾಣದಂತಾದಾಗ ‘‘ಬಂದೆಯಾ ಮಗು ಬಾ’’ ಎಂದು ಪಿತೃವಾತ್ಸಲ್ಯದಿಂದ ತೋಳ್ತೆರೆದು ಸ್ವಾಗತಿಸಿದವರು ತ.ಸು.ಶ್ಯಾಮರಾಯರು. ಮಹಾರಾಜ ಕಾಲೇಜಿನಲ್ಲ್ಲಿ ಕನ್ನಡ ಅಧ್ಯಾಪಕರಾಗಿದ್ದ ಶ್ಯಾಮರಾಯರು ತರುಣ ಲಕ್ಷ್ಮೀನಾರಾಯಣ ಭಟ್ಟರ ವಿದ್ಯಾರ್ಜನೆಯ ಹಂಬಲಕ್ಕೆ ಆಸರೆಯಾಗಿ ನಿಂತರು. ವಾರಾನ್ನಮಾಡಿಕೊಂಡು ವ್ಯಾಸಂಗ ಮುಂದುವರಿಸಿದ ಎನ್ನೆಸ್ಸೆಲ್, ತೀನಂಶ್ರಿ, ಡಿ.ಎಲ್.ಎನ್., ತ.ಸು.ಶಾಮರಾವ್, ಪರಮೇಶ್ವರ ಭಟ್ಟರಂತಹ ಘನ ವಿದ್ವಾಂಸರ ಅಚ್ಚುಮೆಚ್ಚಿನ ಶಿಷ್ಯರಾಗಿ ಕನ್ನಡ ಸಾಹಿತ್ಯದಲ್ಲಿ ಆನರ್ಸ್, ಎಂ.ಎ. ಪರೀಕ್ಷೆಗಳನ್ನು ಉತ್ತಮ ಶ್ರೇಣಿಯಲ್ಲ್ಲಿ ಪಾಸುಮಾಡಿದರು. ಸ್ವಲ್ಪ ಕಾಲ ತೀನಂಶ್ರೀಯವರ ಮಾರ್ಗದರ್ಶನದಲ್ಲಿ ಸಂಶೋಧನಾರ್ಥಿಯಾಗಿ ಕೆಲಸ ಮಾಡಿದ ಎನ್ನೆಸ್ಸೆಲ್ ನಂತರ ಆಧ್ಯಾಪನ ವೃತ್ತಿ ಕೈಗೊಂಡರು. ಬೆಂಗಳೂರಿನ ಆಚಾರ್ಯ ಪಾಠಶಾಲೆ ಕಾಲೇಜಿನಲ್ಲಿ ಕನ್ನಡ ಮೇಷ್ಟ್ರಾಗಿ ಅಧ್ಯಾಪನ ವೃತ್ತಿ ಆರಂಭಿಸಿದ ಭಟ್ಟರನ್ನು ಬೆಂಗಳೂರು ವಿಶ್ವವಿದ್ಯಾನಿಲಯ ಕನ್ನಡ ಅಧ್ಯಯನ ಕೇಂದ್ರ ಕೈಬೀಸಿ ಕರೆಯಿತು. ಕನ್ನಡ ಅಧ್ಯಾಪಕರಾಗಿ ಸೇವೆ ಆರಂಭಿಸಿದ ಎನ್ನೆಸ್ಸೆಲ್ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ, ಕಲಾ ವಿಭಾಗದ ಡೀನ್ ಆಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದರು. ಕನ್ನಡ ಆಧ್ಯಯನ ಕೇಂದ್ರದ ಅಧ್ಯಾಪನದ ದಿನಗಳು ಭಟ್ಟರಿಗೆ ಹೂವಿನ ಹಾದಿಯ ದಿನಗಳೇನೂ ಆಗಿರಲಿಲ್ಲ. ಹಲವು ರೀತಿಯ ಸ್ಪರ್ಧೆ, ಪೈಪೋಟಿ ಇತ್ಯಾದಿ ಕಷ್ಟಕೋಟಲೆಗಳ ಮಧ್ಯೆ ಹೋರಾಡುತ್ತಲೇ ಋಜುಮಾರ್ಗದಿಂದ ಈ ಎಲ್ಲ ಪರಿಸ್ಥಿತಿಗಳನ್ನು ನಿಭಾಯಿಸಿಕೊಂಡು ಮುಂದೆ ಬಂದವರು ಎನ್ನೆಸ್ಸೆಲ್.

