ಜು.15: ತಾಲ್ಲೂಕು ಮಟ್ಟದ 3ನೇ ಮಕ್ಕಳ ಸಾಹಿತ್ಯ ಸಮ್ಮೇಳನ

Update: 2017-07-12 11:28 GMT

ಸಾಗರ, ಜು.12: ತಾಲ್ಲೂಕು ಮಟ್ಟದ 3ನೇ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಜು. 15ರಂದು ಶೃಂಗೇರಿ ಶಂಕರಮಠದ ಭಾರತೀತೀರ್ಥ ಸಭಾಭವನದಲ್ಲಿ ಆಯೋಜಿಸಲಾಗಿದೆ. ಬಾಲಪ್ರತಿಭೆ ಸಾನಿಧ್ಯ ಪಿ.ಎನ್. 3ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಪರಿಷತ್ ಒಮ್ಮತದಿಂದ ಆಯ್ಕೆ ಮಾಡಿದೆ ಎಂದು ಕಸಾಪ ಅಧ್ಯಕ್ಷ ಹಿತಕರ ಜೈನ್ ತಿಳಿಸಿದ್ದಾರೆ.

ಬುಧವಾರ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 9ಕ್ಕೆ ತಹಶೀಲ್ದಾರ್ ತುಷಾರ್ ಬಿ. ಹೊಸೂರು ರಾಷ್ಟ್ರಧ್ವಜರೋಹಣ ನೆರವೇರಿಸಿದರೆ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಲಿಂಗಪ್ಪ ನಾಡ ಧ್ವಜಾರೋಹಣ ಹಾಗೂ ಪರಿಷತ್ ಅಧ್ಯಕ್ಷ ಹಿತಕರ ಜೈನ್ ಪರಿಷತ್ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದರು.

ಬೆಳಿಗ್ಗೆ 10ಕ್ಕೆ ಸಮ್ಮೇಳನವನ್ನು ಸಾಹಿತಿ ಡಾ. ನಾ.ಡಿಸೋಜ ಉದ್ಘಾಟಿಸಲಿದ್ದಾರೆ. ಸಮ್ಮೇಳನಾಧ್ಯಕ್ಷೆ ಸಾನಿಧ್ಯ ಪಿ.ಎನ್., ಎರಡನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಅನೀಶ್ ಎಸ್. ಶರ್ಮ, ಒಂದನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಶ್ರಾವ್ಯ ಸಾಗರ್, ಸಾಹಿತಿ ಪ.ಬಂಗಾರಿ ಭಟ್ಟರು, ನಗರಸಭೆ ಅಧ್ಯಕ್ಷೆ ಉಷಾ ಎನ್., ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಪರಮೇಶ್ವರಪ್ಪ, ಶೃಂಗೇರಿ ಶಂಕರಮಠದ ಎಸ್.ಆರ್.ತಿಮ್ಮಪ್ಪ ಉಪಸ್ಥಿತರಿದ್ದು, ಎಸ್.ವಿ.ಹಿತಕರ ಜೈನ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಮಧ್ಯಾಹ್ನ 3ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಬಿ.ಶಂಕರಪ್ಪ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ತಾಲ್ಲೂಕು ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಲಿಂಗಪ್ಪ, ಪ್ರಭಾರ ಕಾರ್ಯನಿರ್ವಾಹಣಾಧಿಕಾರಿ ಡಾ. ಕಲ್ಲಪ್ಪ ಎಸ್., ಕ್ಷೇತ್ರ ಸಮನ್ವಯಾಧಿಕಾರಿ ಯೋಗೇಶ್, ಪರಿಷತ್‌ನ ಜಿಲ್ಲಾ ಉಪಾಧ್ಯಕ್ಷ ತಿರುಮಲ ಮಾವಿನಕುಳಿ ಉಪಸ್ಥಿತರಿದ್ದು, ಎಸ್.ವಿ.ಹಿತಕರ ಜೈನ್ ಅಧ್ಯಕ್ಷತೆ ವಹಿಸಲಿದ್ದಾರೆ.

ಸಾಹಿತ್ಯ ಸಮ್ಮೇಳನದ ಅಂಗವಾಗಿ ಗಾಯನ ಗೋಷ್ಠಿ, ಕಥಾ ಗೋಷ್ಠಿ, ಕವನ ಗೋಷ್ಠಿ, ಹಳಗನ್ನಡ ಗೋಷ್ಟಿಯನ್ನು ಆಯೋಜಿಸಲಾಗಿದೆ. ಸಾಹಿತಿ ಡಾ. ನಾ.ಡಿಸೋಜ ಮಾತನಾಡಿ, ಕಲೆ, ಸಾಹಿತ್ಯ, ಭಾಷಾ ಬೆಳವಣಿಗೆಯಲ್ಲಿ ಸಾಹಿತ್ಯ ಸಮ್ಮೇಳನ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳಲ್ಲಿ ಹುದುಗಿರುವ ಸಾಹಿತ್ಯ ಪ್ರತಿಭೆಯನ್ನು ಅಭಿವ್ಯಕ್ತಗೊಳಿಸಲು ಸಾಹಿತ್ಯ ಸಮ್ಮೇಳನ ಪೂರಕವಾಗಿದೆ. ತಾಲ್ಲೂಕಿನಲ್ಲಿ ಪ್ರತಿಭಾವಂತ ಮಕ್ಕಳಿದ್ದು, ಅವರಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಸುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಗೋಷ್ಟಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಲಿಂಗಪ್ಪ, ಪರಿಷತ್‌ನ ಕಾರ್ಯದರ್ಶಿ ಮೇಜರ್ ನಾಗರಾಜ್, ಕೋಶಾಧ್ಯಕ್ಷ ನಾರಾಯಣಮೂರ್ತಿ ಹಾಗೂ ಮಾಸೂರು ಶಿವಾನಂದ್, ಸಾಬ್‌ಜಾನ್ ಸಾಬ್, ವೆಂಕಟೇಶ್, ಎಂ.ಸಿ.ಪರಶುರಾಮಪ್ಪ ಇನ್ನಿತರರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News