ಬಂದೂಕು, ಮಾರಕಾಸ್ತ್ರಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದ ಬಜರಂಗ ದಳ, ವಿಎಚ್ ಪಿ

Update: 2017-07-13 05:31 GMT

ಹೊಸದಿಲ್ಲಿ,ಜು.13 : ಅಮರನಾಥ ಯಾತ್ರಾರ್ಥಿಗಳಿದ್ದ ಬಸ್ ಮೇಲೆ ನಡೆದ ಉಗ್ರ ದಾಳಿ ಇಡೀ ದೇಶವನ್ನೇ ದುಃಖಕ್ಕೆ ದೂಡಿದೆ. ಈ ಉಗ್ರ ದಾಳಿಯನ್ನು ಹಲವರು ಟೀಕಿಸಿದ್ದರೆ ಕೆಲ ಹಿಂದೂ ಸಂಘಟನೆಗಳು ತಮ್ಮ ಆಕ್ರೋಶವನ್ನು ಬೇರೆಯೇ ರೀತಿಯಲ್ಲಿ ವ್ಯಕ್ತಪಡಿಸಿವೆ.

ಆಗ್ರಾದಲ್ಲಿ ಬಜರಂಗದಳ ಹಾಗೂ ವಿಶ್ವ ಹಿಂದು ಪರಿಷದ್ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಜನರು ಕೈಗಳಲ್ಲಿ ಪಿಸ್ತೂಲು, ರೈಫಲ್ ಹಾಗೂ ಕತ್ತಿಗಳನ್ನು ಝಳಪಿಸಿದರು.

``ಕೇಂದ್ರ ಸರಕಾರ ಅಮರನಾಥ ಯಾತ್ರಾರ್ಥಿಗಳ ಮೇಲೆ ನಡೆದ ಉಗ್ರ ದಾಳಿಗೆ 15 ದಿನಗಳೊಳಗಾಗಿ ಪ್ರತೀಕಾರ ತೀರಿಸದೇ ಇದ್ದರೆ ಯಾತ್ರಾರ್ಥಿಗಳನ್ನು ರಕ್ಷಿಸಲು ಬಜರಂಗದಳ ಕಾನೂನನ್ನು ಕೈಗೆತ್ತಿಕೊಳ್ಳುವುದು,'' ಎಂದು ಬಜರಂಗದಳ ನಾಯಕ ಗೋವಿಂದ್ ಪರಾಶರ್ ತಿಳಿಸಿದ್ದಾರೆ.

ಇನ್ನೊಂದು ಪ್ರತಿಭಟನೆಯಲ್ಲಿ ಬಜರಂಗದಳ ಕಾರ್ಯಕರ್ತ ದಿಗ್ವಿಜಯನಾಥ ತಿವಾರಿ ಹಜ್ ಯಾತ್ರೆಯನ್ನು ವಿರೋಧಿಸಿ ಹೇಳಿಕೆ ನೀಡಿದ್ದರು. ಕೇಂದ್ರವು ಉಗ್ರವಾದದ ವಿರುದ್ಧ ನೇರ ಕ್ರಮ ಕೈಗೊಳ್ಳಬೇಕು, ಇಲ್ಲದೇ ಹೋದರೆ ಬಜರಂಗದಳ ಹಾಗೂ ವಿ.ಹಿಂ.ಪ ಹಜ್ ಯಾತ್ರೆಯನ್ನು ವಿರೋಧಿಸುವುದಾಗಿ ತಿವಾರಿ ಹೇಳಿದ್ದಾರೆಂದು ಕೆಲ ವರದಿಗಳು ತಿಳಿಸಿವೆ.

ಪ್ರತಿಭಟನಾಕಾರರು ಪಾಕಿಸ್ತಾನ ವಿರೋಧಿ ಘೋಷಣೆಗಳನ್ನು ಕೂಗಿದರಲ್ಲದೆ  ಪ್ರತಿಕೃತಿಗಳನ್ನೂ ಸುಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News