  ಕನ್ನಡ ಸಾಹಿತ್ಯಕ್ಕೆ ಲಕ್ಷ್ಮೀನಾರಾಯಣ ಭಟ್ಟರ ಕೊಡುಗೆ ಬಹುಮುಖಿಯಾದದ್ದು. ಕಾವ್ಯ, ನಾಟಕ, ವಿಮರ್ಶೆ, ಗ್ರಂಥ ಸಂಪಾದನೆ, ಶಿಶು ಸಾಹಿತ್ಯ, ಭಾಷಾ ವಿಜ್ಞಾನ, ಅನುವಾದ ಮೊದಲಾದ ಪ್ರಕಾರಗಳಲ್ಲಿ ಭಟ್ಟರ ಕೊಡುಗೆಯನ್ನು ಈಗಾಗಲೇ ಕನ್ನಡ ವಿಮರ್ಶೆ ಗಮನಿಸಿದೆ. ಕನ್ನಡ ಸಾಹಿತ್ಯ ಚರಿತ್ರೆ ಅವರ ಇತ್ತೀಚಿನ ಕೊಡುಗೆ. ಸೃಜನಶೀಲತೆ ಮತ್ತು ವಿದ್ವತ್ತಿನ ಒಂದು ವಿಶಿಷ್ಟ ಹದವನ್ನು ನಾವು ಭಟ್ಟರ ರಚನೆಗಳಲ್ಲಿ ಕಾಣಬಹುದಾಗಿದೆ.

 ಕಾವ್ಯ ಲಕ್ಷ್ಮೀನಾರಾಯಣ ಭಟ್ಟರ ಸೃಜನಶೀಲ ಪ್ರತಿಭೆಯ ಹೆಗ್ಗಳಿಕೆ. ಸೃಜನಶೀಲತೆಯ ಜೊತೆಗೆ ಕವನ ಕಟ್ಟುವ ಕೌಶಲ ಮತ್ತು ಕಾವ್ಯ ಭಾಷೆಯಲ್ಲಿ ಸಿದ್ಧಿ ಪಡೆದವರು. ಆನರ್ಸ್ ವಿದ್ಯಾರ್ಥಿಯಾಗಿದ್ದಾಗಲೇ ಕವಿತೆ ಬರೆಯುವ ಗೀಳು ದಾಂಗುಡಿ ಇಡಲಾರಂಭಿಸಿತು. 1968ರಲ್ಲಿ ಪ್ರಕಟವಾದ ‘ವೃತ್ತ’ ಭಟ್ಟರ ಮೊದಲ ಕವನ ಸಂಕಲನ. ಎಂಟಕ್ಕೂ ಹೆಚ್ಚು ಕವನ ಸಂಕಲನಗಳನ್ನು ಪ್ರಕಟಿಸಿರುವ ಭಟ್ಟರ ಕಾವ್ಯದಲ್ಲಿ ಎರಡು ಪ್ರಮುಖ ಧಾರೆಗಳನ್ನು ನಾವು ಗಮನಿಸಬಹುದು. ಒಂದು, ನವ್ಯ ಕಾವ್ಯ ಮಾರ್ಗದ ಆಧುನಿಕ ಸಂವೇದನೆಯ ಹೊಸ ಕಾವ್ಯವಾದರೆ, ಇನ್ನೊಂದು ನವೋದಯ ಕಾವ್ಯಕ್ಕೆ ಹೆಚ್ಚು ಋಣಿಯಾದ ಭಾವಗೀತೆಗಳ ಸಮೃದ್ಧ ಫಸಲು. ‘ಸುಳಿ’, ‘ನಿನ್ನೆಗೆ ನನ್ನ ಮಾತು’, ‘ಚಿತ್ರಕೂಟ’, ‘ಅರುಣ ಗೀತ’, ‘ಹೊಳೆಸಾಲಿನ ಮರ’ ಭಟ್ಟರ ವೈಚಾರಿಕತೆ, ಆಧುನಿಕ ಸಂವೇದನೆ ಮತ್ತು ಪ್ರಯೋಗಶೀಲತೆಗಳಿಗೆ ಮಾದರಿಯಾಗಿ ನಿಲ್ಲುವ ಮುಖ್ಯ ಸಂಕಲನಗಳು. ಸುಳಿ ಸಂಕಲನದ ‘ಸುದ್ದವ್ವ’ ಮತ್ತು ‘ದೀಪಿಕಾ‘, ಚಿತ್ರಕೂಟದ ‘ನೀಲಾಂಜನ’, ಹೊಳೆ ಸಾಲಿನ ಮರದ ‘ಶಿವಮೊಗ್ಗೆಯಲ್ಲಿ ಮಳೆ’ ಮತ್ತು ಅರುಣ ಗೀತದ ‘ಮಗನಿಗೊಂದು ಪತ್ರ’ ಕವನಗಳು ಭಟ್ಟರ ಸೃಜನಶೀಲ ಪ್ರತಿಭಾ ಶಕ್ತಿ-ಸಾಮರ್ಥ್ಯ ಮತ್ತು ಆಧುನಿಕ ಸಂವೇದನೆಗಳಿಗೆ ಉತ್ತಮ ನಿದರ್ಶನಗಳು.

