ಜಾಧವ್ ತಾಯಿಗೆ ವೀಸಾ ಕುರಿತು ಸರ್ತಾಜ್‌ರಿಂದ ಉತ್ತರವಿಲ್ಲ: ಸುಷ್ಮಾ

Update: 2017-07-10 11:41 GMT

ಹೊಸದಿಲ್ಲಿ,ಜು.10: ಬೇಹುಗಾರಿಕೆ ಆರೋಪದಲ್ಲಿ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯದಿಂದ ಮರಣದಂಡನೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ ಜಾಧವ್ ಅವರ ತಾಯಿಗೆ ವೀಸಾ ನೀಡುವಂತೆ ಕೋರಿ ಬರೆದಿರುವ ಪತ್ರಕ್ಕೆ ಪಾಕ್ ವಿದೇಶಾಂಗ ಸಚಿವ ಸರ್ತಾಜ್ ಅಝೀಝ್ ಅವರು ಈವರೆಗೂ ಉತ್ತರಿಸಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಸೋಮವಾರ ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ತನ್ನ ಪುತ್ರನನ್ನು ಭೇಟಿಯಾಗಲು ಬಯಸಿರುವ ಅವಂತಿಕಾ ಜಾಧವ್ ಅವರ ವೀಸಾ ಅರ್ಜಿ ಇನ್ನೂ ಬಾಕಿಯಿಳಿದಿದೆ ಎಂದ ಸುಷ್ಮಾ ಟ್ವೀಟಿಸಿದ್ದಾರೆ.

 ಭಾರತದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಬಯಸಿರುವ, ಬಾಯಿ ಕ್ಯಾನ್ಸರ್‌ನಿಂದ ನರಳುತ್ತಿರುವ ಪಾಕಿಸ್ತಾನಿ ಮಹಿಳೆಯೋರ್ವಳ ವೀಸಾ ಅರ್ಜಿಯನ್ನು ಭಾರತೀಯ ರಾಯಭಾರಿ ಕಚೇರಿಯು ತಿರಸ್ಕರಿಸಿದ್ದು, ಆಕೆ ಸುಷ್ಮಾರ ಮಧ್ಯಪ್ರವೇಶವನ್ನು ಕೋರಿ ಕಳೆದೆರಡು ದಿನಗಳಿಂದ ಟ್ವೀಟ್ ಮಾಡುತ್ತಿರುವ ಹಿನ್ನೆಲೆಯಲ್ಲಿ ‘‘ಭಾರತದಲ್ಲಿ ಚಿಕಿತ್ಸೆಗಾಗಿ ವೈದ್ಯಕೀಯ ವೀಸಾ ಬಯಸುತ್ತಿರುವ ಎಲ್ಲ ಪಾಕ್ ಪ್ರಜೆಗಳ ಕುರಿತು ನನಗೆ ಸಹಾನುಭೂತಿಯಿದೆ. ಆದರೆ ಈ ವೀಸಾಗಳನ್ನು ನೀಡಲು ಸರ್ತಾಜ್‌ರ ಶಿಫಾರಸು ಅಗತ್ಯವಿದೆ. ತನ್ನದೇ ದೇಶದ ಪ್ರಜೆಗಳಿಗೆ ವೀಸಾಕ್ಕಾಗಿ ಶಿಫಾರಸು ಮಾಡಲು ಅವರೇಕೆ ಹಿಂಜರಿಯುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ. ಶಿಫಾರಸು ಇರುವ ಅರ್ಜಿಗಳಿಗೆ ತಕ್ಷಣವೇ ವೀಸಾ ನೀಡಲಾಗುತ್ತದೆ ಎಂದೂ ಸುಷ್ಮಾ ಪ್ರತಿಕ್ರಿಯಿಸಿದ್ದಾರೆ.

ವೀಸಾ ಬೇಡಿಕೆ ಪ್ರಾಮಾಣಿಕ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಭಾರತವು ತುರ್ತು ವೈದ್ಯಕೀಯ ವೀಸಾ ಪಡೆಯಲು ಬಯಸುವ ಪಾಕ್ ಪ್ರಜೆಗಳು ಸರ್ತಾಜ್‌ರ ಶಿಫಾರಸು ಹೊಂದಿರುವುದನ್ನು ಕಳೆದ ಮೇ ತಿಂಗಳಿನಿಂದ ಕಡ್ಡಾಯಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News