ಮಾನಸಿಕ ಅಸ್ವಸ್ಥ ಮಹಿಳೆಯನ್ನು ಅತ್ಯಾಚಾರಗೈದ ಉಬರ್ ಚಾಲಕ

Update: 2017-07-10 04:09 GMT

ಹೊಸದಿಲ್ಲಿ, ಜು. 10: ಕೌಟುಂಬಿಕ ಕಲಹದಿಂದಾಗಿ ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡಿದ್ದ ಮಹಿಳೆಯೊಬ್ಬರ ಮೇಲೆ ಉಬರ್ ಆಪ್‌ನಲ್ಲಿ ನೊಂದಾಯಿಸಿಕೊಂಡಿರುವ ಕಾರಿನ ಚಾಲಕ ಅತ್ಯಾಚಾರ ಎಸಗಿದ್ದು, ಲೈಂಗಿಕ ದೌರ್ಜನ್ಯ ಪ್ರತಿಭಟಿಸಿದಾಗ ಆಕೆಯನ್ನು ಅಮಾನುಷವಾಗಿ ಥಳಿಸಿರುವ ಘಟನೆ ರವಿವಾರ ಬೆಳಕಿಗೆ ಬಂದಿದೆ.

ಕರ್ತವ್ಯದಲ್ಲಿ ಇಲ್ಲದ ವೇಳೆ ಈ ಚಾಲಕ ಕಾರ್ಕರ್‌ದೂಮ ಕೋರ್ಟ್ ಬಳಿಯಿಂದ ಗಾಜಿಯಾಬಾದ್‌ನಲ್ಲಿರುವ ತನ್ನ ಮನೆಗೆ ಕಾರಿನಲ್ಲಿ ಕರೆದೊಯ್ದು ಅತ್ಯಾಚಾರ ಎಸಗಿ, ಥಳಿಸಿ ಬಳಿಕ ಕರೆತಂದು ಅದೇ ಜಾಗದಲ್ಲಿ ಬಿಟ್ಟುಹೋಗಿದ್ದಾನೆ ಎಂದು ತಿಳಿದುಬಂದಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಘಟನೆಯಿಂದ ಆಘಾತಗೊಂಡಿರುವ 38 ವರ್ಷದ ಮಹಿಳೆಗೆ ತನಗೆ ಏನಾಗಿದೆ ಎನ್ನುವುದನ್ನು ನೆನಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪೊಲೀಸರು ವಿವರಿಸಿದ್ದಾರೆ.

ದೆಹಲಿಯ ತ್ರಿಲೋಕಪುರದಲ್ಲಿ ಈ ಮಹಿಳೆ ತನ್ನ ಮಕ್ಕಳ ಜತೆಗೆ ವಾಸವಿದ್ದಾರೆ. ಕೌಟುಂಬಿಕ ಕಲಹ ಮತ್ತು ಉದ್ಯೋಗವಿಲ್ಲದ ಕಾರಣ ಮಾನಸಿಕವಾಗಿ ಆಕೆ ಖಿನ್ನರಾಗಿದ್ದರು. ಗುರುವಾರ ಕೌಟುಂಬಿಕ ವ್ಯಾಜ್ಯವೊಂದರ ಸಂಬಂಧ ಮಹಿಳೆ ನ್ಯಾಯಾಲಯಕ್ಕೆ ಆಗಮಿಸಿದ್ದರು. ನ್ಯಾಯಾಲಯದಲ್ಲಿ ಕೆಲಸ ಮುಗಿಸಿದ ಬಳಿಕ ನಾಲ್ಕನೇ ನಂಬರ್ ಗೇಟ್ ಬಳಿ ನಿಂತಿದ್ದರು. ಆಕೆಯನ್ನು ಆರೋಪಿ ಚಾಲಕ ಮೊದಲು ಮಾತನಾಡಿಸಿದ್ದಾನೆ. ಆತನೊಂದಿಗೆ ತನ್ನ ಸಮಸ್ಯೆಯನ್ನು ಹೇಳಿಕೊಂಡಿರುವ ಮಹಿಳೆ, ಮನೆಗೆಲಸಕ್ಕೆ ನೇಮಿಸಿಕೊಳ್ಳುವಂತೆ ಅಥವಾ ಬೇರೆ ಎಲ್ಲಾದರೂ ಉದ್ಯೋಗ ಕೊಡಿಸುವಂತೆ ಕೇಳಿಕೊಂಡಿದ್ದಾರೆ.

ಮನೆಗೆಲಸಕ್ಕೆ ನೇಮಿಸಿಕೊಳ್ಳುವ ಬಗ್ಗೆ ಪತ್ನಿಯ ಒಪ್ಪಿಗೆ ಪಡೆಯಬೇಕಿದೆ ಎಂದು ಆಕೆಯನ್ನು ನಂಬಿಸಿ, ಕಾರಿನಲ್ಲಿ ಮನೆಗೆ ಕರೆದೊಯ್ದಿದ್ದಾನೆ. ಮನೆಯಲ್ಲಿ ಯಾರೂ ಇರಲಿಲ್ಲವಾದ್ದರಿಂದ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೂರ್ವ ವಲಯದ ಜಂಟಿ ಪೊಲೀಸ್ ಆಯುಕ್ತ ರವೀಂದ್ರ ಯಾದವ್ ವಿವರಿಸಿದ್ದಾರೆ.

ಕೋರ್ಟ್ ಆವರಣದಲ್ಲಿ ಆರೋಪಿ ಮಹಿಳೆಯನ್ನು ಇಳಿಸಿ ಪರಾರಿಯಾಗಿದ್ದು, ತೀವ್ರ ನೋವಿನಿಂದ ಬಳಲುತ್ತಿದ್ದ ಮಹಿಳೆ ಸರ್ಕಾರಿ ಆಸ್ಪತ್ರೆ ಸೇರಿದ್ದಾರೆ. ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ವೈದ್ಯರ ಗಮನಕ್ಕೆ ಬಂದು ಪೊಲೀಸರಿಗೆ ವಿಷಯ ತಿಳಿಸಿದರು.

ಪೊಲೀಸರು ಆಗಮಿಸಿ ಘಟನೆ ವಿವರ ಕೇಳಿದಾಗ ಏನೂ ನೆನಪಿಸಿಕೊಳ್ಳುವ ಸ್ಥಿತಿಯಲ್ಲಿ ಮಹಿಳೆ ಇರಲಿಲ್ಲ. ಆಪ್ತ ಸಮಾಲೋಚನೆ ನಡೆಸಿದ ಬಳಿಕ ಘಟನೆಯ ಬಿಡಿ ವಿವರಗಳನ್ನು ನೀಡಿದರು. ಅತ್ಯಾಚಾರ ಎಸಗಿದ ಅಪಾರ್ಟ್‌ಮೆಂಟ್ ಪತ್ತೆ ಮಾಡುವಲ್ಲಿ ಮಹಿಳೆ ಯಶಸ್ವಿಯಾದರು. ಬಳಿಕ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News