ಭಾವ ಗೀತೆಯಲ್ಲಿ ಕುವೆಂಪು, ಪುತಿನ, ನರಸಿಂಹಸ್ವಾಮಿ, ಶಿವರುದ್ರಪ್ಪ, ಚನ್ನವೀರ ಕಣವಿ ಅವರ ಪರಂಪರೆಯನ್ನು ತಮ್ಮದೇ ಆದ ತಾಜಾತನದಿಂದ ಮುಂದುವರಿಸಿ ಅದ್ಭುತ ಯಶಸ್ಸು ಸಾಧಿಸಿದ ಕೀರ್ತಿ ಲಕ್ಷ್ಮೀನಾರಾಯಣ ಭಟ್ಟರದು. ‘ಬಾರೋ ವಸಂತ’(1979)ದಿಂದ ಶುರುವಾದ ಭಟ್ಟರ ಭಾವಗೀತ ಯಾನ ಎಂಟಕ್ಕೂ ಹೆಚ್ಚು ಸಂಕಲನಗಳವರೆಗೆ ಅರ್ಥ-ನಾದ ಮಾಧುರ್ಯಗಳ ಸಂಗಮದಲ್ಲಿ ಸಲಿಲ ಧಾರೆಯಾಗಿ ಹರಿದಿದೆ. ಅವರ ಸಮಗ್ರ ಭಾವ ಗೀತಗಳು ಸಂಕಲನದಲ್ಲಿ ಮುನ್ನೂರಕ್ಕೂ ಹೆಚ್ಚು ಗೀತೆಗಳಿವೆ. ಪ್ರೀತಿ-ಪ್ರೇಮಗಳ ಉತ್ಕಟ ಹಂಬಲ, ವಿರಹದ ನೋವು, ಮಿಲನದ ಕಾತರ, ಶೃಂಗಾರದ ಸೊಗಸು, ಪ್ರಕೃತಿಯ ಚೆಲುವು-ಇಂಥ ಭಾವ-ರಾಗ-ವಿಭಾವಗಳ ಸುಂದರ ಜಗತ್ತನ್ನು ಭಟ್ಟರು ಈ ಭಾವಗೀತಗಳಲ್ಲಿ ಸೃಷ್ಟಿಸಿದ್ದಾರೆ. ಭಟ್ಟರ ಭಾವಗೀತಗಳಲ್ಲಿ ದೇಶಭಕ್ತಿ ಗೀತೆಗಳೂ ಉಂಟು ಅನುಭಾವ ಗೀತೆಗಳೂ ಉಂಟು. ಭಾವಗೀತೆಗಳ ಮೂಲಕ ಕನ್ನಡ ಸುಗಮ ಸಂಗೀತಕ್ಕೆ ಹೊಸ ಆಯಾಮವನ್ನು ನೀಡಿದವರು ಎನ್ನೆಸ್ಸೆಲ್. ನಿಸಾರ್ ಅಹಮದ್ ಮತ್ತು ಭಟ್ಟರ ಭಾವ ಗೀತೆಗಳು ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ಕ್ಯಾಸೆಟ್ ಕಾವ್ಯಕ್ಕೆ ನಾಂದಿ ಹಾಡಿದ್ದು ಈಗ ಇತಿಹಾಸ. ಮುಂದೆ, ಮೈಸೂರು ಅನಂತಸ್ವಾಮಿ. ಅಶ್ಯತ್ಥ, ಶಿವಮೊಗ್ಗ ಸುಬ್ಬಣ್ಣ, ಗರ್ತಿಕೆರೆ ರಾಘಣ್ಣ ಇವರೆಲ್ಲರ ಸಿರಿಕಂಠದಲ್ಲಿ ಕನ್ನಡ ಕವಿಗಳ ಭಾವಗೀತೆಗಳ ಧ್ವನಿ ಸುರುಳಿಗಳು ಸುಗಮ ಸಂಗೀತದಲ್ಲಿ ಹೊಸ ದಾಖಲೆ ಬರೆದವು.

