ಸುಪ್ರೀಂ ಆದೇಶ ತಿರಸ್ಕರಿಸಿದ ಮಲ್ಯ

Update: 2017-07-11 03:51 GMT

ಹೊಸದಿಲ್ಲಿ, ಜು.11: ಬ್ಯಾಂಕ್‌ಗಳಿಗೆ 9,000 ಕೋಟಿ ರೂ. ವಂಚಿಸಿ ಇಂಗ್ಲೆಂಡಿಗೆ ಪಲಾಯನ ಮಾಡಿ ವಿಚಾರಣೆ ತಪ್ಪಿಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಮತ್ತೆ ಸುಪ್ರೀಂಕೋರ್ಟ್ ಆದೇಶ ಧಿಕ್ಕರಿಸಿದ್ದಾರೆ. ಸುಪ್ರೀಂಕೋರ್ಟ್ ಆದೇಶದ ಅನ್ವಯ ಸೋಮವಾರ ಮಲ್ಯ ಹಾಜರಾಗಬೇಕಿತ್ತು. ಸುಪ್ರೀಂಕೋರ್ಟ್ ನ್ಯಾಯಾಲಯ ನಿಂದನೆ ಪ್ರಕರಣದಲ್ಲಿ ಶಿಕ್ಷೆ ನಿರ್ಧರಿಸಲು, ಹಾಜರಾಗುವಂತೆ ಮಲ್ಯಗೆ ಸೂಚನೆ ನೀಡಿತ್ತು.

ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎ.ಕೆ.ಗೋಯಲ್ ಮತ್ತು ಯು.ಯು.ಲಲಿತ್ ಮೇ 9ರಂದು ಮಲ್ಯ ವಿರುದ್ಧ ನ್ಯಾಯಾಲಯ ನಿಂದನೆ ಪ್ರಕ್ರಿಯೆ ಆರಂಭಿಸಿದ್ದರು. ನ್ಯಾಯಾಲಯ ಆದೇಶಕ್ಕೆ ಅನುಗುಣವಾಗಿ ಎಲ್ಲ ಆಸ್ತಿಗಳನ್ನು ಪ್ರಾಮಾಣಿಕವಾಗಿ ಘೋಷಿಸದ ಮತ್ತು 40 ದಶಲಕ್ಷ ಡಾಲರ್ ಮೊತ್ತವನ್ನು ತಮ್ಮ ಕುಟುಂಬದ ಸದಸ್ಯರು ಹೊಂದಿರುವ ಸಾಗರೋತ್ತರ ಖಾತೆಗಳಿಗೆ ವರ್ಗಾಯಿಸಿದ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ಆರಂಭಿಸಿದ್ದರು. ಮಲ್ಯನಿಗೆ ಶಿಕ್ಷೆ ವಿಧಿಸುವ ಸಲುವಾಗಿ ಜುಲೈ 10ರಂದು ಕಲಾಪಕ್ಕೆ ಹಾಜರಾಗುವಂತೆ ಸೂಚಿಸಿತ್ತು.

ಮಲ್ಯ ಅಥವಾ ಮಲ್ಯ ಪರ ವಕೀಲರು ನ್ಯಾಯಾಲಯಕ್ಕೆ ಹಾಜರಾಗಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಜುಲೈ 14ಕ್ಕೆ ಮುಂದೂಡಲಾಗಿದೆ. ಕಿಂಗ್‌ಫಿಶರ್‌ನ ಮಾಲಕರಾಗಿದ್ದ ಮಲ್ಯ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಅಂದು ನಿರ್ಧರಿಸುವ ಸಾಧ್ಯತೆ ಇದೆ. ನ್ಯಾಯಾಲಯ ನಿಂದನೆ ಆರೋಪದಲ್ಲಿ ಮಲ್ಯಗೆ ನೋಟಿಸ್ ನೀಡಲು ಕೋರ್ಟ್ ಸೂಚಿಸಿತ್ತು. ಎಸ್‌ಬಿಐ ನೇತೃತ್ವದ 17 ಬ್ಯಾಂಕ್‌ಗಳು ವಂಚನೆ ಸಂಬಂಧ ನ್ಯಾಯಾಲಯ ನಿಂದನೆ ಆರೋಪ ಹೊರಿಸಿದ ಸಂಬಂಧ ಮಲ್ಯಗೆ ನೋಟಿಸ್ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News