ಶೋಷಿತರ ಪರವಾಗಿ ಮಿಡಿವ ಕತೆಗಳು

Update: 2017-07-14 18:35 GMT

2012ರ ಸಾಲಿನ ಕೇಂದ್ರ ಸಾಹಿತ್ಯ ಯುವ ಪುರಸ್ಕಾರ ಪಡೆದ ತೆಲುಗು ಯುವ ಲೇಖಕ ವೇಂಪಲ್ಲಿ ಶರೀಫ್ ಅವರ ಕಥಾ ಸಂಕಲನ ‘ಜುಮ್ಮಾ’. ಸೃಜನ್ ಅವರು ಇದನ್ನು ಕನ್ನಡಕ್ಕೆ ತಂದಿದ್ದಾರೆ. ಶೋಷಿತ ಸಮುದಾಯದ ಪರವಾಗಿ ಮಿಡಿಯುವ ಇಲ್ಲಿರುವ ಕತೆಗಳು, ಸಮುದಾಯದೊಳಗಿನ ಶೋಷಣೆ ನೋವನ್ನು ಆರ್ದ್ರವಾಗಿ ಕಟ್ಟಿಕೊಡುವ ಕೆಲಸವನ್ನು ಮಾಡುತ್ತದೆ. ಇಲ್ಲಿ ಒಟ್ಟು 13 ಕತೆಗಳಿವೆ. ಯಾವುದೂ ಸುದೀರ್ಘವಾಗಿಲ್ಲ. ಆದರೆ ನಮ್ಮ ಆಳವನ್ನು ಕಲಕುವ ಶಕ್ತಿಯನ್ನು ಹೊಂದಿವೆ. ರಾಯಲ ಸೀಮ ಎಂಬ ವಿಕ್ಷಿಪ್ತ ನೆಲದ ಮುಸ್ಲಿಂ ಸಂವೇದನೆಯ ಕತೆಗಳಿವೆ. ಸಾಧಾರಣವಾಗಿ ಮುಸ್ಲಿಮರು ಎನ್ನುವಾಗ ಅವರ ಸಂವೇದನೆಗಳೆಲ್ಲ ಒಂದೇ ಧಾಟಿಯವುಗಳು ಎನ್ನುವ ತಪ್ಪು ಕಲ್ಪನೆಯಿದೆ. ಪ್ರದೇಶದಿಂದ ಪ್ರದೇಶಕ್ಕೆ ಮುಸ್ಲಿಮ್ ಸಂವೇದನೆಗಳು ವೈವಿಧ್ಯಮಯವಾಗಿದೆ. ಅವರ ಭಾಷೆ, ಬದುಕು, ಶೈಲಿ ವಿಭಿನ್ನವಾಗಿವೆ. ನೋವುಗಳು, ಶೋಷಣೆಗಳೂ ಅಷ್ಟೇ. ಆದುದರಿಂದ ಆಂಧ್ರ ಭಾಗದ ಮುಸ್ಲಿಮರ ಬದುಕನ್ನು ಇಲ್ಲಿರುವ ಕತೆಗಳು ಭಿನ್ನವಾಗಿ ಕಟ್ಟಿಕೊಡುತ್ತವೆ. ಶ್ರೀಸಾಮಾನ್ಯರ ದೈನಂದಿನ ಕಷ್ಟ ಸುಖಗಳನ್ನೇ ಜೀವದ್ರವ್ಯವನ್ನಾಗಿ ಹೊಂದಿರುವ ಈ ಕತೆಗಳು, ಸಾಮಾನ್ಯರ ಬದುಕಿನ ಮೂಲಕವೇ ಅಸಾಧಾರಣ ಜೀವನ ಕಾಣ್ಕೆಗಳನ್ನು ಹೊರ ಹಾಕುವ ವಿವೇಕ ಹಾಗೂ ಗ್ರಹಿಕೆಯ ಗುಣವನ್ನು ಹೊಂದಿವೆ. ಪರದೆ ಕತೆಯ ಅಜ್ಜಿ, ಜುಮ್ಮಾ ಕತೆಯ ಅಮ್ಮ, ಪಚ್ಚೆ ರಂಗೋಲಿಯ ಅಕ್ಕ, ದೇವರು ಕತೆಯ ಗೌಸಿಯಾ ಪಾತ್ರಗಳು ಇದಕ್ಕೆ ಸಾಕ್ಷಿ. ಜುಮ್ಮಾ ಕತೆಯಲ್ಲಿ ಬಗಲಲ್ಲಿ ಬಾಂಬ್ ಬಿದ್ದರೂ ಅಲ್ಲಾಹ್‌ನನ್ನು ಶ್ರದ್ಧೆಯಿಂದ ಪ್ರಾರ್ಥಿಸಬೇಕು ಎಂದು ಹೇಳುವ ಅಮ್ಮನೇ, ಮಸೀದಿಯಲ್ಲಿ ನಿಜವಾಗಿಯೂ ಬಾಂಬ್ ಸ್ಫೋಟಗೊಂಡಾಗ ‘ಇನ್ನು ಮುಂದೆ ಆ ಮಸೀದಿಗೆ ಹೋಗಬೇಡ ಮಗನೇ’ ಎಂದು ಕೇಳಿಕೊಳ್ಳುವ ದೀನ ಧ್ವನಿ ಲೇಖಕನಿಗೆ ಬೆರಗು ತರಿಸುತ್ತವೆ. ಇಂತಹ ಬೆರಗುಗೊಳಿಸುವ ಆರ್ದ್ರ ಭಾವಗಳು ಅಲ್ಲಲ್ಲಿ ಜೀವ ವೀಣೆಯಾಗಿ ಮಿಡಿಯುತ್ತವೆ. ಧರ್ಮ, ಜಾತಿಗಳ ಮಿತಿಗಳನ್ನು ಹೇಳುತ್ತಾ ಆ ಗೋಡೆಯಾಚೆಯ ಮಾನವೀಯ ಕಳಕಳಿಗಾಗಿ ಇಲ್ಲಿರುವ ಪ್ರತಿ ಕತೆಗಳೂ ಗೋಗರೆ ಯುತ್ತವೆ. ಹೆಚ್ಚಿನ ಕತೆಗಳು ಒಂದು ರೀತಿಯ ಅಸಹಾಯಕತೆಯಲ್ಲಿ ತೆರೆದುಕೊಂಡವುಗಳಂತೆ ನಮಗೆ ಭಾಸವಾಗುತ್ತವೆ. ನವಕರ್ನಾಟಕ ಪ್ರಕಾಶನ ಹೊರತಂದಿರುವ ಕೃತಿಯ ಮುಖಬೆಲೆ 75 ರೂಪಾಯಿ. 

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News