ಲಕ್ಷ್ಮೀನಾರಾಯಣ ಭಟ್ಟರ ಎಪ್ಪತ್ತೈದನೆ ಹುಟ್ಟುಹಬ್ಬದ ಸಂದರ್ಭದಲ್ಲಿ ಬೆಳಕು ಕಂಡ ‘ಕಾವ್ಯ ಪ್ರತಿಮೆ’ ಕನ್ನಡ ಕಾವ್ಯ ಮೀಮಾಂಸೆಯ ಕ್ಷೇತ್ರಕ್ಕೆ ಒಂದು ಮೌಲಿಕ ಕೊಡುಗೆಯಾಗಿದೆ. ಪ್ರತಿಮಾ ಸ್ವರೂಪದಿಂದ ಹಿಡಿದು ಪ್ರತಿಮಾ ಬಂಧದವರೆಗೆ ಕಾವ್ಯದ ಪ್ರತಿಮಾ ತತ್ವವನ್ನು ಕುರಿತು ಸಮಗ್ರವಾಗಿ ಚರ್ಚಿಸುವ, ಆಳವಾಗಿ ಚಿಂತಿಸುವ ‘ಕಾವ್ಯ ಪ್ರತಿಮೆ’ ಪಂಡಿತರಿಗೂ ಸಾಹಿತ್ಯದ ವಿದ್ಯಾರ್ಥಿಗಳಿಗೂ ಉಪಯುಕ್ತವೆನ್ನಿಸುವ ಗ್ರಂಥ. ತೀನಂಶ್ರೀಯವರ ಕಾವ್ಯ ಮೀಮಾಂಸೆಯನ್ನು ನೆನಪಿಗೆ ತರುವ ‘ಕಾವ್ಯ ಪ್ರತಿಮೆ’ ಒಂದು ಆಚಾರ್ಯ ಕೃತಿ ಎನ್ನುತ್ತಾರೆ ಯು.ಆರ್.ಅನಂತ ಮೂರ್ತಿಯವರು.

ಪ್ರಾಯೋಗಿಕ ವಿಮರ್ಶೆ ಕುರಿತಂತೆ ಕನ್ನಡದ ಮೊಟ್ಟಮೊದಲ ಸಮಗ್ರ ಕೃತಿ ಎಂಬ ಪ್ರಶಂಸೆಗೆ ಪಾತ್ರವಾಗಿರುವ ‘ಪ್ರಾಯೋಗಿಕ ವಿಮರ್ಶೆ’ ಕನ್ನಡ ಸಾಹಿತ್ಯಕ್ಕೆ ಒಂದು ಗಮನಾರ್ಹ ಸೇರ್ಪಡೆ. ಹೊರಳು ದಾರಿಯಲ್ಲಿ ಕಾವ್ಯ, ವಿವೇಚನೆ, ಸಾಹಿತ್ಯ ಸನ್ನಿಧಿ ಭಟ್ಟರ ಇತರ ವಿಮರ್ಶಾ ಕೃತಿಗಳು.

ಗ್ರಂಥ ಸಂಪಾದನೆ, ಭಾಷಾ ವಿಜ್ಞಾನಗಳಂಥ ಸೃಜನೇತರ ಕ್ಷೇತ್ರಗಳಲ್ಲೂ ಲಕ್ಷ್ಮೀನಾರಾಯಣ ಭಟ್ಟರು ಮೌಲಿಕ ಕೆಲಸ ಮಾಡಿದ್ದಾರೆ. ‘ಭಾರತೀಯ ಗ್ರಂಥ ಸಂಪಾದನಾ ಪರಿಚಯ’, ‘ಧ್ರುವ ಚರಿತ್ರೆ’,‘ಶಿಶುನಾಳ ಶರೀಫ ಸಾಹೇಬರ ಗೀತೆಗಳು,‘ಕಲ್ಲು ಸಕ್ಕರೆ ಕೊಳ್ಳಿರೋ’ ಭಟ್ಟರ ಪ್ರಮುಖ ಸಂಪಾದಿತ ಕೃತಿಗಳು. ‘ಕನ್ನಡ ಮಾತು’,‘ರೀಡಿಂಗ್ಸ್ ಇನ್ ಕನ್ನಡ’ ಭಾಷಾ ವಿಜ್ಞಾನ ಕೃತಿಗಳು.

