ಬೀಫ್ ಇತ್ತು ಎಂದು ಗೋರಕ್ಷಕರಿಂದ ಪೆಟ್ಟು ತಿಂದ ಮುಸ್ಲಿಂ ಬಿಜೆಪಿ ನಾಯಕ !

Update: 2017-07-14 03:50 GMT

ಮುಂಬೈ, ಜು.14: ಬೀಫ್ ಸಾಗಿಸುತ್ತಿದ್ದರು ಎಂಬ ಶಂಕೆಯಿಂದ ಸ್ವಯಂ ಘೋಷಿತ ಗೋರಕ್ಷಕರಿಂದ ಬುಧವಾರ ಸಂಜೆ ಮಹಾರಾಷ್ಟ್ರದ ಜಲಾಲ್‌ಖೇಡ ಎಂಬಲ್ಲಿ ಹಲ್ಲೆಗೀಡಾದ ಮುಸ್ಲಿಂ ವ್ಯಕ್ತಿ ಆಡಳಿತಾರೂಢ ಬಿಜೆಪಿ ಮುಖಂಡ ಎನ್ನುವುದು ಇದೀಗ ಬಹಿರಂಗವಾಗಿದೆ.

ಕಟೋಲ್ ನಿವಾಸಿ ಸಲೀಂ ಇಸ್ಲಾಯಿಲ್ ಶಾ (36) ಅವರನ್ನು ಘಟನೆಯ ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಲ್ಲೆಗೆ ಸಂಬಂಧಿಸಿದಂತೆ ನಾಗ್ಪುರ ಪೊಲೀಸರು ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ. ರಾಜ್ಯದಲ್ಲಿ ಸ್ವಯಂ ಘೋಷಿತ ಗೋರಕ್ಷಕರು ನಡೆಸುತ್ತಿರುವ ಇತ್ತೀಚಿನ ದಾಳಿ ಇದಾಗಿದೆ.

ಶಾ ಅವರು ಬಿಜೆಪಿಯ ಕಟೋಲ್ ತಾಲೂಕು ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಎನ್ನಲಾಗಿದೆ.
ಅಮರಾವತಿ ಜಿಲ್ಲೆಯ ಅಮ್ನೋರ್ ಎಂಬ ಗ್ರಾಮದಿಂದ, ಸಮಾರಂಭಕ್ಕಾಗಿ ಮಾಂಸ ಖರೀದಿಸಿಕೊಂಡು ಕಟೋಲ್‌ಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಈ ಹಲ್ಲೆ ನಡೆದಿತ್ತು. ದಾರಿ ಮಧ್ಯದಲ್ಲಿ ತಡೆದ ಗೋ ರಕ್ಷಕರು, ಬೀಫ್ ಸಾಗಿಸುತ್ತಿದ್ದೀರಿ ಎಂಬ ಆರೋಪವನ್ನು ಶಾ ಅವರ ಮೇಲೆ ಹೊರಿಸಿ, ಹಲ್ಲೆ ನಡೆಸಿದ್ದರು.

ತಮ್ಮಲ್ಲಿರುವುದು ಮಾಂಸವೇ ಹೊರತು ಬೀಫ್ ಅಲ್ಲ ಎಂದು ಮನವರಿಕೆ ಮಾಡಲು ಮುಂದಾದರೂ, ಕೇಳದೇ ಹಲ್ಲೆ ನಡೆಸಿದ್ದಾರೆ. ದಾರಿ ಹೋಕರು ಕೂಡಾ ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಳ್ಳುತ್ತಿದ್ದರೇ ವಿನಃ ನೆರವಿಗೆ ಬರಲಿಲ್ಲ ಎಂದು ಹೇಳಲಾಗಿದೆ. ಕೊನೆಗೆ ಆರೋಪಿಯೊಬ್ಬ ಶಾ ಅವರ ವಾಹನವನ್ನು ಅವರತ್ತ ಎಸೆದ ಎಂದು ತಿಳಿದುಬಂದಿದೆ. ಈ ಹಂತದಲ್ಲಿ ಪೊಲೀಸರು ಮಧ್ಯಪ್ರವೇಶಿಸಿ, ಶಾ ಅವರನ್ನು ಆಸ್ಪತ್ರೆಗೆ ಸೇರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News