ಜೈಲಿನಲ್ಲಿ ವಿಶೇಷ ಅಡುಗೆ ಮನೆ ನಿರ್ಮಾಣಕ್ಕೆ 2 ಕೋ.ರೂ. ಲಂಚ ನೀಡಿದ್ದ ಶಶಿಕಲಾ!

Update: 2017-07-13 05:09 GMT

 ಚೆನ್ನೈ, ಜು.13: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟಿನಿಂದ 4 ವರ್ಷ ಜೈಲು ಸಜೆಗೆ ಗುರಿಯಾಗಿ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿರುವ ಎಐಎಡಿಎಂಕೆ ಮುಖ್ಯಸ್ಥೆ ವಿ.ಕೆ. ಶಶಿಕಲಾ ಜೈಲಿನಲ್ಲಿ ವಿಶೇಷ ಆತಿಥ್ಯ ಪಡೆಯುತ್ತಿದ್ದು, ಆಕೆಯ ಊಟೋಪಚಾರಕ್ಕೆ ಪ್ರತ್ಯೇಕ ಲಕ್ಸುರಿ ಅಡುಗೆ ಮನೆಯೊಂದನ್ನು ನಿರ್ಮಿಸಲಾಗಿದೆ. ಜೈಲಾಧಿಕಾರಿಗಳಿಗೆ ಜೈಲಿನ ನಿಯಮ ಉಲ್ಲಂಘನೆಯಾಗುತ್ತಿರುವುದು ಗೊತ್ತಿದ್ದರೂ ಮೌನವಹಿಸಿದ್ದಾರೆ ಎಂದು ಹಿರಿಯ ಜೈಲು ಅಧಿಕಾರಿ ಡಿ. ರೂಪಾ ಸಲ್ಲಿಸಿರುವ ವರದಿಯಲ್ಲಿ ಬಹಿರಂಗವಾಗಿದೆ.

ಜೈಲು ಪಾಲಾಗಿರುವ ಶಶಿಕಲಾ ಜೈಲಿನೊಳಗೆ ರಾಜಾತಿಥ್ಯ ಪಡೆಯಲು ಜೈಲು ಅಧಿಕಾರಿಗಳಿಗೆ 2 ಕೋ.ರೂ. ಲಂಚ ನೀಡಿದ್ದಾರೆ ಎಂದು ಇತ್ತೀಚೆಗೆ ಬಂಧಿಖಾನೆ ವಿಭಾಗಕ್ಕೆ ಡಿಐಜಿಯಾಗಿ ನೇಮಕಗೊಂಡಿದ್ದ ರೂಪಾ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.

ರಾಜ್ಯದ ಬಂಧಿಖಾನೆಯ ಪ್ರಧಾನ ನಿರ್ದೇಶಕ ಸತ್ಯನಾರಾಯಣ್ ರಾವ್ ಲಂಚದ ಫಲಾನುಭವಿಯಾಗಿದ್ದಾರೆಂದು ತಿಳಿದುಬಂದಿದೆ.

ಡಿ.ರೂಪಾ ಡಿಐಜಿ ಆಗಿ ಭಡ್ತಿ ಪಡೆದು ಕೆಲವೇ ವಾರಗಳ ಬಳಿಕ ಜು.10 ರಂದು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿಗೆ ಭೇಟಿ ನೀಡಿ ತಪಾಸಣೆ ನಡೆಸಿದ್ದರು.

ವಿಶೇಷವಾದ ಅಡುಗೆ ಮನೆ ನಿರ್ಮಾಣವಾಗಿರುವುದು ಗೊತ್ತಿದ್ದರೂ ಅದು ನಿರಾತಂಕವಾಗಿ ನಡೆಯುತ್ತಿದೆ. ಇದಕ್ಕಾಗಿ 2 ಕೋ.ರೂ.ಲಂಚ ನೀಡಲಾಗಿದೆ ಎಂಬ ವದಂತಿಯೂ ಇದೆ. ಇದರಲ್ಲಿ ನೀವು ಶಾಮೀಲಾಗಿರುವುದು ದುರದೃಷ್ಟಕರ... ತಪ್ಪಿತಸ್ಥ ಅಧಿಕಾರಿಗಳನ್ನು ಶಿಕ್ಷಿಸಬೇಕು ಎಂದು ಸತ್ಯನಾರಾಯಣ್ ರಾವ್‌ರೊಂದಿಗಿನ ಮಾತುಕತೆಯಲ್ಲಿ ಡಿ. ರೂಪಾ ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News