ಅನುವಾದ ಕಾರ್ಯದಲ್ಲೂ ಲಕ್ಷ್ಮೀನಾರಾಯಣ ಭಟ್ಟರ ಸಾಧನೆ ಅನನ್ಯವಾದದ್ದು. ಷೇಕ್ಸ್‌ಪಿಯರ್ ಸಾನೆಟ್ ಚಕ್ರ, ಡಬ್ಲ್ಯು.ಬಿ.ಯೇಟ್ಸ್‌ನ ‘ಚಿನ್ನದ ಹಕ್ಕಿ’, ಎಲಿಯೆಟ್ ಕಾವ್ಯ ಸಂಪುಟ ಭಟ್ಟರ ಕಾವ್ಯ ಕುತೂಹಲ ಮತ್ತು ಭಾಷಾಂತರ ಪ್ರತಿಭೆಗಳಿಗೆ ಉತ್ತಮ ನಿದರ್ಶನಗಳಾಗಿವೆ. ಈ ಅನುವಾದಗಳಿಂದ ಕನ್ನಡ ಕಾವ್ಯ ಹೆಚ್ಚಿನ ಸಮೃದ್ಧಿಯನ್ನು ಪಡೆದಿದೆ ಎನ್ನುವ ವಿಮರ್ಶಕರ ಮಾತು ದಿಟವಾದದ್ದು. ಶೂದ್ರಕನ ‘ಮೃಚ್ಛಕಟಿಕ’, ರವೀಂದ್ರನಾಥ ಠಾಗೂರರ ‘ಇಸ್ಪೀಟ್ ರಾಜ್ಯ’ ಭಟ್ಟರ ಅನುವಾದಿತ ನಾಟಕಗಳು. ‘ಊರ್ವಶಿ’ ಭಟ್ಟರ ಮನೋಜ್ಞ ಕಾವ್ಯ ನಾಟಕ. ಪುತಿನ ಅವರ ಗೇಯ ನಾಟಕಗಳಿಗೆ ಸರಿಸಾಟಿಯಾಗಿ ನಿಲ್ಲಬಲ್ಲಂಥ ‘ಊರ್ವಶಿ’ ಇತ್ತೀಚಿನ ಯಶಸ್ವೀ ಗೀತನಾಟಕವಾಗಿದೆ ಎನ್ನುವ ಅ.ರಾ.ಮಿತ್ರರ ಮಾತು ಉತ್ಪ್ರೇಕ್ಷೆ ಏನಲ್ಲ.

ಪಂಜೆ, ಹೊಯ್ಸಳ, ಜಿ.ಪಿ.ರಾಜರತ್ನಂ ಅವರುಗಳ ಹಾದಿಯಲ್ಲಿ ಸಾಗಿರುವ ಶಿಶು ಸಾಹಿತ್ಯ ರಚನೆಯಲ್ಲಿ ಒಂದು ಮುಖ್ಯ ಹೆಸರು ಲಕ್ಷ್ಮೀನಾರಾಯಣ ಭಟ್ಟರದು.ಮಕ್ಕಳಲ್ಲಿ ಕನ್ನಡದ ಪ್ರೀತಿ, ಮಮಕಾರಗಳನ್ನು ಬೆಳೆಸುವ ಘನ ಉದ್ದೇಶದಿಂದ ಭಟ್ಟರು ಬರೆದಿರುವ ಮಕ್ಕಳ ಪದ್ಯಗಳು ನೂರಕ್ಕೂ ಹೆಚ್ಚು. ಈ ಶಿಶುಪ್ರಾಸಗಳು ಧ್ವನಿಮುದ್ರಿಕೆಗಳಾಗಿ ಕರ್ನಾಟಕದ ಒಳಗೆ ಮತ್ತು ಹೊರಗೆ ಕನ್ನಡ ಮಕ್ಕಳ ಹೃದಯಗಳನ್ನು ಗೆದ್ದಿವೆ. ‘ಭಾಳ ಒಳ್ಳೇವ್ರ ನಮ್ಮ ಮಿಸ್ಸು’, ‘ಗೇರ್ಗೇರ್ ಮಂಗಣ್ಣ’ ಮೊದಲಾದ ಪದ್ಯಗಳು ಮಕ್ಕಳ ತುಟಿಗಳ ಮೇಲೆ ಇಂದಿಗೂ ನಲಿದಾಡುತ್ತಿರುವುದು ಭಟ್ಟರ ಶಿಶುಪ್ರಾಸಗಳ ಜನಪ್ರಿಯತೆಗೆ ಸಾಕ್ಷಿ. ಪದ್ಯಗಳೇ ಅಲ್ಲದೆ ಭಟ್ಟರು ಮಕ್ಕಳಿಗಾಗಿ ‘ಮುದ್ರಾ ಮಂಜೂಷ’, ‘ಡಿವಿಜಿ’, ‘ಪೂರ್ವ ದಿಕ್ಕಿನಲ್ಲಿ ಕಾಮನಬಿಲ್ಲು’ ಇವೇ ಮೊದಲಾದ ಗದ್ಯ ಕೃತಿಗಳನ್ನೂ ರಚಿಸಿದ್ದಾರೆ.

