ಪ್ಲಿಸ್ಕೋವಾ ವಿಶ್ವ ದ ನಂ.1 ಆಟಗಾರ್ತಿ

Update: 2017-07-12 18:44 GMT

ಲಂಡನ್, ಜು.12: ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್ ವಿಂಬಲ್ಡನ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋತು ನಿರ್ಗಮಿಸಿರುವ ಹಿನ್ನೆಲೆಯಲ್ಲಿ ಝೆಕ್‌ನ ಕರೊಲಿನಾ ಪ್ಲಿಸ್ಕೋವಾ ಡಬ್ಲ್ಯುಟಿಎ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.
ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ರೊಮಾನಿಯದ ಸಿಮೊನಾ ಹಾಲೆಪ್ ಬ್ರಿಟನ್‌ನ ಜೊಹನ್ನಾ ಕೊಂಟಾಗೆ ಸೋತಿರುವುದು ಪ್ಲಿಸ್ಕೋವಾರ ನಂ.1 ಹಾದಿಯನ್ನು ಸುಗಮಗೊಳಿಸಿತು.

ಒಂದು ವೇಳೆ ಹಾಲೆಪ್ ಅವರು ಕೊಂಟಾರನ್ನು ಸೋಲಿಸಿದ್ದರೆ ನಂ.1 ಆಟಗಾರ್ತಿಯಾಗುತ್ತಿದ್ದರು.
ವಿಂಬಲ್ಡನ್‌ನಲ್ಲಿ 3ನೆ ಶ್ರೇಯಾಂಕದೊಂದಿಗೆ ಆಡಿರುವ ಪ್ಲಿಸ್ಕೋವಾ ಎರಡನೆ ಸುತ್ತಿನಲ್ಲಿ ರಿಬಾರಿಕೋವಾ ವಿರುದ್ಧ ಸೋತು ನಿರ್ಗಮಿಸಿದ್ದಾರೆ. ಈ ವರ್ಷದ ಫ್ರೆಂಚ್ ಓಪನ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದ ಹಿನ್ನೆಲೆಯಲ್ಲಿ ಪ್ಲಿಸ್ಕೋವಾ ನಂ.1 ಸ್ಥಾನಕ್ಕೆ ಅರ್ಹತೆ ಪಡೆದಿದ್ದಾರೆ. ಸೋಮವಾರ ಡಬ್ಲುಟಿಎ ರ್ಯಾಂಕಿಂಗ್ ಬಿಡುಗಡೆಯಾಗಲಿದೆ.

‘‘ನಾನೀಗ ವಿಶ್ವದ ನಂ.1 ಆಟಗಾರ್ತಿಯಾಗಿದ್ದೇನೆ. ಇದು ನನ್ನ ಪಾಲಿಗೆ ದೊಡ್ಡ ಸಾಧನೆ. ಈ ಸಾಧನೆ ಮಾಡುತ್ತೇನೆಂದು ಕನಸಿನಲ್ಲೂ ಯೋಚಿಸಿರಲಿಲ್ಲ’’ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪ್ಲಿಸ್ಕೋವಾ ಪ್ರತಿಕ್ರಿಯಿಸಿದ್ದಾರೆ.

ಪ್ಲಿಸ್ಕೋವಾ ಈತನಕ ಗ್ರಾನ್‌ಸ್ಲಾಮ್ ಪ್ರಶಸ್ತಿಯನ್ನು ಜಯಿಸದೇ ಇದ್ದರೂ 1975ರಲ್ಲಿ ರ್ಯಾಂಕಿಂಗ್ ಪದ್ಧತಿ ಆರಂಭವಾದ ಬಳಿಕ ನಂ.1 ಸ್ಥಾನಕ್ಕೇರಿದ ಝೆಕ್‌ನ ಮೊದಲ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾದರು.

18 ಗ್ರಾನ್‌ಸ್ಲಾಮ್ ಪ್ರಶಸ್ತಿ ವಿಜೇತೆ ಝೆಕ್ ಸಂಜಾತೆ ಮಾರ್ಟಿನಾ ನವ್ರಾಟಿಲೋವಾ 1978ರಲ್ಲಿ ನಂ.1 ಸ್ಥಾನಕ್ಕೇರಿದ್ದರು. ಆದರೆ ಆಗ ಅವರು ಅಮೆರಿಕವನ್ನು ಪ್ರತಿನಿಧಿಸುತ್ತಿದ್ದರು.

ಪ್ಲಿಸ್ಕೋವಾ ಈ ವರ್ಷ ಬ್ರಿಸ್ಬೇನ್, ದೋಹಾ ಹಾಗೂ ಈರ್ಸ್ಟ್‌ಬರ್ಗ್ ಓಪನ್ ಪ್ರಶಸ್ತಿಯನ್ನು ಜಯಿಸಿದ್ದರು. ಒಟ್ಟು 34 ವಾರಗಳ ಕಾಲ ನಂ.1 ಸ್ಥಾನದಲ್ಲಿದ್ದ ಕೆರ್ಬರ್ ವಿಂಬಲ್ಡನ್‌ನ ಫೈನಲ್‌ಗೆ ತಲುಪಿದ್ದರೆ ಅಗ್ರ ಸ್ಥಾನ ಉಳಿಸಿಕೊಳ್ಳಬಹುದಿತ್ತು. ಆದರೆ, ಅವರು ಕ್ವಾರ್ಟರ್ ಫೈನಲ್‌ನಲ್ಲಿ ಸ್ಪೇನ್‌ನ ಮುರುಗುಝ ವಿರುದ್ಧ ಸೋತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News