ಅಕ್ರಮ ಗೋಸಾಗಾಟ, ಗೋಮಾಂಸ ಮಾರಾಟ : ಹಲವು ಪ್ರಕರಣಗಳು ದಾಖಲು

Update: 2017-07-15 11:37 GMT

ಚಿಕ್ಕಮಗಳೂರು, ಜು.15: ಜಿಲ್ಲೆಯಲ್ಲಿ ಇತ್ತೀಚಿಗೆ ಕೆಲವು ದಿನಗಳಲ್ಲಿ ಅಕ್ರಮ ಗೋಸಾಗಾಣಿಕೆ ಮತ್ತು ಗೋಮಾಂಸ ಮಾರಾಟದ ವಿರುದ್ಧ ನಾಲ್ಕು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ.

  ಕೊಪ್ಪ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ನಾರ್ವೆ ಗ್ರಾಮದಲ್ಲಿ ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ದನದ ಮಾಂಸವನ್ನು ಮಾರಾಟ ಮಾಡುತ್ತಿದ್ದ ಶ್ರೀಮತಿ ಕಮಲಾ(30) ಮತ್ತು ಶ್ರೀನಿವಾಸ(42) ಎಂಬವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು, ದನದ ಮಾಂಸವನ್ನು ಇಟ್ಟುಕೊಂಡಿದ್ದ ತಲಾ 1 ಕೆ.ಜಿ. ತೂಕದ 20 ಪ್ಲಾಸ್ಟಿಕ್ ಬ್ಯಾಗ್‍ಗಳನ್ನು ವಶಪಡಿಸಿಕೊಂಡಿದ್ದು, ಕೊಪ್ಪ ಪೊಲೀಸ್ ಠಾಣೆಯಲ್ಲಿ ಮೊ. ನಂ. 60/17ಯಂತೆ ಪ್ರಕರಣ ದಾಖಲಿಸಲಾಗಿದೆ.

  ಶುಕ್ರವಾರ ರಾತ್ರಿ ಖಚಿತ ಮಾಹಿತಿ ಮೇರೆಗೆ, ಎನ್.ಹೆಚ್.-206 ರಸ್ತೆ ಮುಖೇನ ಚನ್ನರಾಯಪಟ್ಟಣದಿಂದ ಹುಬ್ಬಳ್ಳಿಗೆ ಕೆಎ 27 ಬಿ 3426 ನಂಬರಿನ ಕಂಟೈನರ್ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದವರನ್ನು ಕಡೂರು ಪಟ್ಟಣದ ಎ.ಪಿ.ಎಂ.ಸಿ. ಹತ್ತಿರ ವಾಹನವನ್ನು ಅಡ್ಡಗಟ್ಟಿ ನಿಲ್ಲಿಸಲಾಯಿತು. ವಾಹನದಲ್ಲಿ ಅಕ್ರಮ ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿದ್ದ ಚಾಲಕ ದಾರವಾಡ ಜಿಲ್ಲೆಯ ಕೃಷ್ಣ(50) ಮತ್ತು ಕೆಲಸಗಾರ ಬಸಂತಪ್ಪ(28) ಎಂಬವರನ್ನು ವಾಹನ ಸಮೇತ ವಶಕ್ಕೆ ತೆಗೆದುಕೊಂಡು, ವಾಹನದಲ್ಲಿದ್ದ 13 ಜಾನುವಾರಗಳನ್ನು ವಶಪಡಿಸಿಕೊಂಡು ಕಡೂರು ಪೊಲೀಸ್ ಠಾಣಾ ಪ್ರಕರಣ ದಾಖಲಿಸಲಾಗಿದೆ.

ಶನಿವಾರ ಬೆಳಗ್ಗಿನ ಜಾವ ಚಿಕ್ಕಮಗಳೂರು ಪಟ್ಟಣದ ತಮಿಳು ಕಾಲೋನಿಯಲ್ಲಿ ಯಾವುದೇ ಪರವಾನಗಿ ಇಲ್ಲದೇ ಗೋಮಾಂಸವನ್ನು ಮಾರಾಟ ಮಾಡುತ್ತಿದ್ದ ಸ್ಥಳೀಯ ನಿವಾಸಿಗಳಾದ ಇಕ್ಬಾಲ್ (47) ಮತ್ತು ಸಲ್ಮಾನ್ (23) ಎಂಬುವವರುಗಳನ್ನು ಪೊಲೀಸರು ದಾಳಿ ಮಾಡಿ ವಶಕ್ಕೆ ತೆಗೆದುಕೊಂಡು, ಅವರುಗಳಿಂದ 48 ಕೆ.ಜಿ. ಗೋಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ಮೊ. ನಂ. 191/17 ಅನ್ವಯ ಪ್ರಕರಣ ದಾಖಲಿಸಲಾಗಿದೆ.

  ಬಾಳೂರು ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಮಾಲಿಗನಾಡು ಗ್ರಾಮದಿಂದ 2 ಎಮ್ಮೆ, 2 ದನ, ಒಂದು ಹಸು ಮತ್ತು ಒಂದು ಕರು ವನ್ನು ಕಳವು ಮಾಡಿಕೊಂಡು ಸಾಗಾಣಿಕೆ ಮಾಡುತ್ತಿದ್ದ 4 ಜನ ವ್ಯಕ್ತಿಗಳನ್ನು ಗ್ರಾಮಸ್ಥರುಗಳು ಹಿಡಿದು ಪೊಲೀಸರಿಗೆ ನೀಡಿದ್ದಾರೆ. ಪೊಲೀಸರು ಆರೋಪಿಗಳಾದ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಗೋಪಾಲ (43), ಇಮ್ರಾನ್ (23), ಸಮೀರ್ (24), ಸಾದಿಕ್ (20) ಎಂಬವರನ್ನು ವಾಹನಗಳ ಸಮೇತ ವಶಕ್ಕೆ ತೆಗೆದುಕೊಂಡಿದ್ದಾರೆ. ಇನ್ನೋರ್ವ ಆರೋಪಿ ಕೊಟ್ಟಿಗೆಹಾರದ ರಘು ಪರಾರಿಯಾಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News