            ಭಟ್ಟರ ಸೃಜನೇತರ ಪ್ರಕಾರದ ಬರಹಗಳಲ್ಲಿ ‘ಶಾಸ್ತ್ರ ಭಾರತಿ’, ‘ಸಾಹಿತ್ಯ ರತ್ನ’ ಮತ್ತು ‘ರಮಣ ಮಹರ್ಷಿಗಳು’ ಗಮನಿಸಲೇ ಬೇಕಾದ ಕೃತಿಗಳು. ‘ಶಾಸ್ತ್ರ ಭಾರತಿ’-ಶಾಸ್ತ್ರ ವಿಷಯಗಳಿಗೆ ಸಂಬಂಧಿಸಿದ ಕೃತಿ. ಮಹಾ ಭಾರತದ ಸ್ವರೂಪ ಮತ್ತು ಅದರ ವಿಮರ್ಶಾತ್ಮಕ ಪರಿಷ್ಕರಣೆ, ಛಂದಸ್ಸು, ಕಾವ್ಯಮೀಮಾಂಸೆ, ಭಾಷಾ ಶಾಸ್ತ್ರ ಮೊದಲಾದ ವಿದ್ವತ್ಪೂರ್ಣ ಪ್ರಬಂಧಗಳನ್ನೊಳಗೊಂಡಿರುವ ಈ ಸಂಕಲನ ಸಾಹಿತ್ಯದ ವಿದ್ಯಾರ್ಥಿಗಳಿಗೆ ಒಂದು ಉತ್ತಮ ಆಕರ ಗ್ರಂಥ. ‘ಸಾಹಿತ್ಯ ರತ್ನ’- ಡಿವಿಜಿ, ಬಿಎಂಶ್ರೀ, ಕುವೆಂಪು, ಬೇಂದ್ರೆ, ತೀನಂಶ್ರೀ ಮೊದಲಾದ ಕನ್ನಡಕ್ಕೆ ರತ್ನಪ್ರಾಯರಾದ ಸಾಹಿತಿಗಳ ವ್ಯಕ್ತಿವೈಶಿಷ್ಟ್ಯಗಳನ್ನು ಮತ್ತು ಅವರ ಸಾಹಿತ್ಯಕ ಸಾಧನೆಗಳನ್ನು ಸುಂದರವಾಗಿ ಕಡೆದಿರಿಸಿರುವ ಲೇಖನಗಳ ಸಂಗ್ರಹ. ಅರುಣಾಚಲದಲ್ಲಿ ಪ್ರಕಾಶಗೊಂಡ ಆಧ್ಯಾತ್ಮಿಕ ಜ್ಯೋತಿ ಎಂದೇ ದೇಶವಿದೇಶಗಳಲ್ಲಿ ಪ್ರಸಿದ್ಧರಾದ ರಮಣ ಮಹರ್ಷಿಗಳ ಜೀವನ, ಸಾಧನೆ, ಸಾಕ್ಷಾತ್ಕಾರ ಮತ್ತು ಉಪದೇಶಗಳನ್ನು ಮುಮುಕ್ಷುಗಳಿಗೂ ಜನಸಾಮಾನ್ಯರಿಗೂ ಅರ್ಥವಾಗುವಂತೆ ಸರಳ ಕನ್ನಡದಲ್ಲಿ ನಿರೂಪಿಸುವ ಈ ಕೃತಿ ಕನ್ನಡದ ಜೀವನಚರಿತ್ರೆ ಪ್ರಕಾರದಲ್ಲಿ ಎದ್ದುಕಾಣುವಂಥಾದ್ದು.

