ಕಾಶ್ಮೀರದ ಟ್ರಾಲ್‌ನಲ್ಲಿ ಗುಂಡಿನ ಕಾಳಗ ಮೂವರು ಭಯೋತ್ಪಾದಕರ ಹತ್ಯೆ

Update: 2017-07-15 14:46 GMT

ಶ್ರೀನನಗರ,ಜು.15: ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಸತೋರಾ ಪ್ರದೇಶದಲ್ಲಿ ಶನಿವಾರ ಭದ್ರತಾ ಪಡೆಗಳೊಂದಿಗೆ ಗುಂಡಿನ ಕಾಳಗದಲ್ಲಿ ಮೂವರು ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದಾರೆ. ಪ್ರದೇಶದಲ್ಲಿ ಇನ್ನೂ ಓರ್ವ ಭಯೋತ್ಪಾದಕ ಬಚ್ಚಿಟ್ಟುಕೊಂಡಿದ್ದಾನೆಂದು ಹೇಳಲಾಗಿದ್ದು,ಭದ್ರತಾ ಪಡೆಗಳು ತೀವ್ರ ಕಾರ್ಯಾಚರಣೆ ನಡೆಸುತ್ತಿವೆ. ಶುಕ್ರವಾರ ತಡರಾತ್ರಿ ಈ ಗುಂಡಿನ ಕಾಳಗ ಆರಂಭಗೊಂಡಿತ್ತು.

ಭಯೋತ್ಪಾದಕರು ಯಾವ ಸಂಘಟನೆಗೆ ಸೇರಿದವರು ಎನ್ನುವುದು ನಿಖರವಾಗಿ ಗೊತ್ತಾಗಿಲ್ಲ. ವಿದೇಶಿ ಭಯೋತ್ಪಾದಕರಾಗಿರಬಹುದು ಎಂದು ಶಂಕಿಸಲಾಗಿದೆ, ಜೈಷೆ ಮುಹಮ್ಮದ್‌ಗೆ ಸೇರಿದವರು ಆಗಿರುವ ಸಾಧ್ಯತೆಯೂ ಇದೆ ಎಂದು ಜಮ್ಮು-ಕಾಶ್ಮೀರ ಡಿಜಿಪಿ ಎಸ್.ಪಿ.ವೇದ್ ತಿಳಿಸಿದರು. ಗುಂಡಿನ ಕಾಳಗ ಮುಂದುವರಿದಿದ್ದು, ಕೆಲವು ಭಯೋತ್ಪಾದಕರು ಪ್ರದೇಶದಲ್ಲಿರುವ ಗುಹೆಯೊಂದನ್ನು ಸೇರಿಕೊಂಡಿರಬಹುದು ಎಂದರು.

 ಗುಂಡಿನ ಕಾಳಗದಲ್ಲಿ ಮೃತಪಟ್ಟಿರುವ ಮೂವರು ಭಯೋತ್ಪಾದಕರ ಪೈಕಿ ಓರ್ವನ ಶವವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಸತೋರಾದ ಅರಣ್ಯ ಪ್ರದೇಶದಲ್ಲಿ ಕೆಲವು ಉಗ್ರರಿರುವ ಮಾಹಿತಿ ಪಡೆದಿದ್ದ ಭದ್ರತಾ ಪಡೆಗಳು ಶುಕ್ರವಾರ ರಾತಿ ಅಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ತಡರಾತ್ರಿ ಭಯೋತ್ಪಾದಕರು ಅವರತ್ತ ಗುಂಡು ಹಾರಿಸಿದ್ದು,ಇದು ಗುಂಡಿನ ಕಾಳಗಕ್ಕೆ ನಾಂದಿ ಹಾಡಿತ್ತು.

ತನ್ಮಧ್ಯೆ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ಶನಿವಾರ ದಿಲ್ಲಿಯಲ್ಲಿ ಗೃಹಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News