     ವೃತ್ತಿ-ಪ್ರವೃತ್ತಿ ಎರಡರಲ್ಲೂ ಕನ್ನಡದ ಕೆಲಸಕ್ಕೆ ತಮ್ಮನ್ನು ಮುಡುಪಾಗಿಸಿಕೊಂಡಿರುವ ಲಕ್ಷ್ಮೀನಾರಾಯಣ ಭಟ್ಟರಿಗೆ ಈಗ ಎಂಬತ್ತೊಂದರ ಪ್ರಾಯ. ದೈಹಿಕ ಶಕ್ತಿ ಉಡುಗಿರಬಹುದಾದರೂ ಅವರದು ಉಡುಗದ ಚೈತನ್ಯ. ಸಾಹಿತ್ಯಕವಾಗಿ ಸದಾ ಕ್ರಿಯಾಶೀಲರಾಗಿರುವ ಅವರಿಗೆ ಹಲವು ಗೌರವಗಳು ಈಗಾಗಲೇ ಸಂದಿವೆ. ಅರುವತ್ತಕ್ಕೆ ‘ನೀಲಾಂಜನ’, ಎಪ್ಪತ್ತೈದಕ್ಕೆ ‘ವಿಮರ್ಶೆಯ ಉಡುಗೊರೆ’ ಶಿಷ್ಯರು, ಅಭಿಮಾನಿಗಳು ಅರ್ಪಿಸಿರುವ ಅಭಿನಂದನಾ ಗ್ರಂಥಗಳು. ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಜಿಎಸ್ಸೆಸ್ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿಗಳಿಂದ ಸನ್ಮಾನಿತರಾದ ಎನ್ನೆಸ್ಸೆಲ್ ಅವರಿಗೆ ಈಗ ಶಿಶುಸಾಹಿತ್ಯಕ್ಕೆ ಕೊಡಮಾಡುವ ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಶಸ್ತಿ.ಇದು ಲಕ್ಷ್ಮೀನಾರಾಯಣ ಭಟ್ಟರ ಸಮಗ್ರ ಸಾಹಿತ್ಯಕ್ಕೆ ಸಂದಿರುವ ಗೌರವವೂ ಹೌದು ಎಂದರೆ ಅತಿಶಯವಾಗದು.

 ಸಾಹಿತ್ಯಕವಾಗಿ ಸದಾ ಕ್ರಿಯಾಶೀಲರಾಗಿರುವ ಲಕ್ಷ್ಮೀನಾರಾಯಣ ಭಟ್ಟರಿಗೆ ಹಲವು ಗೌರವಗಳು ಈಗಾಗಲೇ ಸಂದಿವೆ. ಅರುವತ್ತಕ್ಕೆ ‘ನೀಲಾಂಜನ’, ಎಪ್ಪತ್ತೈದಕ್ಕೆ ‘ವಿಮರ್ಶೆಯ ಉಡುಗೊರೆ’ ಶಿಷ್ಯರು, ಅಭಿಮಾನಿಗಳು ಅರ್ಪಿಸಿರುವ ಅಭಿನಂದನಾ ಗ್ರಂಥಗಳು. ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಜಿಎಸ್ಸೆಸ್ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿಗಳಿಂದ ಸನ್ಮಾನಿತರಾದ ಎನ್ನೆಸ್ಸೆಲ್ ಅವರಿಗೆ ಈಗ ಶಿಶುಸಾಹಿತ್ಯಕ್ಕೆ ಕೊಡಮಾಡುವ ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಶಸ್ತಿ. ಇದು ಲಕ್ಷ್ಮೀನಾರಾಯಣ ಭಟ್ಟರ ಸಮಗ್ರ ಸಾಹಿತ್ಯಕ್ಕೆ ಸಂದಿರುವ ಗೌರವವೂ ಹೌದು ಎಂದರೆ ಅತಿಶಯವಾಗದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News